ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿರುವ ಮಾತುಗಳು ಇತಿಹಾಸದ ಅರಿವಿಲ್ಲದ ಮಾತುಗಳಾಗಿವೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಬಸವಣ್ಣನವರ ಜನ್ಮಭೂಮಿಯಾದ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದ ಯತ್ನಾಳ ಅವರು ಬಸವಣ್ಣನವರ ಕುರಿತು ಇಂತಹ ಮಾತುಗಳು ಆಡುವುದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.
‘ಇಂದು ಬಸವಣ್ಣನವರ ತತ್ವಗಳನ್ನು ಜಗತ್ತೆ ಅನುಸರಿಸುತ್ತಿರುವ ಸಂದರ್ಭದಲ್ಲಿ ಬಸವಭೂಮಿಯಲ್ಲಿ ಹುಟ್ಟಿದ ಯತ್ನಾಳ ಅವರಿಗೆ ಬಸವಣ್ಣನವರ ಚರಿತ್ರೆ ಮತ್ತು ಸಿದ್ಧಾಂತಗಳು ಸರಿಯಾಗಿ ಗೊತ್ತಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ’ ಎಂದರು.
ಬಸವಪ್ರಜ್ಞೆಯನ್ನು ಬೆಳೆಸಿಕೊಂಡು ಬಸವಣ್ಣನವರ ನಿಜವಾದ ಚರಿತ್ರೆ ಅಧ್ಯಯನ ಮಾಡಬೇಕು. ಬಸವಣ್ಣನವರ ಕುರಿತು ಇಲ್ಲಸಲ್ಲದ ಮಾತುಗಳನ್ನು ಆಡಿ ಜನರ ಭಾವನೆಗೆ ಧಕ್ಕೆಯನ್ನುಂಟು ಮಾಡಬಾರದು ಎಂದು ಹೇಳುವ ಮೂಲಕ ಯತ್ನಾಳ ಅವರ ಹೇಳಿಕೆಯನ್ನು ಪಟ್ಟದ್ದೇವರು ತೀವ್ರವಾಗಿ ಖಂಡಿಸಿದ್ದಾರೆ.