ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುದ್ದಿನ್ನಿ ಗ್ರಾಮದಲ್ಲಿ ಮಂಗವೊಂದು ಸಾರ್ವಜನಿಕರಿಗೆ ಕಚ್ಚುವ ಮೂಲಕ ಭೀತಿಯನ್ನುಂಟುಮಾಡಿತ್ತು. ಅದನ್ನು ಗಂಗಾವತಿ ನುರಿತ ತಂಡವು ಸೆರೆಹಿಡಿದಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಕಳೆದ ಒಂದುವರೆ ತಿಂಗಳಿನಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಕಚ್ಚಿ ಗಾಯಗೊಳಿಸಿ ಕಿರಿಕಿರಿ ಉಂಟುಮಾಡಿತ್ತು. ಮನೆ ಮೇಲೆ ಬಟ್ಟೆ ಹಾಕಲು ಹೋದವರ ಮೇಲೆ ದಾಳಿ ಮಾಡಿ ಕೈ ಮುರಿದು ಗಂಭೀರ ಗಾಯಗೊಳಿಸಿತ್ತು.
ಈ ಬಗ್ಗೆ ಗ್ರಾಮದ ನಿವಾಸಿ ನಾಗರೆಡ್ಡೆಪ್ಪ ದೇವರಮನಿ ಮಾತನಾಡಿ, “ಶಾಲೆಯ ಮೈದಾನದಲ್ಲಿನ ಗಿಡಮರಗಳಲ್ಲಿ ಅತ್ತಿಂದಿತ್ತ ಜಿಗಿಯುತ್ತ, ಶಾಲೆ ಮಕ್ಕಳು ಹಾಲು ಕುಡಿಯುವ ಮತ್ತು ಊಟ ಮಾಡುವ ಸಂದರ್ಭದಲ್ಲಿ ಮಕ್ಕಳ ಮೇಲೆ ದಾಳಿ ಮಾಡಲು ಮುಂದಾಗುತ್ತಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಮದ್ದೂರು | ಮಣ್ಣಿನ ಆರೋಗ್ಯ, ರೈತರ ಕಲ್ಯಾಣಕ್ಕೆ ಸರ್ಕಾರ ಗಮನಹರಿಸಲಿ: ಚಂದನ್ ಗೌಡ
“ಗದ್ದೆಮ್ಮ ನಿಂಗಪ್ಪ ಎನ್ನುವ ಮಹಿಳೆ ಮನೆ ಮಾಳಿಗೆ ಮೇಲೆ ಒಣಸಿದ್ದ ಬಟ್ಟೆಗಳನ್ನು ತರಲು ಹೋದಾಗ ಮಂಗ ದಾಳಿ ಮಾಡಿದ್ದರಿಂದ ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದು ಕೈ ಮೂಳೆ ಮುರಿದುಕೊಂಡಿದ್ದಾರೆ. ಕಲ್ಲಪ್ಪ ಪೂಜಾರಿ ಎನ್ನುವವರ ಮೇಕೆ ಮೇಲೆ ದಾಳಿ ಮಾಡಿ ಸಾಯಿಸಿತ್ತು” ಎಂದರು.
“ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಾಗ ಎಚ್ಚೆತ್ತುಕೊಂಡು ಗಂಗಾವತಿ ನುರಿತ ತಂಡದ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ದಾಳಿಗೊಳಗಾದ ಸಂತ್ರಸ್ತ ಮಹಿಳೆಗೆ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.