ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತದಿಂದಾಗಿ ಭಾರೀ ಮಳೆಯಾಗುತ್ತಿದ್ದು, ಈಗಾಗಲೇ ತಮಿಳುನಾಡು ತತ್ತರಿಸಿಹೋಗಿದೆ. ಇದೀಗ, ಆಂಧ್ರ ಪ್ರದೇಶದಲ್ಲಿಯೂ ಮಳೆ ಅಬ್ಬರ ಹೆಚ್ಚಾಗಿದೆ. ಆಂಧ್ರದ ತಿರುಪತಿ, ತಿರುಮಲ, ರಾಯಲ್‌ಸೀಮಾ, ಕಡಲೂರು, ನೆಲ್ಲೂರು ಮತ್ತು ಪ್ರಕಾಶಂ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. 70/90 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಶುಕ್ರವಾರದಿಂದಲೂ ಆಂಧ್ರದಲ್ಲಿ ಮಳೆಯಾಗುತ್ತಿದೆ. ಭಾನುವಾರವೂ ಮುಂದುವರೆದಿದೆ. ಹಲವು ನಗರಗಳಲ್ಲಿ ವಸತಿ ಪ್ರದೇಶಗಳು ಜಾಲಾವೃತಗೊಂಡಿವೆ. ಕೃಷಿ ಭೂಮಿಗೂ ನೀರು ನುಗ್ಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕೇಳಿದೆ.
ಈಗಾಗಲೇ ತಮಿಳುನಾಡಿನಲ್ಲಿ ಮಳೆ ಅಬ್ಬರದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿ ಪ್ರದೇಶವೇ ಆಗಿರುವ ಚೆನ್ನೈನ ರಸ್ತೆಗಳಲ್ಲಿ ನೀರು ತುಂಬಿದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಆಸ್ಪತ್ರೆಗಳಿಗೂ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.
ಇನ್ನು, ಕರ್ನಾಟಕದಲ್ಲಿಯೂ ಸಾಧರಣ ಮಳೆಯಾಗುತ್ತಿದೆ. ಆದಾಗ್ಯೂ, ತುಮಕೂರು, ಕೊಡಗು, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.