ಕುಟುಂಬ ರಾಜಕಾರಣದ ವಿರುದ್ಧದ ನನ್ನ ಹೋರಾಟ, ನನ್ನ ಬದ್ಧತೆ ಅಚಲವಾಗಿ ಇರಲಿದೆ. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಉತ್ತರ ನೀಡುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಕುಟುಂಬದ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಿರುವ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದ ಬೆನ್ನಲ್ಲೇ ಅವರು ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
“ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ನಾನು ಉತ್ತರಿಸುತ್ತೇನೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಅವರ ಮುಂದೆ ತೆರದಿಡುವೆ. ಹಿಂದುತ್ವದ ಪರ ಹೋರಾಟ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ವಕ್ಫ್ ಸಂಬಂಧಿತ ಸಮಸ್ಯೆಗಳು ಹಾಗೂ ವಂಶ ರಾಜಕಾರಣದ ವಿರುದ್ಧದ ಹೋರಾಟ ಸಂಬಂಧ ನನ್ನ ಬದ್ಧತೆ ಅಚಲವಾಗಿ ಇರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ನಾಯಕತ್ವದ ಬಗ್ಗೆ ಬಹಿರಂಗ ಟೀಕೆ; ಶಾಸಕ ಯತ್ನಾಳ್‌ಗೆ ಶೋಕಾಸ್ ನೋಟಿಸ್
ಪಕ್ಷ ವಿರೋಧಿ ಚಟುವಟಿಕೆ, ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಸತತ ಹೇಳಿಕೆಗಳನ್ನು ನೀಡುವುದರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ಸೋಮವಾರ ನೋಟಿಸ್ ನೀಡಿದೆ. 10 ದಿನಗಳ ಒಳಗಾಗಿ ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಯತ್ನಾಳ್‌ಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ.