ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಮಳೆಯ ಅಬ್ಬರ ಹಲವೆಡೆ ನಿಂತಿಲ್ಲ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಫೆಂಗಲ್ ಚಂಡಮಾರುತದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬೆಂಗಳೂರು ಸುತ್ತ ಮುತ್ತಲಿನ ಜಿಲ್ಲೆಗಳ ರಾಗಿ ಮತ್ತು ಭತ್ತದ ಫಸಲು ರೈತರ ಮನೆ ಸೇರುವುದೇ ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ರೈತರು ಮತ್ತು ಅಧಿಕಾರಿ ವರ್ಗ ಏನು ಹೇಳುತ್ತಾರೆ ಎಂಬುದು ಇಲ್ಲಿದೆ...
ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದು, ನಿಧಾನವಾಗಿ ಚಳಿ ಕೂಡ ದೇಶಾದ್ಯಂತ ಆವರಿಸುತ್ತಿದ್ದರೂ ಇನ್ನೂ ಮಳೆಯ ಅಬ್ಬರ ಹಲವೆಡೆ ನಿಂತಿಲ್ಲ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ‘ಫೆಂಗಲ್’ ಚಂಡಮಾರುತದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬೆಂಗಳೂರು ಸುತ್ತ ಮುತ್ತಲಿನ ಜಿಲ್ಲೆಗಳ ರಾಗಿ ಮತ್ತು ಭತ್ತದ ಫಸಲು ರೈತರ ಮನೆ ಸೇರುವುದೇ ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಫೆಂಗಲ್ ಚಂಡಮಾರುತದಿಂದ ರಾಜ್ಯದ ಕೃಷಿ ಮೇಲೆ ನೇರ ಪರಿಣಾಮ ಬೀರಿದೆ. ಡಿಸೆಂಬರ್ 1 ರಿಂದ ಫೆಂಗಲ್ ಚಂಡಮಾರುತ ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ತಟ್ಟಿದೆ. ಬೆಂಗಳೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆ ದಿನವಿಡಿ ಸುರಿಯುತ್ತಿದೆ. ಇದರಿಂದ ರೈತ ಸಮೂಹ ಕಂಗಾಲಾಗಿದೆ.
ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಫೆಂಗಲ್ ಚಂಡಮಾರುತದ ನೇರ ಪರಿಣಾಮ ರೈತರಿಗೆ ತಟ್ಟಿದೆ. ಮುಖ್ಯವಾಗಿ ಭತ್ತ, ರಾಗಿ ಬೆಳೆಗಳು ಕಟಾವಿಗೆ ಬಂದಿದ್ದು, ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸನ್ನಿವೇಶ ನಿರ್ಮಾಣವಾಗಿದೆ.
ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ರಾಗಿ ಮತ್ತು ಭತ್ತದ ಬೆಳೆ ಕಟಾವಿಗೆ ಅಡ್ಡಿಪಡಿಸಿದೆ. ಕೆಲವೆಡೆ ಕಟಾವು ಕೂಡ ಮಾಡಲಾಗಿದೆ. ಕೃಷಿ ಕಾರ್ಮಿಕರ ಕೊರತೆ ಹಾಗೂ ಲಭ್ಯವಿರುವ ಕಾರ್ಮಿಕರು ಹೆಚ್ಚು ಕೂಲಿ ಕೇಳುತ್ತಿರುವುದರಿಂದ ರಾಗಿ, ಭತ್ತದ ಬೆಳೆಯನ್ನು ರಕ್ಷಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ.
ದಾಬಸ್ ಪೇಟೆಯ ಸೋಂಪುರ ಹೋಬಳಿಯಲ್ಲಿ ರಾಗಿ ಬೆಳೆ ಕಟಾವಿಗೆ ಬಂದಿದ್ದು, ಫೆಂಗಲ್ ಚಂಡಮಾರುತ ಭಾರೀ ಸಮಸ್ಯೆ ತಂದೊಡ್ಡಿದೆ. ಹಲವೆಡೆ ತೆನೆ ಕೊಯ್ದು ಹೊಲದಲ್ಲಿ ರಾಶಿ ಹಾಕಲಾಗಿದೆ. ಈಗ ಮಳೆ ಬರುತ್ತಿರುವುದರಿಂದ, ರೈತರು ತೆನೆ ರಾಶಿ ಮೇಲೆ ಟಾರ್ಪಾಲು ಹೊದಿಸಿದ್ದಾರೆ. ಅದು ಅಲ್ಲಿಯೇ ಮುಗ್ಗುಲು ಬೀಳಬಹುದು. ಬೆಳೆ ಕಟಾವಾಗದ ಹೊಲಗಳಲ್ಲಿ ತೆನೆ ಉದುರುತ್ತಿದೆ. ಇದು ಹೀಗೆ ಮುಂದುವರಿದರೆ ರಾಗಿ ಬೆಳೆ ಕೊಳೆಯಬಹುದು.
ಸೋಂಪುರ ಹೋಬಳಿಯಲ್ಲಿ ಈ ವರ್ಷ 5,072 ಹೆಕ್ಟೇರ್‌ನಲ್ಲಿ ರಾಗಿ, 64.06 ಹೆಕ್ಟೇರ್‌ನಲ್ಲಿ ತೊಗರಿ, 96 ಹೆಕ್ಟೇರ್‌ನಲ್ಲಿ ಅವರೆ ಬಿತ್ತನೆ ಆಗಿದೆ. ಅಕ್ಟೋಬರ್ ತಿಂಗಳಾಂತ್ಯದಲ್ಲಿ ನಿರಂತರವಾಗಿ ಮಳೆ ಸುರಿದ ಕಾರಣ, ಹಲವೆಡೆ ರಾಗಿ ಪೈರು ನೆಲಕ್ಕುರುಳಿದೆ. ಈ ಮಳೆಯಿಂದ ತುಸು ಇಳುವರಿ ಕುಂಠಿತವಾಗಿ, ಹುಲ್ಲು ಹಾಳಾಗಲು ಕಾರಣವಾಗುತ್ತದೆ ಎಂಬುದು ರೈತರ ಅಳಲು.

ಮಂಡ್ಯ ಜಿಲ್ಲೆಯ ರೈತ ಹೋರಾಟಗಾರ ನಲಿ ಕೃಷ್ಣ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಮಂಡ್ಯದಲ್ಲಿ ಬಹುತೇಕ ಭತ್ತದ ಬೆಳೆ ಕಟಾವಿಗೆ ಬಂದಿದೆ. ಅನೀರಿಕ್ಷಿತವಾಗಿ ಬಂದಿರುವ ಫೆಂಗಲ್ ಚಂಡಮಾರುತದಿಂದ ಭತ್ತವನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಕಷ್ಟವಾಗಿದೆ. ಎರಡು ದಿನದಿಂದ ಮಳೆ ಸುರಿಯುತ್ತಿದ್ದು, ಇದು ಹೀಗೆ ಮುಂದುವರಿದರೆ ಭತ್ತ ಪೂರ್ತಿ ನೆಲಕಚ್ಚಲಿದೆ. ಭತ್ತದ ಹುಲ್ಲು ಕೂಡ ಕೊಳೆತು ದನಗಳಿಗೆ ಮೇವು ಇಲ್ಲದಂತಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಜಿಲ್ಲೆಯಲ್ಲಿ ಶೇ.10 ರಷ್ಟು ಭತ್ತವನ್ನು ಕಟಾವು ಮಾಡಲಾಗಿದೆ. ಆದರೆ ಇದನ್ನು ರಕ್ಷಿಸುವುದು ರೈತರಿಗೆ ಬಹಳ ಕಷ್ಟವಾಗಿದೆ. ಜಿಲ್ಲಾಡಳಿತ ಈ ಮೊದಲೇ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಫೆಂಗಲ್ ಚಂಡಮಾರುತದ ಬಗ್ಗೆ ಡಂಗೂರ (ಟಾಮ್ ಟಾಮ್) ಸಾರಿದ್ದರೆ ಯಾವ ರೈತರು ಬೆಳೆ ಕಟಾವು ಮಾಡುತ್ತಿರಲಿಲ್ಲ. ಸಂಪೂರ್ಣವಾಗಿ ಸ್ಥಳೀಯ ಜಿಲ್ಲಾಡಳಿತ ಎಡವಿದೆ. ಕೃಷಿ ಇಲಾಖೆ ಇಂತಹ ಸಂದರ್ಭಗಳಲ್ಲಿ ನೆರವಿಗೆ ಬಾರದೇ ಇನ್ನ್ಯಾವ ಸಂದರ್ಭದಲ್ಲಿ ಬರುತ್ತದೆ? ಸಬ್ಸಿಡಿ ವಿತರಣೆ ಮಾಡುವುದಷ್ಟೇ ಕೃಷಿ ಇಲಾಖೆ ಕೆಲಸವಲ್ಲ. ಹವಾಮಾವ ವೈಪರೀತ್ಯಗಳ ಬಗ್ಗೆ ಮೊದಲೇ ರೈತರಿಗೆ ಮುನ್ನೆಚ್ಚರಿಕೆ ಕೊಡಬೇಕು. ಈ ವಿಚಾರದಲ್ಲಿ ಯಾವಾಗಲೂ ಸರ್ಕಾರಗಳು ಸೋತಿವೆ” ಎಂದರು.

ಶ್ರೀರಂಗಪಟ್ಟಣದ ರೈತ ಹೋರಾಟಗಾರ ಪಾಂಡು ಮಾತನಾಡಿ, “ಹಳ್ಳಿ ಪ್ರದೇಶಗಳಲ್ಲಿ ವೀಪರಿತ ಮಳೆಯಾಗುತ್ತಿದೆ. ಇನ್ನೂ ಐದು ದಿನ ಮಳೆ ಬರಲಿದೆ ಎಂದು ಹೇಳಲಾಗಿದೆ. ಇದು ಹೀಗೆ ಮುಂದುವರಿದರೆ ರಾಗಿ ಮತ್ತು ಭತ್ತದ ಬೆಳೆ ರೈತರ ಕೈಗೆ ಸಿಗುವುದಿಲ್ಲ. ಕೊನೆಗೆ ಹಸುಗಳಿಗೆ ಸಿಗುವ ಭತ್ತದ ಹುಲ್ಲು ಕೂಡ ಕೊಳೆತು ಹೋಗಲಿದೆ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, “ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಮೊದಲು ಭತ್ತ ಕಟಾವು ಆರಂಭವಾಗುತ್ತದೆ. ನಂತರ ಉಳಿದ ತಾಲ್ಲೂಕುಗಳಲ್ಲಿ ಕಟಾವು ಶುರುವಾಗುತ್ತದೆ. ಏಕಾಏಕಿ ಬಂದಿರುವ ಫೆಂಗಲ್ ಚಂಡಮಾರುತ ಇನ್ನೆರಡು ದಿನದಲ್ಲಿ ಕಡಿಮೆ ಆದರೆ ಭತ್ತ ಬೆಳೆಗೆ ಯಾವುದೇ ಹಾನಿಯಾಗಲ್ಲ. ಆದರೆ ಈ ಮಳೆ ಮುಂದುವರಿದರೆ ಸಮಸ್ಯೆ ಖಂಡಿತ ಆಗಲಿದೆ. ರಾಗಿ ಬೆಳೆ ಕಟಾವಿಗೆ 8-10 ದಿನ ಸಮಯವಿದೆ” ಎಂದು ತಿಳಿಸಿದರು.
“ಮಂಡ್ಯ ಜಿಲ್ಲೆಯಲ್ಲಿ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದಾರೆ. 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ನಮ್ಮ ಜಿಲ್ಲೆಯಲ್ಲಿ ರಾಗಿಗೆ ಯಾವುದೇ ಹಾನಿಯಾಗದು ಎಂಬ ನಿರೀಕ್ಷೆಯಿದೆ. 2021ರಲ್ಲೂ ಹೀಗೆ ಡಿಸೆಂಬರ್‌ನಲ್ಲಿ ಮಳೆಯಾಗಿತ್ತು. ಹಮಾಮಾನ ವೈಪರೀತ್ಯ ನಮ್ಮ ಮುಂದಿರುವ ದೊಡ್ಡ ಸವಾಲು. ಯಾವ ಸಂದರ್ಭದಲ್ಲಿ ಹೇಗೆಲ್ಲಾ ನಷ್ಟ ಮಾಡುತ್ತದೆ ಎಂಬುದನ್ನು ನಿರೀಕ್ಷೆ ಮಾಡಲಾಗದು. ಇದು ಬರೀ ನಮ್ಮ ರಾಜ್ಯದ ಕಥೆಯಲ್ಲಿ. ಬಹಳಷ್ಟು ರಾಜ್ಯಗಳಲ್ಲಿ ಪ್ರತಿ ವರ್ಷ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತವೆ” ಎಂದು ವಿವರಿಸಿದರು.

ರಾಮನಗರ ಜಿಲ್ಲೆಯ ರೈತ ಹೋರಾಟಗಾರ ಪುಟ್ಟಸ್ವಾಮಿ ಮಾತನಾಡಿ, “ಶೇ.30-40 ರಷ್ಟು ರಾಗಿ ಕಟಾವಾಗಿದೆ. ಆದರೆ ಇದನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಕಷ್ಟ. ಏಕೆಂದರೆ ಎಲ್ಲವೂ ಭೂಮಿಯಲ್ಲೇ ಇದೆ. ಇಡೀ ಭೂಮಿಗೆ ರೈತರು ಟಾರ್ಪಾಲು ಹೊದಿಸುವುದು ಅಸಾಧ್ಯ. ಇನ್ನುಳಿದ ಶೇ.60 ರಷ್ಟು ರಾಗಿ ಬೆಳೆ ಹೊಲದಲ್ಲಿ ನಿಂತಿದೆ. ಈ ಮಳೆ ಹೀಗೆ ಮುಂದುವರಿದರೆ ಯಾವ ರಾಗಿ ಬೆಳೆಯೂ ರೈತರ ಮನೆ ಸೇರಲ್ಲ” ಎಂದು ನೋವಿನಿಂದ ಹೇಳಿದರು.
ಸ್ಥಳೀಯ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪುಟ್ಟಸ್ವಾಮಿ, “ಕೃಷಿ ಅಧಿಕಾರಿಗಳು ಗಂಟೆ ಹೊಡಿ, ಸಂಬಳ ತಗೋ ಎಂಬುದಕ್ಕಷ್ಟೇ ಸೀಮಿತ. ಅವರಿಗೆ ರೈತರ ಕಷ್ಟ ಯಾಕೆ ಬೇಕು? ಕಳೆದ ವರ್ಷದ ಬರ ಪರಿಹಾರವೇ ನಮಗೆ ಇನ್ನೂ ಬಂದಿಲ್ಲ. ಈಗ ರಾಗಿ ಸಂಪೂರ್ಣ ಹಾಳಾದ ಮೇಲೆ ರೈತರು ಮತ್ತೆ ಸಂಕಟವನ್ನು ನುಂಗಿಕೊಳ್ಳಬೇಕು. ಪ್ರಾಮಾಣಿಕವಾಗಿ ಸರ್ವೇ ಮಾಡಿ ರಾಗಿ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿದರೆ ಅವರು ಅದೇ ರೈತರಿಗೆ ಮಾಡುವ ಉಪಕಾರ. ಇಲ್ಲಿಯ ಜನಪ್ರತಿನಿಧಿಗಳು ಶೋಕಿಯಲ್ಲಿ ಮುಳುಗಿದ್ದಾರೆ. ನಮ್ಮ ಕಷ್ಟ ನಮಗೆ. ಯಾವತ್ತು ರೈತರ ಸಮಸ್ಯೆಗಳಿಗೆ ಸರ್ಕಾರಗಳು ಪ್ರಾಮಾಣಿಕವಾಗಿ ಕಿವಿಯಾಗಿವೆ ಹೇಳಿ” ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಅಂಬಿಕಾ ಅವರನ್ನು ಈ ಬಗ್ಗೆ ಮಾತನಾಡಿಸಿದಾಗ, “ರಾಮನಗರ ಜಿಲ್ಲೆಯಲ್ಲಿ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ನಮ್ಮ ಜಿಲ್ಲೆಯಲ್ಲಿ ರಾಗಿ ಸಂಪೂರ್ಣವಾಗಿ ಕಟಾವಿಗೆ ಬಂದಿದ್ದು, ಫೆಂಗಲ್ ಚಂಡಮಾರುತದಿಂದ ಸಮಸ್ಯೆಯಾಗಿದೆ. ನಿನ್ನೆಯಿಂದ (ಭಾನುವಾರ) ಮಳೆ ಆರಂಭವಾಗಿದ್ದು, ಇದು ಮುಂದುವರಿದರೆ ಖಂಡಿತ ರಾಗಿ ಹಾಳಾಗಲಿದೆ. ರಾಗಿ ಕಟಾವು ಮಾಡದಂತೆ ಮುನ್ನೆಚ್ಚರಿಕೆ ಕೊಡಲಾಗಿದೆ. ಆದರೆ ಕಟಾವು ಅವಧಿ ಪೂರ್ಣಗೊಂಡಿದ್ದರಿಂದ ರೈತರು ಈಗಾಗಲೇ ಕಟಾವು ಆರಂಭಿಸಿದ್ದಾರೆ. ಬೇಗ ಮಳೆ ನಿಂತರೆ ಅಷ್ಟೇ ಬೆಳೆ ಕೈಗೆ ಸಿಗಲಿದೆ. ಇಲ್ಲದಿದ್ದರೆ ರಾಗಿ ಹೊಲದಲ್ಲೇ ಕೊಳೆತುಹೋಗಲಿದೆ” ಎಂದು ತಿಳಿಸಿದರು.
ರಾಮನಗರ ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದಕುಮಾರ್ ಮಾತನಾಡಿ, “ನಮ್ಮ ತಾಲ್ಲೂಕಿನಲ್ಲಿ 7,740 ಹೆಕ್ಟೇರ್ ಬಿತ್ತನೆಯಾಗಿದೆ. ಇದರಲ್ಲಿ 6,490 ಹೆಕ್ಟೇರ್‌ನಲ್ಲಿ ರಾಗಿ, 220 ಹೆಕ್ಟೇರ್‌ನಲ್ಲಿ ಭತ್ತ, 200 ಹೆಕ್ಟೇರ್‌ನಲ್ಲಿ ತೊಗರಿ, 260 ಹೆಕ್ಟೇರ್‌ನಲ್ಲಿ ಹುರುಳಿ, 300 ಹೆಕ್ಟೇರ್‌ನಲ್ಲಿ ಅಲಸಂಧಿ ಹಾಗೂ 250 ಹೆಕ್ಟೇರ್‌ನಲ್ಲಿ ಅವರೆ ಬೆಳೆಯಲಾಗಿದೆ. ರಾಗಿ ಮತ್ತು ಭತ್ತ ಕಟಾವಿಗೆ ಬಂದಿದ್ದು, ಮಳೆ ಹೀಗೆ ಮುಂದುವರಿದರೆ ಬೆಳೆ ನೆಲ ಕಚ್ಚಿ ನೀರು ನಿಂತು ರಾಗಿ ಕೊಳೆಯಲಿದೆ. ಕಟಾವಿಗೆ ಬಂದಿದ್ದರಿಂದ ಅನಿವಾರ್ಯವಾಗಿ ರೈತರು ಬೆಳೆ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಇಲಾಖೆಯಿಂದ ರೈತರಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದೇವೆ” ಎಂದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.