‘ಸಂವಿಧಾನ ಬದಲಿಸಬೇಕೆನ್ನುವ ಮಾತನ್ನು ನಾನು ಹೇಳಿಯೇ ಇಲ್ಲ’ವೆಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ(ಪೇಜಾವರ ಸ್ವಾಮಿ) ಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.
ಪೇಜಾವರರ ಸಂವಿಧಾನ ವಿರೋಧಿ ಕೇಳಿಕೆ ದೊಡ್ಡ ವಿವಾದದ ರೂಪ ಪಡೆದಿರುವುದರ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಂತ ಸಮಾವೇಶದಲ್ಲಿ ಸಂತರೆಲ್ಲಾ ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ಬಳಿಕ ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲೂ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖ ಇಲ್ಲ” ಎಂದು ಪ್ರತಿಪಾದಿಸಿದ್ದಾರೆ.
“ಆಡದೇ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮನ್ನು ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ” ಎಂದರು.
“ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ವಿವಾದವಾಗಿದ್ದು, ನಿರಾಧಾರ ಆರೋಪ ಸರಿಯಲ್ಲ. ಈ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಬೇಕಿತ್ತು. ಪತ್ರಿಕೆಯ ವರದಿಗಾರರಿಗೆ ನಾನು ಆಡದೆ ಇರುವ ಮಾತು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸವನ್ನು ಯಾರೂ ಮಾಡಬಾರದು” ಎಂದು ಕೋರಿದರು.
“ನಾನು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ. ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ. ಸಮಾಜದ ಎಲ್ಲ ವರ್ಗದ ಜತೆಗೆ ಪ್ರೀತಿ ಸಹಬಾಳ್ವೆಯಿಂದ ಇದ್ದೇನೆ. ಸಮಾಜದಲ್ಲಿ ನಿರಂತರವಾಗಿ ದುರ್ಬಲರ ಸೇವೆಯನ್ನು ಮಾಡುತ್ತಿದ್ದೇನೆ. ದಲಿತ ಕೇರಿ ಭೇಟಿ, ದುರ್ಬಲರಿಗೆ ಮನೆ ಕಟ್ಟಿಸಿ ಕೊಡುವುದು ಮಾಡುತ್ತಿದ್ದೇನೆ” ಎಂದು ಅವರು ವಿವರಿಸಿದರು.
“ಪೇಜಾವರ ಮಠ ಮತ್ತು ಸಂಘ ಸಂಸ್ಥೆಗಳು, ದಾನಿಗಳ ಮೂಲಕ ನಿರಂತರವಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿವೆ. ನಮ್ಮ ಮಾತಿನಿಂದ ಪ್ರೇರಣೆಗೊಂಡು ಅನೇಕ ಮಂದಿ ದುರ್ಬಲರಿಗೆ ಸೂರು ಕಟ್ಟಿಸಿಕೊಡುತ್ತಿದ್ದಾರೆ. ಇತ್ತೀಚಿಗೆ ₹16 ಲಕ್ಷ ವೆಚ್ಚದ 14 ಮನೆಗಳನ್ನು ಉದ್ಯಮಿಯೊಬ್ಬರ(ಎಚ್ ಎಸ್ ಶೆಟ್ಟಿ) ಮೂಲಕ ಕೊರಗರಿಗೆ ನೀಡಲಾಗಿದೆ. ಒಟ್ಟು ನೂರು ಮನೆಗಳನ್ನು ಕಟ್ಟಿಸಿಕೊಡುವುದಾಗಿ ಅವರೂ ಕೂಡಾ ಹೇಳಿದ್ದಾರೆ” ಎಂದರು.
“ಆಡಿದ ಮಾತಿಗೆ ವಿರೋಧಿಸಿ, ಆದರೆ ಆಡದೇ ಇರುವ ಮಾತಿಗೆ ವಿರೋಧ ಯಾಕೆ?. ನಾನು ಕಾನೂನು ಹೋರಾಟ ಮಾಡಬಹುದು. ಇದರ ಹೊರತಾಗಿಯೂ ನನಗೆ ಮಾಡಲು ಬೇರೆ ಸಾಕಷ್ಟು ಕೆಲಸಗಳಿವೆ. ದೇವರೇ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಲಿ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬಸವಣ್ಣನ ವಿರುದ್ಧ ಯತ್ನಾಳ್ ಅವಹೇಳನಕಾರಿ ಹೇಳಿಕೆ; ಶಾಸಕ ಸ್ಥಾನದಿಂದ ವಜಾಗೊಳಿಸಲು ಬಸವದಳ ಆಗ್ರಹ
“ಭಾರತ ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಜನಗಣತಿ ಹೇಳುವ ಪ್ರಕಾರ ಇದು ಹಿಂದೂಸ್ತಾನ. ಇಲ್ಲಿ ಹಿಂದುಗಳ ಭಾವನೆಗೆ ಬೆಲೆ ಕೊಡುವ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದು ಹೌದು. ಸಂವಿಧಾನವನ್ನು ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ನಾನು ಯಾವತ್ತೂ ಹೇಳಿಲ್ಲ” ಎಂದು ಪೇಜಾವರ ಶ್ರೀ ಪುನರುಚ್ಛರಿಸಿದರು.
“ಸಂವಿಧಾನ ಎಂಬ ಶಬ್ದವನ್ನೇ ನಾನು ಬಳಸಿಲ್ಲ. ಚುನಾಯಿತ ಸರ್ಕಾರ ಸರ್ವರ ಸರ್ಕಾರವಾಗಬೇಕು. ಎಲ್ಲ ಪ್ರಜೆಗಳನ್ನು ಏಕರೂಪವಾಗಿ ಕಾಣಬೇಕು. ಏಕಮತೀಯರನ್ನು ಓಲೈಸುವ ಪ್ರವೃತ್ತಿಯನ್ನು ನೋಡುತಿದ್ದೇವೆ. ಇದು ನಿಲ್ಲಬೇಕು” ಎಂದು ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.