ರಾಮಾಯಣ ನಾಟಕದಲ್ಲಿ ರಾಕ್ಷಸನ ಪಾತ್ರವನ್ನು ಮಾಡಿದ ರಂಗಭೂಮಿ ಕಲಾವಿದನೊಬ್ಬ ವೇದಿಕೆಯ ಮೇಲೆ ಜೀವಂತ ಹಂದಿಯ ಹೊಟ್ಟೆಯನ್ನು ಬಗೆದು ಮಾಂಸವನ್ನು ಕಿತ್ತು ತಿಂದಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.
ಈ ಸಂಬಂಧ ಕಲಾವಿದನ ಪಾತ್ರ ಮಾಡಿದ್ದ 45 ವರ್ಷದ ಬಿಂಬಾಧರ ಗೌಡ ಹಾಗೂ ಆಯೋಜಕರೊಬ್ಬರನ್ನು ಬಂಧಿಸಲಾಗಿದೆ. ನವೆಂಬರ್ 24 ರಂದು ಹಿಂಜಿಲಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಲಾಬ್ ಗ್ರಾಮದಲ್ಲಿ ನಡೆದ ನಡೆದ ರಾಮಾಯಣ ನಾಟಕದಲ್ಲಿ ಈ ಘಟನೆ ನಡೆದಿದೆ.
ಕಂಜಿಯಾನಲ್ ಯಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರ ಗುಂಪೊಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.
ನಾಟಕ ನೋಡಲು ಬಂದಿದ್ದ ಪ್ರೇಕ್ಷಕರನ್ನು ರಂಜಿಸುವ ನಿಟ್ಟಿನಲ್ಲಿ ವೇದಿಕೆಯಲ್ಲಿ ಜೀವಂತ ಹಾವು ಹಾಗೂ ಹಂದಿಯನ್ನು
ಪ್ರದರ್ಶಿಸಲಾಗಿತ್ತು. ಈ ವೇಳೆ ರಾಕ್ಷಸನ ಪಾತ್ರವನ್ನು ಮಾಡುತ್ತಿದ್ದ ಕಲಾವಿದ ಜೀವಂತ ಹಂದಿಯ ಹೊಟ್ಟೆಯನ್ನು ಚಾಕುವಿನಿಂದ ಸೀಳಿ, ಹಸಿ ಮಾಂಸವನ್ನು ಪ್ರೇಕ್ಷಕರ ಮುಂದೆಯೇ ವೇದಿಕೆಯಲ್ಲಿ ಸೇವಿಸಿದ್ದಾನೆ. ಹಂದಿಯನ್ನು ಹಗ್ಗದಿಂದ ಕಟ್ಟಿ ಇಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಬ್ಬರು ಕರೆ ಕೊಡುವುದು, ಇನ್ನೊಬ್ಬರು ಗೇಲಿ ಮಾಡುವುದು, ಏನಿದು ಮಕ್ಕಳಾಟ?
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತಾರೂಢ ಬಿಜೆಪಿ ಸದಸ್ಯರಾದ
ಬಾಬು ಸಿಂಗ್ ಮತ್ತು ಸನಾತನ ಬಿಜುಲಿ ಅವರು ವಿಧಾನಸಭೆಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇನ್ನೊಂದು ಕಡೆ ಪ್ರಾಣಿದಯಾ ಸಂಘದವರು ಕಲಾವಿದರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಪರಿಣಾಮ ಪ್ರಾಣಿಗಳ ಮೇಲಿನ ಕ್ರೌರ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿದ್ದಕ್ಕಾಗಿ ಸಂಬಂಧಪಟ್ಟ ಪೊಲೀಸರು ಕಲಾವಿದನನ್ನು ಬಂಧಿಸಿದ್ದಾರೆ. ”ನಾವು ಥಿಯೇಟರ್‌ನಲ್ಲಿ ಹಾವುಗಳನ್ನು ಪ್ರದರ್ಶಿಸಿದ ವ್ಯಕ್ತಿಗಳನ್ನು ಸಹ ಹುಡುಕುತ್ತಿದ್ದೇವೆ. ಅವರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಬರ್ಹಾಂಪುರ ವಿಭಾಗೀಯ ಅರಣ್ಯ ಅಧಿಕಾರಿ ಸನ್ನಿ ಖೋಕರ್ ಹೇಳಿದ್ದಾರೆ.