ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟಿನ್, ಪಟ್ಟಣ ಪ್ರದೇಶಗಳಿಗೆ ದುಡಿಯಲು ಬರುವ ಕೂಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಹಾಗೂ ನಿರ್ಗತಿಕರು ಯಾರೂ ಕೂಡಾ ಹಸಿವಿನಿಂದ ಕಂಗಾಲಾಗಬಾರದೆಂಬ ಉದ್ದೇಶದಿಂದ 2017ರಲ್ಲಿ ಜಾರಿಗೆ ತಂದ ಜನಪರ ಯೋಜನೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದೆ ಅರ್ಧಕ್ಕೆ ನಿಂತಿದ್ದು, ಸದ್ಯ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಜತೆಗೆ ಇಂದಿರಾ ಕ್ಯಾಂಟಿನ್ ಸ್ಥಳವನ್ನು ಜನರು ಶೌಚಕ್ಕೆ ಬಳಸಿಕೊಳ್ಳುತ್ತಿರುವುದು ಅಥಣಿ ಪಟ್ಟಣದ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಈ ಕುರಿತು ಸ್ಥಳೀಯ ಉಮರ್ ಸೈಯ್ಯದ್ ಮಾತನಾಡಿ, “ಸಿದ್ದರಾಮಯ್ಯನವರ ಕನಸು ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಶಾಸಕ ಲಕ್ಷ್ಮಣ್ ಸವದಿಯವರು ಅಥಣಿ ಪಟ್ಟಣಕ್ಕೆ ತರುವಲ್ಲಿ ಯಶಸ್ವಿಯಾದರೂ ಕೂಡಾ ಇಲ್ಲಿನ ಅಧಿಕಾರಿಗಳು ಜನಸಂದಣಿಯಿಲ್ಲದ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಬಸವೇಶ್ವರ ವೃತ್ತ, ಅನಂತಪುರ ವೃತ್ತ ಅಥವಾ ಅಂಬೇಡ್ಕರ್ ವೃತ್ತ ಪ್ರದೇಶದಲ್ಲಿ ನಿರ್ಮಾಣ ಮಾಡಬೇಕಿತ್ತು. ಇದರಿಂದ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ ಇಲ್ಲಿ ಜನ ಈ ಸ್ಥಳವನ್ನು ಶೌಚಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಜಿಕ ಹೋರಾಟಗಾರ ಶಿವಾನಂದ ಸೌಧಾಗರ ಈ ದಿನ.ಕಾಮ್ ಜೊತೆ ಮಾತನಾಡಿ, “ಅಥಣಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಸುಮಾರು ಶೇ.60ರಷ್ಟು ನಿರ್ಮಾಣವಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಆಯುವ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಉಪಹಾರ ಸಿಗುತ್ತದೆ. ಆದರೆ ಅಥಣಿ ಪಟ್ಟಣದಲ್ಲಿನ ಇಂದಿರಾ ಕ್ಯಾಂಟಿನ್ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದೆ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಆದಷ್ಟು ಸಾರ್ವಜನಿಕ ಪ್ರದೇಶದಲ್ಲಿ ನಿರ್ಮಾಣ ಮಾಡಲಿ” ಎಂದು ಹೇಳಿದ್ದಾರೆ.
“ಅಥಣಿ ಪಟ್ಟಣದಲ್ಲಿ ಸರ್ಕಾರ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಿದೆ. ಆದರೆ ಇನ್ನೂ ಪ್ರಾರಂಭವಾಗಿಲ್ಲ. ಇಂದು ಇಲ್ಲಿ ಜನ ಶೌಚಕ್ಕೆ ಬರುತ್ತಿದ್ದಾರೆ ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗಿದ್ದು ಸ್ಥಳೀಯ ಅಧಿಕಾರಿಗಳು ಆದಷ್ಟು ಬೇಗನೆ ಈ ಸಮಸ್ಯೆ ಪರಿಹರಿಸಬೇಕು” ಎಂದು ದಲಿತ ಸಂಘಟನೆಯ ತಾಲೂಕು ಸಂಚಾಲಕ ಪ್ರಕಾಶ್ ಕಾಂಬ್ಳೆ ಆಗ್ರಹಿಸಿದ್ದಾರೆ.
ಈ ಕುರಿತು ಅಥಣಿ ಪಟ್ಟಣದ ಪುರಸಭೆಯ ಅಧಿಕಾರಿಗಳನ್ನು ಈ ದಿ.ಕಾಮ್ ಸಂಪರ್ಕಿಸಿದಾಗ, “ಇಂದಿರಾ ಕ್ಯಾಂಟಿನ್ ನಿರ್ಮಾಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ರಾಜ್ಯಮಟ್ಟದ ಟೆಂಡರ್‌ನಲ್ಲಿದೆ” ಎಂದಷ್ಟೇ ತಿಳಿಸಿದ್ದಾರೆ. ಇಂದಿರಾ ಕ್ಯಾಂಟಿನ್ ಸುತ್ತಲೂ ಸ್ವಚ್ಛತೆ ಇಲ್ಲದಿರುವ ಕುರಿತು ಪ್ರಶ್ನಿಸಿದಾಗ ಸರಿಯಾಗಿ ಪ್ರತಿಕ್ರಿಯೆ ನೀಡಿರುವುದಿಲ್ಲ.
“ನಿತ್ಯವೂ ಅಥಣಿ ಪಟ್ಟಣಕ್ಕೆ ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟಿನ್ ಸೌಲಭ್ಯ ಸಿಗದಿರುವುದು ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು, 6 ತಿಂಗಳಿನಿಂದ ಅರ್ಧಕ್ಕೆ ನಿಂತಿರುವ ಇಂದಿರಾ ಕ್ಯಾಂಟಿನ್ ಆದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು