ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ತೆರವು ಆದೇಶವನ್ನು ಪ್ರಶ್ನಿಸಿ ವಿಹಂಗಮ ಹಾಲಿಡೇ ರೆಸಾರ್ಟ್ ಮಾಲೀಕರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದು, ಶಿವಮೊಗ್ಗ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿ ಒತ್ತುವರಿ ತೆರವು ಆದೇಶ ಎತ್ತಿಹಿಡಿದಿದ್ದಾರೆ.
ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ತೆರವು ಆದೇಶವನ್ನು ಪ್ರಶ್ನಿಸಿ ರೆಸಾರ್ಟ್ ಮಾಲೀಕರಾದ ಕೆ ಆರ್ ದಯಾನಂದ ಬಿನ್ ಕೆ ಎಸ್ ರಾಮಪ್ಪಗೌಡ ಹಾಗೂ ಕಾನಿನ ಕಡಿದಾಳ್ ಕೆ ಆರ್ ಡಿ ಕಾನಿನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿಲಾಗಿದೆ.
“ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ತೆರವು ಪ್ರಕರಣದಲ್ಲಿ ಪ್ರಶ್ನಿತ ಭೂಮಿಯು ಭಾರತೀಪುರ ಗ್ರಾಮದ ಭಾರತೀಪುರ ಕಿರು ಅರಣ್ಯದ ಗಡಿಯ ಒಳಗೆ ಇರುತ್ತದೆ ಎಂಬುದನ್ನು ಸಾಬೀತುಪಡಿಸುವಂತಹ ದಾಖಲೆಗಳನ್ನು ಒತ್ತುವರಿ ತೆರವು ಅದೇಶ ಹೊರಡಿಸುವ ಸಂದರ್ಭದಲ್ಲಿ ಪರಿಗಣಿಸಿ ಅರಣ್ಯವೆಂಬುದನ್ನು ಖಚಿತಪಡಿಸಿಕೊಳ್ಳಲಾಗಿರುತ್ತದೆ. ಒತ್ತುವರಿ ತೆರವು ಆದೇಶಕ್ಕೆ ಮುನ್ನ ಆಕ್ಷೇಪಣೆ ಸಲ್ಲಿಸಲು ಮೇಲ್ಮನವಿದಾರರಿಗೆ ಕಾಲವಕಾಶ ನೀಡಲಾಗಿರುತ್ತದೆ. ಅರಣ್ಯ ಸಂರಕ್ಷಣಾಧಿಕಾರಿಗಳ ವಿಚಾರಣೆಯ ವೇಳೆ ಮೇಲ್ಮನವಿದಾರರ ಲಿಖಿತ ಹೇಳಿಕೆಗಳಲ್ಲಿ ಮೇಲ್ಮನವಿದಾರರ ಅನುಭವದಲ್ಲಿರುವ 6ಎಕರೆ 30ಗುಂಟೆ ಒತ್ತುವರಿ ಭೂಮಿಗೆ ಯಾವುದೇ ಭೂ ಮಂಜೂರಾತಿ ದಾಖಲೆಗಳಿಲ್ಲವೆಂದು ಲಿಖಿತ ಹೇಳಿಕೆ ಸಲ್ಲಿಸಿರುತ್ತಾರೆ. ನಂತರದಲ್ಲಿಯೂ ಈ 6 ಎಕರೆ 30 ಗುಂಟೆ ಪ್ರದೇಶವು ಅರಣ್ಯವಲ್ಲವೆಂಬುದಕ್ಕೆ ಯಾವುದೇ ದಾಖಲೆ ಸಲ್ಲಿಸಿರುವುದಿಲ್ಲ. ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ಪ್ರಕರಣದ ಮೇಲ್ಮನವಿಯಲ್ಲಿ ಪ್ರಶ್ನಿಸಲ್ಪಟ್ಟ ಒತ್ತುವರಿ ತೆರವು ಆದೇಶವು ಸಂಪೂರ್ಣವಾಗಿ ಊರ್ಜಿತವಾಗುತ್ತದೆ” ಎಂದು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿಯಾಗಿದೆಯೆಂದು ಆಗ್ರಹಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೈಜ ಹೋರಾಟಗಾರ ವೇದಿಕೆಯ ಎಚ್ ಎಂ ವೆಂಕಟೇಶ್ ಅವರು ಸಚಿವ ಈಶ್ವರ್ ಖಂಡ್ರೆ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಅದರಂತೆ ಈ ದಿನ.ಕಾಮ್ ಇದರ ಕುರಿತು ಸುದೀರ್ಘ ವರದಿ ಮಾಡಿತ್ತು. ತೀರ್ಥಹಳ್ಳಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಒತ್ತುವರಿ ತೆರವು ಆದೇಶ ಹೊರಡಿಸಿದ್ದರು.
ಇದನ್ನೂ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ಆರೋಪ; ವಿಹಂಗಮ ಹಾಲಿಡೇ ರಿಟ್ರೀಟ್ ವಿರುದ್ಧ ಕ್ರಮ
ಒತ್ತುವರಿ ತೆರವು ಆದೇಶವನ್ನು ಪ್ರಶ್ನಿಸಿ ಕೆ ಆರ್ ದಯಾನಂದ ಬಿನ್ ಕೆ ಎಸ್ ರಾಮಪ್ಪಗೌಡ ಹಾಗೂ ಕಾನಿನ ಕಡಿದಾಳ್@ ಕೆ ಆರ್ ಡಿ ಕಾನಿನ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಮೇಲ್ಮನವಿ ಪ್ರಾಧಿಕಾರಿ ದೂರುದಾರರ ಮೇಲ್ಮನವಿಯನ್ನು ವಜಾಗೊಳಿಸಿದೆ.