ಮಾದಕ ವಸ್ತುಗಳ ನಿಗ್ರಹ ಮಾಡಲು ಪಣತೊಟ್ಟಿರುವ ತುರುವೇಕೆರೆ ತಾಲೂಕು ಆಡಳಿತ ಗಾಂಜಾ ಮಾರಾಟ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಗಾಂಜಾ ಮಾರಾಟ ಮತ್ತು ಸಂಗ್ರಹಣೆ ಮಾಡಿರುವ ಆರೋಪದಡಿ ಪಟ್ಟಣದ ಪೊಲೀಸರು ಮತ್ತು ತಾಲೂಕು ಅಬಕಾರಿ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಬಂಧಿಸಿದ್ದಾರೆ.
ತುರುವೇಕೆರೆ ಪಟ್ಟಣದ ದರ್ಶನ್, ತಿಲಕ್, ಹರ್ಷವರ್ಧನ, ಮಹಮದ್ ಖಲೀಲ್ ಮತ್ತು ತಾಲೂಕಿನ ಚಂದ್ರಮೋಹನ, ಮನು, ಪ್ರೀತಂ, ರಾಕೇಶ್(ತಿಪಟೂರು) ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆ ಗ್ರಾಮದ ನರೇಶ್ ಜಿ ಎಚ್ ಬಂಧಿತ ಆರೋಪಿಗಳಾಗಿದ್ದಾರೆ.
ಮಾದಕ ವಸ್ತುಗಳ ವ್ಯಸನಕ್ಕೆ ಯುವಕರು ಬಲಿಯಾಗಬಾರದು ಮತ್ತು ತಾಲೂಕಿನಲ್ಲಿ ಗಾಂಜಾ ಮಾರಾಟ ಜಾಲವನ್ನು ಬುಡಸಮೇತ ಕಿತ್ತುಹಾಕಬೇಕೆಂಬ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎನ್ ಎ ಕುಂಞ ಅಹಮದ್ ಮತ್ತು ತುರುವೇಕೆರೆ ಸಿಪಿಐ ಲೋಹಿತ್ ಹಾಗೂ ಪಿಎಸ್‌ಐಗಳಾದ ಪಾಂಡು ಮತ್ತು ಚಿತ್ತರಂಜನ್ ಅವರ ತಂಡ ರಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಗಂಭೀರವಾಗಿ ಕ್ರಮ ತೆಗೆದುಕೊಂಡಿದ್ದಾರೆ.
ತುರುವೇಕೆರೆ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡಿರುವ ಆರೋಪಿಗಳು ಪಕ್ಕದ ತಾಲೂಕುಗಳಿಂದ ಗಾಂಜಾ ಮಾರಾಟ ಮಾಡಲು ಬಂದು ಸಿಕ್ಕಿಬಿದ್ದಿರುವುದೇ ಹೆಚ್ಚಾಗಿದೆ. ಅವರುಗಳು ನೀಡಿರುವ ಮಾಹಿತಿಯನ್ನಾಧರಿಸಿಯೇ ತುರುವೇಕೆರೆಯ ಪೊಲೀಸ್ ತಂಡ ಬೇರೆ ಬೇರೆ ತಾಲೂಕುಗಳಲ್ಲಿ ದಾಳಿ ಮಾಡಿ ಅಲ್ಲಿನ ಆರೋಪಿಗಳನ್ನೂ ಕೂಡಾ ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕಳಪೆ ಗುಣಮಟ್ಟದ ಫರ್ನಿಚರ್ ಪೂರೈಕೆ; ಕಾರ್ಪೆಂಟರ್‌ಗೆ ₹20,000 ದಂಡ ವಿಧಿಸಿದ ನ್ಯಾಯಾಲಯ
“ಬಂಧಿತ ಆರೋಪಿಗಳಿಂದ ಸುಮಾರು 1 ಕೆಜಿಗೂ ಹೆಚ್ಚಿನ ಗಾಂಜಾ ಸೊಪ್ಪು ಮತ್ತು ಇನ್ನಿತರ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇವರ ಹಿಂದೆ ದೊಡ್ಡ ಜಾಲವೇ ಇರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಸಾಕಷ್ಟು ಆರೋಪಿಗಳು ಸಿಗುವ ಸಾಧ್ಯತೆ ಇದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವರದಿ : ಎಸ್ ನಾಗಭೂಷಣ್
