ಸಂಭಲ್‌ಗೆ ತೆರಳುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಮಾರ್ಗ ಮಧ್ಯೆ ತಡೆದಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, “ಲೋಕಸಭೆ ವಿಪಕ್ಷ ನಾಯಕನಾದ ನನ್ನ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗುತ್ತಿದೆ” ಎಂದು ದೂರಿದ್ದಾರೆ.
ಸಂಭಲ್‌ನಲ್ಲಿ ಸದ್ಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ಹಿನ್ನೆಲೆ ರಾಹುಲ್, ಪ್ರಿಯಾಂಕಾ ಗಾಂಧಿ ಅವರನ್ನು ಗಾಜಿಪುರ ಗಡಿಯಲ್ಲಿ ಜಿಲ್ಲೆಗೆ ತೆರಳುತ್ತಿದ್ದಾಗ ತಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಹುಲ್, ಪ್ರಿಯಾಂಕಾ ಮಾತ್ರವಲ್ಲದೆ ಇತರ ಹಿರಿಯ ಕಾಂಗ್ರೆಸ್ ನಾಯಕರು ಕೂಡಾ ಇಂದು ಬೆಳಿಗ್ಗೆ ಗಾಜಿಪುರ ಗಡಿಯನ್ನು ತಲುಪಿದ್ದರು. ಆದರೆ ಗಡಿಯಲ್ಲಿ ಸಂಭಲ್‌ಗೆ ಹೋಗುವವರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಹಾಗೆಯೇ ಭಾರೀ ಪೊಲೀಸ್ ಪಡೆಯನ್ನು ಗಡಿಯಲ್ಲಿ ನಿಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ಸಂಭಲ್ ವಿವಾದ ಮತ್ತು ರಾಜಕೀಯ ನಾಯಕರ ದ್ವೇಷ ರಾಜಕಾರಣ
“ನಾವು ರಾಹುಲ್ ಗಾಂಧಿ ಅವರಿಗೆ ಸಂಭಲ್‌ಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಅಲ್ಲಿ ನಿಷೇದಾಜ್ಞೆಯನ್ನು ಹೊರಡಿಸಲಾಗಿದೆ. ಪೊಲೀಸರು ರಾಹುಲ್ ಗಾಂಧಿ ಅವರನ್ನು ಗಡಿಯಲ್ಲಿಯೇ ತಡೆಯುತ್ತಾರೆ” ಎಂದು ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
VIDEO | A police official interacts with Leader of Opposition in Lok Sabha Rahul Gandhi (@RahulGandhi) and MP Priyanka Gandhi (@priyankagandhi) as they were stopped at Ghazipur border from proceeding to violence-hit Sambhal in Uttar Pradesh.#SambhalViolence #sambhalnews
— Press Trust of India (@PTI_News) December 4, 2024
(Full… pic.twitter.com/qC4jWwGiq5
ಒಬ್ಬನೇ ಹೋಗಲು ಸಿದ್ಧ: ರಾಹುಲ್ ಗಾಂಧಿ
ಇನ್ನು ತಮ್ಮನ್ನು ಪೊಲೀಸರು ತಡೆ ಹಿಡಿದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, “ನಾವು ಸಂಭಲ್‌ಗೆ ಹೋಗುವ ಪ್ರಯತ್ನ ಮಾಡಿದೆವು. ಆದರೆ ನಮ್ಮನ್ನು ತಡೆಯಲಾಗಿದೆ. ಲೋಕಸಭೆಯ ವಿಪಕ್ಷ ನಾಯಕನಾಗಿ ಸಂಭಲ್‌ಗೆ ಭೇಟಿ ನೀಡುವುದು ನನ್ನ ಹಕ್ಕು. ಪೊಲೀಸರ ಜೊತೆ ನಾನು ಒಬ್ಬನೇ ಸಂಭಲ್‌ಗೆ ಹೋಗಲು ಸಿದ್ಧನಿದ್ದೇನೆ. ಆದರೆ ಅದಕ್ಕೂ ಅವಕಾಶ ನೀಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.
“ಇದು ‘ಹೊಸ ಹಿಂದೂಸ್ತಾನ’ ಆಗಿದೆ. ಡಾ. ಬಿ ಆರ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದ ಅಂತ್ಯಕ್ಕೆ ಯತ್ನ ನಡೆಯುತ್ತಿದೆ. ನನ್ನ ಸಂವಿಧಾನಿಕ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಆದರೆ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ತಿಳಿಸಿದರು.
ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವಿರೋಧಿಸಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಭದ್ರತಾ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದೆ.
ಈ ಹಿಂದೆ ನವೆಂಬರ್ 30ರವರೆಗೆ ನಿರ್ಬಂಧವನ್ನು ಹೇರಲಾಗಿತ್ತು. ಆದರೆ ಬಳಿಕ ನಿರ್ಬಂಧವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.
