ರೈತರ ಹಿತಾಸಕ್ತಿಯನ್ನು ಕಾಪಾಡಬೇಕಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಟ್ಟಡ ನಿರ್ವಹಣೆ ಇಲ್ಲದೆ ಬಿಕೋ ಎನ್ನುತ್ತಿದೆ. ಆವರಣದ ತುಂಬೆಲ್ಲ ಸಾರಾಯಿ ಬಾಟಲಿಗಳು, ಪ್ಯಾಕೆಟ್‌ಗಳು, ನೀರಿನ ಪೌಚುಗಳ ರಾಶಿ ಬಿದ್ದಿದ್ದು, ರಾತ್ರಿಯಾದರೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಪಿಎಂಸಿ ಮಾರುಕಟ್ಟೆ ಹಾಳುಕೊಂಪೆಯಂತಾಗಿದೆ.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಸುಮಾರು ಮೂವತ್ತು ವರ್ಷಗಳಿಂದ ಇದ್ದ ಎಪಿಎಂಸಿಯ ಕಟ್ಟಡ, ಹಳೆಯ ಕಟ್ಟಡವಾಗಿದ್ದರೂ ಉತ್ತಮ ಸ್ಥಿತಿಯಲ್ಲಿದೆ. ಹೊಸ ಎಪಿಎಂಸಿ ಆದ ನಂತರ ಈ ಹಳೆಯ ಎಪಿಎಂಸಿ ಆಡಳಿತ ಕಟ್ಟಡ ಮೂರ್ನಾಲ್ಕು ವರ್ಷಗಳಿಂದ ನಿರ್ವಹಣೆಯಿಲ್ಲದೆ ಹಾಳುಕೊಂಪೆಯಾಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ, ಕುಡುಕರ ಅಡ್ಡವಾಗಿದೆ.

ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಎಪಿಎಂಸಿ ಹತ್ತಿರದಲ್ಲಿ ಕೆಸಿಸಿ ಬ್ಯಾಂಕ್, ನ್ಯಾಯಬೆಲೆ ಅಂಗಡಿ ಹಾಗೂ ತರಕಾರಿ ಮಾರುಕಟ್ಟೆಯೂ ಇದೆ. ಸಾರ್ವಜನಿಕರು, ರೈತರು, ಮಹಿಳೆಯರು ಓಡಾಡುವುದಕ್ಕೂ ಮುಜುಗರ ತರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬಳಕೆಯಾಗದ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿ
ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿ ಕಟ್ಟಡ ಹಳೆಯದಾಗಿದ್ದರೂ ಉತ್ತಮವಾಗಿದೆ. ನಾಲ್ಕೈದು ಕೊಠಡಿಗಳಿವೆ. ಪಕ್ಕದಲ್ಲಿಯೇ ಇನ್ನೊಂದು ಕಟ್ಟಡವಿಡೆ. ರೈತರು ಮಾರಾಟಕ್ಕೆ ತಂದ ಉತ್ಪನ್ನಗಳನ್ನು ಇಡಲು ವಿಶಾಲವಾದ ತೆರೆದ ಗೋದಾಮು ಇದ್ದೂ ಇಲ್ಲದಂತಾಗಿದೆ. ಈ ಎಲ್ಲ ಕಟ್ಟಡಗಳು ಉತ್ತಮ ಸ್ಥಿತಿಯಲ್ಲಿದ್ದರೂ ಬಳಕೆಯಾಗದೆ ಕುಡುಕರ ಅಡ್ಡವಾಗಿ ಮಾರ್ಪಟ್ಟಿದೆ.

ಅವರಣದ ತುಂಬೆಲ್ಲ ಸಾರಾಯಿ ಪ್ಯಾಕೆಟ್, ಬಾಟಲಿಗಳ ದರ್ಬಾರು
ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿ ರೈತರಿಗೆ ಮುಕ್ತವಾಗಿ ಓಡಾಟ ಮಾಡಲು ಅವಕಾಶ ಮಾಡಿಕೊಡಬೇಕಿತ್ತು. ಆದರೆ ರೈತರು ಆಡಳಿತ ಕಚೇರಿ ಆವರಣದಲ್ಲಿ ಹೊರಟರೆ ಮೂಗು ಮುಚ್ಚಿಕೊಂಡು ಹೋಗುವಂಥ ಪರಿಸ್ಥಿತಿ ಉಂಟಾಗಿದೆ. ವಿಶಾಲವಾದ ಆವರಣದ ತುಂಬೆಲ್ಲ ಸಾರಾಯಿ ಪ್ಯಾಕೆಟ್‌ಗಳು, ಬಾಟಲಿಗಳೇ ರಾರಾಜಿಸುತ್ತಿವೆ. ಇದರಿಂದ ವಿಶಾಲವಾದ ಆವರಣ ಗಬ್ಬು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂಥ ದಃಸ್ಥಿತಿ ಎದುರಾಗಿದೆ.

ಶೌಚಾಲಯವಾಗಿ ಬಳಕೆ
ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಶೌಚಾಲಯವಾಗಿ ಮಾರ್ಪಟ್ಟಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಎರಡ್ಮೂರು ಕಿಲೋಮೀಟರ್ ಅಂತರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದಿರುವುದಕ್ಕೆ ಪುರಸಭೆಯ ನಿರ್ಲಕ್ಷವೇ ಕಾರಣವಾಗಿದೆ. ಇದರಿಂದ ನಿತ್ಯ ಆವರಣವನ್ನು ಜನರು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಇಡೀ ಆವರಣವೇ ಗಬ್ಬುನಾತ ಬೀರುತ್ತದೆ.

ರೈತ ನಾಗಪ್ಪ ಮೇಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹೊಸ ಎಪಿಎಂಸಿ ಆಗಿದ್ದರಿಂದ ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇಲ್ಲಿ ಆಡಳಿತ ಮಾಡುವ ಎಂಎಲ್‌ಎ ಸರಿಯಿಲ್ಲ. ಇಲ್ಲಿರುವ ಸುಮಾರು ಮಳಿಗೆಗಳಿಗೆ ಬಾಡಿಗೆಯನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಇದನ್ನು ಸರಿಯಾಗಿ ವ್ಯವಸ್ಥೆ ಮಾಡುತ್ತಿಲ್ಲ. ಗಿಡಗಂಟಿ, ಸಾರಾಯಿ ಬಾಟಲಿ ಎಲ್ಲವನ್ನೂ ಸ್ವಚ್ಛ ಮಾಡಬೇಕಿತ್ತು. ಯಾರೂ ಮಾಡುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬರೀ ತಮ್ಮದಷ್ಟೇ ನೋಡಿಕೊಳ್ಳುತ್ತಾರೆಯೇ ಹೊರತು, ರೈತರ ಬಗ್ಗೆ ಕಾಳಜಿ ಇಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಹಾಗೂ ಪುರಸಭೆ ಬೇಜವಾಬ್ದಾರಿಯಿಂದ ಹೀಗೆಲ್ಲಾ ಆಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮಳವಳ್ಳಿ | ಕನ್ನಡ ನಾಡು, ನುಡಿ ಉಳಿಸಲು ಜಯ ಕರ್ನಾಟಕ ಸಂಘ ಸದಾ ಸಕ್ರಿಯ: ಯೋಗಣ್ಣ
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂದ್ರು ಪೂಜಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇಲ್ಲಿ ಕುಡಿಯೋದು ಇಸ್ಪೀಟ್ ಆಡುವುದು ಸೇರಿದಂತೆ ಎಲ್ಲ ರೀತಿಯ ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಎಲ್ಲೆಂದರಲ್ಲಿ ಸಾರಾಯಿ ಪ್ಯಾಕೆಟ್, ಬಾಟಲಿಗಳು ಕಾಣುತ್ತವೆ. ಅಲ್ಲದೆ ಇದನ್ನು ಶೌಚಾಲಯ ಮಾಡಿಕೊಂಡಿದ್ದಾರೆ. ಸ್ವಚ್ಛತೆಯೇ ಇಲ್ಲ. ಇದರಿಂದ ಸಾಂಕ್ರಾಮಿಕ ರೋಗಗಳು ಬರುವ ಸಂಭವವಿದೆ. ಕೃಷಿ ಆಡಳಿತ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಎದ್ದುಕಾಣುತ್ತಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸ್ವಚ್ಛತೆ ಮಾಡಬೇಕು” ಎಂದು ಆಗ್ರಹಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.