ರೈತರು ಬೆಳೆದ ಬೆಳೆಗಳು ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿವೆ. ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆಯ ಜತೆಗೆ ಪ್ರೋತ್ಸಾಹಧನ ಹಾಗೂ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿ ಸಿಂಧನೂರು ಘಟಕದ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪ್ರವಾಸಿ ಮಂದಿರದಿಂದ, ತಹಶೀಲ್ದಾರ್ ಕಚೇರಿವರಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮುಖಾಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
“ಭತ್ತ, ಜೋಳ, ತೊಗರಿ ಮತ್ತು ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಕಟಾವು ಮಾಡಿದ್ದು, ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಎಂಎಸ್‌ಪಿಗಿಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ. ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ ₹1,000ದಿಂದ ₹3000ದವರೆಗೆ ಪ್ರತಿ ಕ್ವಿಂಟಾಲಿಗೆ ದರ ಕಡಿಮೆಯಾಗಿದೆ. ಸರ್ಕಾರವು ರೈತರ ಕನಿಷ್ಟ ಬೆಂಬಲ ಬೆಲೆಯ ಜತೆಗೆ ಪ್ರತಿ ಕ್ವಿಂಟಾಲಿಗೆ ₹1000 ಪ್ರೋತ್ಸಾಹ ಹಣವನ್ನು ಸೇರಿಸಿ ಸರ್ಕಾರ ರೈತರ ಉತ್ಪನ್ನಗಳನ್ನು ತತ್‌ಕ್ಷಣದಿಂದಲೇ ಖರೀದಿ ಮಾಡಿ ವಾರದೊಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕು” ಎಂದು ಆಗ್ರಹಿಸಿದರು.
ಶರಣಪ್ಪ ಮುರುಳಿ ಮಾತನಾಡಿ, “ರೈತರು ಬೆಳದ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ಸ್ವಾಮಿನಾಥನ್ ಸೂತ್ರದ ಪ್ರಕಾರ ಖರೀದಿ ಬೆಲೆಗಳನ್ನು ನಿಗದಿಪಡಿಸಬೇಕೆಂದು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ರೈತರ ಬೇಡಿಕೆ ಈಡೇರಿಸಲು ಆಗಿಲ್ಲ” ಎಂದರು.
“ತೆರಿಗೆ ಕೇಂದ್ರ ತೆರೆಯಲು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಮುಂದಾಗಿಲ್ಲ. ದೇಶದ ಕೃಷಿ ಭೂಮಿಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಪರಭಾರೆಯಾಗುತ್ತಿದ್ದು, ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿವೆಯೇ ಹೊರತು ರೈತರ ಪರವಾಗಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾಲು ಉತ್ಪಾದಕರ ಸಂಘದ ಚುನಾವಣೆ; ರೈತರಿಗೆ ಅನ್ಯಾಯ
“ಅಕಾಲಿಕ ಮಳೆಗೆ ಭತ್ತ, ಹತ್ತಿ, ತೊಗರಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿ ಬೆಳೆಗಳು ನಷ್ಟವಾಗಿವೆ. ಅಂತಹ ರೈತರ ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕು” ಎಂದು ಹೇಳಿದರು.
ಈ ವೇಳೆ ರಾಮಯ್ಯ ಜವಳಗೇರಾ, ತಿಮ್ಮಣ್ಣ ಭೋವಿ, ಲಾಲ್ ಸಾಬ್ ನಾಡನಗೌಡ, ವೆಂಕಟೇಶ್ ರತ್ನಾಪುರ ಹಟ್ಟಿ, ಶಿವರಾಜ್ ಹಾಲದಾಳ, ಬೀರಲಿಂಗಪ್ಪ, ಚನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು.
