ವಿಶ್ವದ ಅತ್ಯಂತ ದೊಡ್ಡ ಜನತಾಂತ್ರಿಕ ವ್ಯವಸ್ಥೆ ಕೇವಲ ಎರಡು ಸಾವಿರ ವೋಟುಗಳಿರುವ ಪುಟ್ಟ ಗ್ರಾಮದ ‘ಅಣಕು ಮತದಾನ’ಕ್ಕೆ ಈ ಪರಿ ಹೆದರಬೇಕೇ? ಮುಕ್ತವೂ ನ್ಯಾಯಯುತವೂ ಆಗಿ ಚುನಾವಣೆ ನಡೆದಿದ್ದರೆ ಚುನಾವಣಾ ಆಯೋಗ ಅಥವಾ ಸರ್ಕಾರ ಇಷ್ಟೊಂದು ಭಯಭೀತ ಯಾಕೆ ಆಗಬೇಕು? ರಾಜ್ಯಶಾಸ್ತ್ರಜ್ಞರು, ರಾಜಕಾರಣಿಗಳು ಎತ್ತಿರುವ ನ್ಯಾಯಸಮ್ಮತ ಪ್ರಶ್ನೆಗಳಿವು.
ನೆನ್ನೆ (ಡಿ.3) ಮಹಾರಾಷ್ಟ್ರದ ಗ್ರಾಮವೊಂದು ‘ಮರುಮತದಾನ’ಕ್ಕಾಗಿ ನೂರಕ್ಕೆ ನೂರು ಸಿದ್ಧತೆ ನಡೆಸಿತ್ತು. ಮತಪತ್ರಗಳು ಮತ್ತು ಮತಪೆಟ್ಟಿಗೆಗಳು ಹಾಗೂ ಮತಗಟ್ಟೆಯ ವ್ಯವಸ್ಥೆ ಕೂಡ ಆಗಿ ಹೋಗಿತ್ತು. ಪೋಲಿಂಗ್ ಏಜೆಂಟರು, ಭಿತ್ತಿಪತ್ರಗಳು ಮತ್ತು ಪೋಸ್ಟರುಗಳ ಮೂಲಕ ‘ಮರುಮತದಾನ’ದ ಕಾರಣ ಮತ್ತು ತಯಾರಿಯನ್ನು ವಿವರಿಸಲಾಗಿತ್ತು. ಆದರೆ ಚುನಾವಣಾ ಆಯೋಗ ಈ ‘ಮರುಮತದಾನ’ಕ್ಕೆ ಅನುಮತಿ ನಿರಾಕರಿಸಿತು. ಗ್ರಾಮದ ಮೇಲೆ ಮೂರು ದಿನಗಳ ಕರ್ಫ್ಯೂ ಹೇರಲಾಯಿತು. ವಿದ್ಯುನ್ಮಾನ ಮತಯಂತ್ರಗಳ ಕುರಿತು ಅಪಪ್ರಚಾರ ನಡೆಸಿದ್ದಾರೆಂದು ಕೇಸು ದಾಖಲಿಸಿ ಸುಮಾರು 200 ಮಂದಿಯನ್ನು ಬಂಧಿಸಲಾಯಿತು. ಪೊಲೀಸ್ ಸರ್ಪಗಾವಲನ್ನು ವಿಧಿಸಲಾಯಿತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಹೊರಬಿದ್ದಿದ್ದ ಇವಿಎಂ ಮತದಾನದಲ್ಲಿ ಹೊರಬಿದ್ದಿದ್ದ ಅಂಕಿಅಂಶಗಳನ್ನು ಮಾರ್ಕಡವಾಡಿ ನಂಬಿರಲಿಲ್ಲ. ನಮ್ಮ ಬಹುತೇಕ ಮತಗಳು ಬಿಜೆಪಿ ಅಭ್ಯರ್ಥಿಗೆ ಬಿದ್ದದ್ದು ಹೇಗೆ ಎಂಬುದು ಹಳ್ಳಿಗರ ಪ್ರಶ್ನೆಯಾಗಿತ್ತು. ಅವರೇ ಹಣ ಹೊಂದಿಸಿ ಮತಪತ್ರಗಳನ್ನು ಅಚ್ಚು ಮಾಡಿಸಿದರು. ಅಚ್ಚುಕಟ್ಟಾದ ಮತಗಟ್ಟೆಯನ್ನೂ ನಿರ್ಮಿಸಿದ್ದರು.
ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 91 ಗ್ರಾಮಗಳಿವೆ. ಈ ಪೈಕಿ ಮಾರ್ಕಡವಾಡಿಯೂ ಒಂದು. ಮತದಾರರ ಸಂಖ್ಯೆ 1,900. ಇಲ್ಲಿ ಶರದ್ ಪವಾರ್ ಬಣದ ಎನ್.ಸಿ.ಪಿ. ಅಭ್ಯರ್ಥಿ ಉತ್ತಮರಾವ್ ಜಾನ್ಕರ್ ಅವರು ಗೆದ್ದಿದ್ದರು. ನವೆಂಬರ್ 23ರಂದು ನಡೆದಿದ್ದ ಮತ ಎಣಿಕೆಯಲ್ಲಿ ಬಿಜೆಪಿಯ ರಾಮ್ ಸತ್ಪುತೆ 13,147 ಮತಗಳ ಅಂತರದಿಂದ ಸೋತಿದ್ದರು. ಗೆದ್ದ ಅಭ್ಯರ್ಥಿ ಮಾರ್ಕಡವಾಡಿಯಲ್ಲಿ ಮತಪತ್ರಗಳ ಮೂಲಕ ಮತದಾನ ನಡೆಯಬೇಕೆಂದು ಆಗ್ರಹಪಡಿಸಿದ್ದರು. ತಮಗೆ ಲೀಡ್ ಬರಲೇಬೇಕಿದ್ದ ಗ್ರಾಮವಿದು. ಈ ಹಿಂದಿನ ಚುನಾವಣೆಗಳಲ್ಲಿ ಸತತವಾಗಿ ತಮಗೆ ಈ ಗ್ರಾಮದ ಮತದಾರರು ಲೀಡ್ ಕೊಟ್ಟಿದ್ದಾರೆ. ಆದರೆ ಈ ಸಲ ಬಿಜೆಪಿ ಎದುರಾಳಿ ರಾಮ್ ಸತ್ಪುತೆಗೆ 1,003 ಮತಗಳೂ, ತಮಗೆ 843 ಮತಗಳೂ ದೊರೆತಿವೆ. ಕ್ಷೇತ್ರದ ಬಹುಸಂಖ್ಯಾತ ಗ್ರಾಮಗಳ ಮತದಾರರು ತಮಗೆ ಮತ ನೀಡಿರುವುದಾಗಿ ಹೇಳುತ್ತಾರೆ. ಆದರೆ ಅಷ್ಟು ಮತಗಳು ತಮ್ಮ ಪರವಾಗಿ ಎಣಿಕೆಯಾಗಿಲ್ಲ ಎಂಬುದು ಜಾನ್ಕರ್ ತಗಾದೆ.
ಧನಗಾರ್ ಜಾತಿಯೇ ಬಹುಸಂಖ್ಯೆಯಲ್ಲಿರುವ ಗ್ರಾಮವಿದು. ಗೆದ್ದಿರುವ ಅಭ್ಯರ್ಥಿ ಜಾನ್ಕರ್ ಇದೇ ಜಾತಿಗೆ ಸೇರಿದವರು. ಗ್ರಾಮಸ್ತರು ಗ್ರಾಮಪಂಚಾಯಿತಿ ಸಭೆ ನಡೆಸಿದ ನಂತರ ತಹಸೀಲ್ದಾರರ ಬಳಿ ಬಂದು ಮರುಮತದಾನಕ್ಕಾಗಿ ಒತ್ತಾಯಿಸಿದರು. ಅವರ ಬೇಡಿಕೆಯನ್ನು ತಳ್ಳಿಹಾಕಲಾಯಿತು. ನಂತರ ತಾವೇ ‘ಮರುಮತದಾನ’ ನಡೆಸಲು ತೀರ್ಮಾನಿಸಿದರು. ಮತಗಳು ಯಾರ್ಯಾರಿಗೆ ಎಷ್ಟೆಷ್ಟು ಹಂಚಿಕೆ ಆದವೆಂದು ಪರೀಕ್ಷೆ ಮಾಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ ಗಳಲ್ಲಿ ಏನಾದರೂ ಲೋಪ ಇದೆಯೇ ಎಂದು ನೋಡಬೇಕಿತ್ತು ಎಂಬುದು ಗೆದ್ದ ಉಮೇದುವಾರ ಜಾನ್ಕರ್ ಸಮಜಾಯಿಷಿ. ಬಿಜೆಪಿ ಉಮೇದುವಾರ ಸತ್ಪುತೆ ಅವರು ಗ್ರಾಮದ ಅಭಿವೃದ್ಧಿಗೆ ಹಣ ತಂದರು. ಈ ಆಧಾರದ ಮೇಲೆ ಜನ ಮತ ಚಲಾಯಿಸಿದ್ದಾರೆಯೇ ವಿನಾ ಈ ‘ಏರುಪೇರಿಗೂ’ ಮತಯಂತ್ರಗಳಿಗೂ ಸಂಬಂಧವೇ ಇಲ್ಲ ಎಂಬುದು ಬಿಜೆಪಿ ಬೆಂಬಲಿಗರ ಅಭಿಪ್ರಾಯ.
ಧನಗಾರ್ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕಾಗಿ ಅಥವಾ ಈ ಹಿಂದಿನ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತಗಳು ಧನಗಾರ್ ಸಮುದಾಯಕ್ಕೆ ಸೇರಿದ ಜಾನ್ಕರ್ ಅವರಿಗೆ ಬಿದ್ದಿವೆ ಎಂಬ ಕಾರಣಕ್ಕಾಗಿ ಈ ಸಲವೂ ಹೆಚ್ಚಿನ ಸಂಖ್ಯೆಯ ಮತಗಳು ಅವರಿಗೇ ಬೀಳಬೇಕಿತ್ತೆಂಬ ವಾದವನ್ನು ಒಪ್ಪಲೇಬೇಕೆಂದೇನೂ ಇಲ್ಲ.
ಸಂವಿಧಾನದ ಪ್ರಕಾರ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಕೆಲಸ. ಮಾರ್ಕಡವಾಡಿ ‘ಮರುಮತದಾನ’ದ ಉದ್ದೇಶ ಕೇವಲ ಅಣಕವಲ್ಲದೆ ಇನ್ನೇನೂ ಅಲ್ಲ. ಶಂಕೆ-ಸಂದೇಹಗಳಿದ್ದರೆ ಕಾನೂನಿನ ಪ್ರಕಾರ ಎಲೆಕ್ಷನ್ ಅರ್ಜಿ ಹಾಕಬೇಕು ಎಂಬುದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ‘ದಿ ಹಿಂದೂ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗ್ರಾಮಸ್ಥರು ಮರುಮತದಾನ ಎಂದೇ ಕರೆದಿರಬಹುದು. ಚುನಾವಣಾ ಆಯೋಗದ ಅಧಿಕೃತ ಮತಎಣಿಕೆ ಪ್ರಕ್ರಿಯೆ ಮುಗಿದು ಹೋಗಿದೆ. ಮುಗಿದ ನಂತರ ‘ಮರುಮತದಾನ’ವನ್ನು ಯಾಕೆ ನಿಷೇಧಿಸಬೇಕು? ಮತದಾನದ ನಂತರ ಹಲವು ಗ್ರಾಮಗಳಲ್ಲಿ ನೂರಕ್ಕೆ ನೂರರಷ್ಟು ಮತದಾರರನ್ನು ಒಳಗೊಳ್ಳುವ ಸಮೀಕ್ಷೆಗಳು ದಶಕಗಳಿಂದ ನಡೆದುಕೊಂಡು ಬಂದಿವೆ. ಅಂತಹ ಸರ್ವೇಗಳು ಕಾನೂನುಬದ್ಧವಾದರೆ, ಮಾರ್ಕಡವಾಡಿಯ ಅಣಕು ‘ಮರುಮತದಾನ’ ಕಾನೂನುಬಾಹಿರ ಯಾಕೆ ಮತ್ತು ಹೇಗೆ?
ಹೆಚ್ಚೆಂದರೆ ನವನವೀನ ಬಗೆಯ ಪ್ರತಿಭಟನೆಯಿದು. ಈ ಮರುಮತದಾನಕ್ಕೆ ಕಾನೂನಿನ ಮಾನ್ಯತೆ ಹೇಗೂ ಇಲ್ಲ. ಕೇವಲ ಸಾಂಕೇತಿಕ ಪ್ರಕ್ರಿಯೆಯಿದು.
ಗ್ರಾಮಸ್ಥರ ಈ ಕಸರತ್ತನ್ನು ತಡೆಯಲು ಚುನಾವಣೆ ಆಯೋಗ ಮತ್ತು ಪ್ರಭುತ್ವ ಬೆಚ್ಚಿಬಿದ್ದು ಕರ್ಫ್ಯೂ ಹೇರುವ ಮಟ್ಟಕ್ಕೆ ಹೋಗಿದ್ದು ಯಾಕೆ? ಈ ದಮನದಿಂದ ಚುನಾವಣಾ ಆಯೋಗದ ನ್ಯಾಯಬದ್ಧತೆ ಮತ್ತು ನಿಷ್ಪಕ್ಷಪಾತ ಕುರಿತ ಶಂಕೆಗಳು ಮತ್ತಷ್ಟು ದಟ್ಟವಾಗುವುದಿಲ್ಲವೇ? ವಿಶ್ವಗುರು ಮತ್ತು ಜಗತ್ತಿನ ಜನತಂತ್ರದ ಜನನಿ ಎಂದೆಲ್ಲ ಮೋಶಾ ಸರ್ಕಾರ ಭಾರತವನ್ನು ಬಣ್ಣಿಸುತ್ತಿದೆ. ವಿಶ್ವದ ಅತ್ಯಂತ ದೊಡ್ಡ ಜನತಾಂತ್ರಿಕ ವ್ಯವಸ್ಥೆ ಕೇವಲ ಎರಡು ಸಾವಿರ ವೋಟುಗಳಿರುವ ಪುಟ್ಟ ಗ್ರಾಮದ ‘ಅಣಕು ಮತದಾನ’ಕ್ಕೆ ಈ ಪರಿ ಹೆದರಬೇಕೇ? ಮುಕ್ತವೂ ನ್ಯಾಯಯುತವೂ ಆಗಿ ಚುನಾವಣೆ ನಡೆದಿದ್ದರೆ ಚುನಾವಣಾ ಆಯೋಗ ಅಥವಾ ಸರ್ಕಾರ ಇಷ್ಟೊಂದು ಭಯಭೀತ ಯಾಕೆ ಆಗಬೇಕು? ರಾಜ್ಯಶಾಸ್ತ್ರಜ್ಞರು ರಾಜಕಾರಣಿಗಳು ಎತ್ತಿರುವ ನ್ಯಾಯಸಮ್ಮತ ಪ್ರಶ್ನೆಗಳಿವು.
ಮಾರ್ಕಡವಾಡಿಯ ಈ ಅಣಕು ಮತದಾನ ಪ್ರಯತ್ನವು ಪ್ರಾಚೀನ ಭಾರತದ ಗಣತಂತ್ರ ವ್ಯವಸ್ಥೆಯನ್ನು ನೆನಪಿಸುವ ಉತ್ತಮ ಬೆಳವಣಿಗೆ ಎಂದು ಅಸೋಸಿಯೇಷನ್ ಅಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ (ಎಡಿಆರ್) ಸಂಸ್ಥಾಪಕರಲ್ಲಿ ಒಬ್ಬರಾದ ಜಗದೀಪ್ ಛೋಕರ್ ಬಣ್ಣಿಸಿದ್ದಾರೆ.
ಎಲೆಕ್ಟೋರಲ್ ಬಾಂಡ್ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕ ಅತ್ಯಂತ ನ್ಯಾಯಯುತ ಎಂದು ಮೋಶಾ ಸರ್ಕಾರ ಡಂಗುರ ಸಾರಿತ್ತು. ಆದರೆ ಸುಪ್ರೀಮ್ ಕೋರ್ಟು ಈ ವ್ಯವಸ್ಥೆಯನ್ನು ಅಪಾರದರ್ಶಕ ಮತ್ತು ಸಂವಿಧಾನಬಾಹಿರ ವಂಚನೆ ಎಂದು ರದ್ದುಗೊಳಿಸಲಿಲ್ಲವೇನು? ಸ್ಪರ್ಧಿಗಳು ಮತ್ತು ಪಕ್ಷಗಳ ನಡುವೆ ಸಮತಟ್ಟಾದ-ಸಮಾನವಾದ ಅಂಕಣವನ್ನು ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ಒದಗಿಸುವುದಿಲ್ಲ ಎಂದು ತೀರ್ಪು ನೀಡಲಿಲ್ಲವೇ? ಜಗತ್ತಿನ ಅತ್ಯಂತ ಮುಂದುವರೆದ ಹಲವಾರು ದೇಶಗಳು ಇಂದಿಗೂ ಕಾಗದದ ಮತಪತ್ರಗಳನ್ನು ಯಾಕೆ ಬಳಸುತ್ತಿವೆ? ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗ ಮತ್ತು ಯಾಂತ್ರೀಕರಣದ ಮಹಾಪೂಜಾರಿಗಳಲ್ಲಿ ಒಬ್ಬರೂ ಆದ ಎಲಾನ್ ಮಸ್ಕ್ ಬ್ಯಾಲಟ್ ಪೇಪರ್ ಪರವಾಗಿ ದನಿ ಎತ್ತಿರುವುದು ವಿನಾಕಾರಣವೇ? ಇವಿಎಂಗಳನ್ನು ಹ್ಯಾಕ್ ಮಾಡುವ ಅಪಾಯವಿದೆ ಎಂದಿರುವುದು ಯಾಕಾಗಿ?
ಎಲೆಕ್ಟೋರಲ್ ಬಾಂಡ್ ವ್ಯವಸ್ಥೆಯೇ ವಂಚನೆಯೆಂದು ಸುಪ್ರೀಮ್ ಕೋರ್ಟು ಹೇಳಿರುವಾಗ ಎಲೆಕ್ಟ್ರಾನಿಕ್ ಮತಯಂತ್ರವನ್ನು ನೂರಕ್ಕೆ ನೂರು ನಂಬುವುದಾದರೂ ಹೇಗೆ? ಅಥವಾ ಅಪನಂಬಿಕೆ ವ್ಯಕ್ತಪಡಿಸಿದರೆ ಅದು ಅಪರಾಧ ಹೇಗಾದೀತು?
ಪ್ರತಿಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಾಧನೆ ಪರವಾಗಿಲ್ಲ ಎಂಬ ಪರಿಸ್ಥಿತಿಯಲ್ಲೂ ಎಲೆಕ್ಟ್ರಾನಿಕ್ ಮತಯಂತ್ರಗಳು ಮತ್ತು ಚುನಾವಣಾ ಆಯೋಗದ ದುರ್ಬಳಕೆ ಕುರಿತು ಸವಾಲುಗಳನ್ನು ಎತ್ತಿದ್ದವು. ವೋಟಿನ ಲೂಟಿಯಾಗಕೂಡದು ಎಂಬ ಆಶಯದಲ್ಲಿ ತಪ್ಪೇನಿದೆ? ಬಿಜೆಪಿ-ಜನಸಂಘ ಈ ಹಿಂದೆ ಮತಪೆಟ್ಟಿಗೆಗಳ ಅಪಹರಣ ಕುರಿತು ದನಿ ಎತ್ತಿರಲಿಲ್ಲವೇ?
ವಿಶೇಷವಾಗಿ ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಮ್) ಮತದಾರರ ಅವಿಶ್ವಾಸ ವ್ಯಾಪಕವಾಗಿ ವ್ಯಕ್ತವಾಗಿದೆ. ಮಹಾರಾಷ್ಟ್ರದ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಸಂಜೆ ಐದರ ತನಕ 5,64,88,024 (ಶೇ.58.22) ಕೋಟಿ ಮತಗಳನ್ನು ಚಲಾಯಿಸಲಾಗಿತ್ತು. ರಾತ್ರಿ ಹನ್ನೊಂದೂವರೆಗೆ ಚುನಾವಣಾ ಆಯೋಗ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ ಒಟ್ಟು 6,30,80,732 (ಶೇ.65.02) ಮತಗಳು ಚಲಾವಣೆಯಾಗಿದ್ದವು. 66 ಲಕ್ಷ ವೋಟುಗಳ ಭಾರೀ ಅಂತರವಿದು. ಮತಗಣನೆಗೆ ಶುರುವಾಗುವ ಹೊತ್ತಿಗೆ ಈ ಅಂತರ 66 ಲಕ್ಷಗಳಿಂದ 76 ಲಕ್ಷಗಳಿಗೆ ಜಿಗಿದಿತ್ತು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಮತ್ತು ಆರ್ಥಿಕ ವಿಶೇಷಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಮಹಾಯುತಿಯ ಗೆಲುವಿನ ಶೇಕಡಾವಾರು ಅಂತರ 14 ಪಾಯಿಂಟುಗಳಷ್ಟು ಪ್ರಚಂಡವಾದ ಬಗೆಯಾದರೂ ಎಂತು? ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪಕ್ಷವೊಂದು ಒಂದೇ ತೆರನಾಗಿ ಮತಗಳಿಸಿರುವುದು ಮತ್ತು ಕೇವಲ ಐದೇ ತಿಂಗಳಲ್ಲಿ ಲೋಕಸಭೆಯ ಫಲಿತಾಂಶಗಳು ವಿಧಾನಸಭೆಯಲ್ಲಿ ತಲೆಕೆಳಗಾಗಿರುವುದು ಬಲು ಅಪರೂಪದ ವಿದ್ಯಮಾನ. ಹತ್ತು ಹಲವು ಸಂಗತಿಗಳ ಕುರಿತು ಚುನಾವಣಾ ಆಯೋಗ ಜವಾಬು ನೀಡುವ ಗೋಜಿಗೇ ಹೋಗಿಲ್ಲ. ಎಲೆಕ್ಟೋರಲ್ ಫೊರೆನ್ಸಿಕ್ಸ್ (ಚುನಾವಣೆಯ ಎಲ್ಲ ಅಂಕಿಅಂಶಗಳನ್ನು ಅತ್ಯಂತ ಆಳದ ತನಿಖೆಗೆ ಗುರಿಪಡಿಸುವ ವಿಧಿವಿಜ್ಞಾನ) ಬಳಸಿ ವಿಚಾರಣೆ ನಡೆಸಬೇಕು ಎನ್ನುತ್ತಾರೆ ಚುನಾವಣೆ ತಜ್ಞ ಯೋಗೇಂದ್ರ ಯಾದವ್.
ಲೋಕಸಭಾ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಬಿದ್ದ ಮತಗಳು ಮತ್ತು ಎಣಿಕೆಯಾದ ಮತಗಳಲ್ಲಿ ಅಂತರವಿದ್ದ ಸಂಗತಿಯನ್ನು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎತ್ತಿ ತೋರಿತ್ತು. ಚುನಾವಣೆಯ ಇತಿಹಾಸದಲ್ಲೇ ಇಷ್ಟೊಂದು ಅಂತರವನ್ನು ನಾನು ಕಂಡಿಲ್ಲ ಎಂದು ನಿವೃತ್ತ ಮುಖ್ಯಚುನಾವಣಾ ಆಯುಕ್ತ ಎಸ್.ವೈ.ಖುರೇಶಿ ಹೇಳಿದ್ದಾರೆ.
ಇದನ್ನೂ ಓದಿ ‘ಬೆಳೆ ಪರಿಹಾರ’ ಪರಿಕಲ್ಪನೆಯೇ ಸರ್ಕಾರದಲ್ಲಿ ಇಲ್ಲ, ರಾಜ್ಯಕ್ಕೆ ಬೇಕಿದೆ ಹೊಸ ಕಾಯ್ದೆ – ಕಾನೂನು
ಚುನಾವಣಾ ಆಯುಕ್ತರ ನಿಯುಕ್ತಿಯ ಪ್ರಕ್ರಿಯೆಯನ್ನೇ ಮೋದಿ ಸರ್ಕಾರ ರಾತ್ರೋರಾತ್ರಿ ಬದಲಾಯಿಸಿ ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಾಧೀಶರನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟಿದ್ದು ಯಾಕಾಗಿ? ಪ್ರಶ್ನೆಗಳ ಸರಣಿಯೇ ಎದ್ದು ನಿಲ್ಲುತ್ತದೆ. ಒಂದರ ಮೇಲೆ ಮುಸುಕು ಹೊದಿಸಿದರೆ ಮತ್ತೊಂದರಂತೆ. ಪ್ರಾಮಾಣಿಕತೆ ಮತ್ತು ಸದುದ್ದೇಶಗಳು ಮಾತ್ರವೇ ಈ ಸರಣಿಯನ್ನು ತಡೆದು ನಿಲ್ಲಿಸಬಲ್ಲವು. ಆಳುವವರು ಮನಸ್ಸು ಮಾಡಬೇಕು. ಸೋಲಿಗೆ ಹೆದರಬಾರದು.
