ಸರ್ಕಾರಗಳು ಕೊಡುತ್ತಿರುವುದು ‘ಬೆಳೆ ಪರಿಹಾರ’ವೇ ಅಲ್ಲ, ಮತ್ತೇನು?

Date:

Advertisements
ವಾಸ್ತವದಲ್ಲಿ 'ಬೆಳೆ ಪರಿಹಾರ' ಎನ್ನುವ ವ್ಯವಸ್ಥೆಯೇ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಇಲ್ಲ. ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದಿಂದ ಬೆಳೆಗಳಿಗೆ ಹಾನಿಯಾದಾಗ ಸರ್ಕಾರಗಳು ಸ್ವಲ್ಪ ಹಣವನ್ನು ರೈತರಿಗೆ ಕೊಡುತ್ತವೆ. ಇದನ್ನೇ 'ಬೆಳೆ ಪರಿಹಾರ' ಎಂದು ಸರ್ಕಾರಗಳು ನಂಬಿಸಿವೆ. ಹಾಗಾದರೆ ಸರ್ಕಾರ ನಿಜಕ್ಕೂ ಕೊಡುತ್ತಿರುವುದೇನು? ರೈತರು ಪಡೆದಿದ್ದೇನು?

ರೈತರು ಬೆಳೆದ ಬೆಳೆಗಳಿಗೆ ಪ್ರಕೃತಿ ವಿಕೋಪದಿಂದ ತೊಂದರೆಯಾದಾಗ ಕೋಟಿ ಕೋಟಿ ರೂ. ‘ಬೆಳೆ ಪರಿಹಾರ‘ ವಿತರಿಸಿದ್ದೇವೆ ಎಂದು ಆಳುವ ಸರ್ಕಾರಗಳು ಈವರೆಗೂ ಘಂಟಾಘೋಷವಾಗಿ ಹೇಳುತ್ತ ಬಂದಿವೆ. ಆದರೆ ವಾಸ್ತವದಲ್ಲಿ ‘ಬೆಳೆ ಪರಿಹಾರ’ ಎನ್ನುವ ವೈಜ್ಞಾನಿಕ ವ್ಯವಸ್ಥೆಯೇ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಇಲ್ಲ ಎಂದರೆ ನಂಬುತ್ತೀರಾ?

ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದಿಂದ ಬೆಳೆಗಳಿಗೆ ಹಾನಿಯಾದಾಗ ಸರ್ಕಾರಗಳು ಕೊಡುವ ಅಲ್ಪ ಸಹಾಯಧನವನ್ನೇ ಬೆಳೆ ಪರಿಹಾರ ಎಂದುಕೊಂಡು ಬರಲಾಗಿದೆ. ಸರ್ಕಾರಗಳು ಕೂಡ ಇದನ್ನು ಹೀಗೆಯೇ ನಂಬಿಸಿವೆ. ಬಹುಪಾಲು ರೈತರು ಸರ್ಕಾರದ ಕಿರು ಸಹಾಯಧನವನ್ನೇ ಬೆಳೆ ಪರಿಹಾರ ಎಂದು ಈವರೆಗೂ ನಂಬಿದ್ದಾರೆ. ಆದರೆ ಇದು ಅಪ್ಪಟ ಸುಳ್ಳು. ರಾಜ್ಯದಲ್ಲಿ ಬೆಳೆ ಪರಿಹಾರವನ್ನು ಯಾವ ಸರ್ಕಾರಗಳು ನೀಡಿಲ್ಲ!

ಅತಿವೃಷ್ಟಿ ಅಥವಾ ಅನಾವೃಷ್ಟಿ ಇಲ್ಲವೇ ವನ್ಯಜೀವಿ ಹಾವಳಿಯಿಂದ ಉಂಟಾದ ಬೆಳೆ ಹಾನಿಗೆ ಸರ್ಕಾರಗಳು ‘ಇನ್‌ಪುಟ್ ಸಬ್ಸಿಡಿ ಪರಿಹಾರ‘ ನೀಡುತ್ತ ಬಂದಿವೆ. ಇದನ್ನೇ ‘ಬೆಳೆ ಪರಿಹಾರ’ ಎಂದು ಜನರ ಮನಸಲ್ಲಿ ಬಿತ್ತಲಾಗಿದೆ. ಆದರೆ ಇನ್‌ಪುಟ್ ಸಬ್ಸಿಡಿ ಪರಿಹಾರ ಎಂಬುದು ರೈತರು ಮುಂದಿನ ಬೆಳೆಗೆ ಬೀಜ, ಗೊಬ್ಬರ, ಉಳುಮೆಗೆ ಮಾಡುವ ಖರ್ಚನ್ನು ಸರಿದೂಗಿಸಲು ಕೊಡುವ ಒಂದು ಸಣ್ಣ ಆರ್ಥಿಕ ಸಹಾಯಧನ ಅಷ್ಟೇ. ಆದರೂ ಸರ್ಕಾರಗಳು ಭಂಡತನದಿಂದ ‘ಇನ್‌ಪುಟ್ ಸಬ್ಸಿಡಿ ಪರಿಹಾರ’ವನ್ನು ‘ಬೆಳೆ ಪರಿಹಾರ’ ಎನ್ನುತ್ತ ಬಂದಿರುವದು ಆಶ್ಚರ್ಯದ ಸಂಗತಿ.

Advertisements

ರಾಜ್ಯದಲ್ಲಿ ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ನಿಯಮದಡಿ ಬೆಳೆ ಹಾನಿಗೆ ‘ಇನ್‌ಪುಟ್ ಸಬ್ಸಿಡಿ ಪರಿಹಾರ’ ವಿತರಿಸಲಾಗುತ್ತದೆ. ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಶೇ.33ರಷ್ಟು ಬೆಳೆಗಳು ಹಾನಿಗೊಳಗಾದರೆ ಮಾತ್ರ ಇನ್‌ಪುಟ್ ಸಬ್ಸಿಡಿ ಪರಿಹಾರಕ್ಕೆ ರೈತರು ಅರ್ಹರು. ಶೇ.33ರಷ್ಟು ಹಾನಿಗೊಳಗಾದ ರೈತರಿಗೆ ಮಾತ್ರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ (ಎನ್‌ಡಿಎಂಎಫ್‌) ‘ಇನ್‌ಪುಟ್ ಸಬ್ಸಿಡಿ ಪರಿಹಾರ’ ವಿತರಿಸಲಾಗುತ್ತದೆ.

ಬೆಳೆ ಹಾನಿ6

ಇನ್‌ಪುಟ್ ಸಬ್ಸಿಡಿ ಪರಿಹಾರ ಎಷ್ಟಿದೆ?

“ರಾಜ್ಯದಲ್ಲಿ ಸದ್ಯ ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೊಳಗಾದ ರೈತ ತನ್ನ ಸುಪರ್ದಿನ ಎರಡು ಹೆಕ್ಟೇರ್‌ (ಐದು ಎಕರೆ) ಭೂಮಿಗೆ ಮಾತ್ರ ಇನ್‌ಪುಟ್ ಸಬ್ಸಿಡಿ ಪರಿಹಾರ ಪಡೆಯಬಹುದು. ಪ್ರತಿ ಹೆಕ್ಟೇರ್‌ನಂತೆ ಒಣಭೂಮಿಯ ಬೆಳೆ ಹಾನಿಗೆ 8,500 ರೂ. ಮತ್ತು ನೀರಾವರಿ ಭೂಮಿಯ ಬೆಳೆ ಹಾನಿಗೆ 17,000 ರೂ. ಹಾಗೂ ತೋಟಗಾರಿಕೆ ಬೆಳೆ ಹಾನಿಗೆ 22,500 ರೂ. ಇನ್‌ಪುಟ್ ಸಬ್ಸಿಡಿ ಪರಿಹಾರ ವಿತರಿಸಲಾಗುತ್ತದೆ” ಎಂದು ಈ ದಿನ.ಕಾ‌ಮ್‌ ಜೊತೆ ರಾಮನಗರದ ಕೃಷಿ ಅಧಿಕಾರಿ ಪ್ರಮೋದಕುಮಾರ್ ಮಾಹಿತಿ ಹಂಚಿಕೊಂಡರು.

ಇನ್‌ಪುಟ್ ಸಬ್ಸಿಡಿ ಪರಿಹಾರ ಕೂಡ ರೈತರಿಗೆ ಸಮರ್ಪಕವಾಗಿ ಹಂಚಿಕೆಯಾಗುತ್ತಿದೆಯಾ? ಅಲ್ಲೂ ಕೂಡ ಅನ್ಯಾಯ. ಇನ್‌ಪುಟ್ ಸಬ್ಸಿಡಿ ಪರಿಹಾರದ ಆಶಯ ಏನಿದೆ ಎಂದು ಸರ್ಕಾರದ ಗೈಡ್‌ಲೈನ್ಸ್‌ಗಳನ್ನು ಕೆದಕಿದಾಗ ಆಶ್ಚರ್ಯವಾಗುತ್ತದೆ. ಮುಂದಿನ ಬೆಳೆಗಾದರೂ ರೈತ ಸಾಲ ಮಾಡದೇ ಬೀಜ, ಗೊಬ್ಬರ ಖರೀದಿಸಿ ಉಳುಮೆಯ ಖರ್ಚನ್ನು ನಿಭಾಯಿಸಲಿ ಎಂದು ಇನ್‌ಪುಟ್ ಸಬ್ಸಿಡಿ ಪರಿಹಾರ ವಿತರಿಸಲಾಗುತ್ತದೆ. ಬೆಳೆ ಹಾನಿಯನ್ನು ಅಳೆದುತೂಗಿ ಸರ್ಕಾರ ಕೊಡುವ ಕನಿಷ್ಠ ಸಹಾಯಧನದಲ್ಲಿ ರೈತರು ಕೊನೆಗೆ ಬೀಜ ಕೊಳ್ಳಲು ಕೂಡ ಆಗುವುದಿಲ್ಲ. ಇದು ವಾಸ್ತವ. ಉಳುಮೆಯ ಉಳಿದ ಖರ್ಚು ಮತ್ತೆ ರೈತರಿಗೆ ಹೊರೆಯಾಗಿಯೇ ಪರಿಣಮಿಸಿದೆ.

ಇನ್ನು ಇನ್‌ಪುಟ್ ಸಬ್ಸಿಡಿ ಪರಿಹಾರ ವಿತರಣೆ ಎಂಬುದು ವಾರ್ಷಿಕ ಯೋಜನೆಯಾಗಿದೆ. ಬೆಳೆ ಹಾನಿ ಬಗ್ಗೆ ಸರ್ಕಾರವು ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುವುದರಲ್ಲೇ ರೈತರು ಮತ್ತೊಂದು ಬೆಳೆಗೆ ಸಿದ್ಧವಾಗಿರುತ್ತಾರೆ. ಅಧಿಕಾರಿಗಳು ಬಂದು ಸಮೀಕ್ಷೆ ಮಾಡಿ, ವರದಿ ನೈಜತೆಯನ್ನು ಪರಿಶೀಲಿಸುವ ಹೊತ್ತಿಗೆ ಭೂಮಿಯಲ್ಲಿ ಮತ್ತೊಂದು ಬೆಳೆ ಫಸಲು ಕೊಡುವ ಹಂತಕ್ಕೆ ಬಂದಿರುತ್ತದೆ. ಕಾಟಾಚಾರಕ್ಕೆ ಶೇಕಡಾವಾರು ಇಷ್ಟು ಅಂತ ಹಾನಿಯನ್ನು ನಮೂದಿಸಿ ಸಾವಿರವೋ, ಎರಡು ಸಾವಿರವೋ ಅಥವಾ ಮೂರು ಸಾವಿರವೋ ಇನ್‌ಪುಟ್ ಸಬ್ಸಿಡಿ ಪರಿಹಾರ ಅಂತ ವಿತರಿಸಿ ಸರ್ಕಾರಗಳು ಕೈತೊಳೆದುಕೊಳ್ಳುತ್ತ ಬಂದಿವೆ.

ಇನ್‌ಪುಟ್ ಸಬ್ಸಿಡಿ ಪರಿಹಾರ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಹೆಚ್ಚಿದೆ ಎನ್ನುತ್ತಾರೆ ತೋಟಗಾರಿಯ ಇಲಾಖೆಯ ನಿವೃತ್ತ ಅಧಿಕಾರಿ. ಹೆಸರು ಹೇಳಲು ಇಚ್ಛಿಸದ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ, “ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದಾಗ ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡುತ್ತವೆ. ಆದರೆ ಪ್ರತಿ ಇಲಾಖೆಯ ಅಧಿಕಾರಿ ವರ್ಗದ ನಡುವೆ ಸಮನ್ವಯತೆ ಕೊರತೆ ಬಹಳಷ್ಟಿದೆ. ನಾನು ಅಧಿಕಾರದಲ್ಲಿದ್ದಾಗ ರೈತರಿಗೆ ಅನುಕೂಲವಾಗಲಿ ಎಂದು ಆಸ್ಥೆ ವಹಿಸಿ ಮುಂದೆ ಹೋಗಿ ಪ್ರಾಮಾಣಿಕವಾಗಿ ಸಮೀಕ್ಷೆ ಮಾಡುತ್ತಿದ್ದಾಗ ಬೇರೆ ಇಲಾಖೆಯ ಅಧಿಕಾರಿಗಳು ನನ್ನ ಮೇಲೆ ಸಿಟ್ಟಾಗಿದ್ದಿದೆ. ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಕ್ಕೆ ಮೇಲಾಧಿಕಾರಿಗಳಿಂದ ಸುಖಾಸುಮ್ಮನೇ ನನಗೆ ನೋಟಿಸ್‌ ಕೂಡ ಕೊಡಿಸಿದ್ದಿದೆ. ತಳಮಟ್ಟದ ಅಧಿಕಾರಿಗಳು ಕೊಡುವ ವರದಿಯೇ ಹೆಚ್ಚುಕಡಿಮೆ ಫೈನಲ್‌ ಆಗುತ್ತದೆ. ಆದರೆ ಕಾಟಾಚಾರಕ್ಕೆ ಬೆಳೆ ಹಾನಿ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ನಾನು ರೈತ ಕುಟುಂಬದಿಂದ ಬಂದಿದ್ದರಿಂದ ರೈತರಿಗೆ ಒಳ್ಳೆಯದು ಮಾಡಲು ಹೋಗಿ ಎಷ್ಟೋ ಸಲ ನನಗೆ ಶಿಕ್ಷೆ ಆಗಿದೆ. ರೈತರ ವಿಷಯದಲ್ಲಾದ ಅನ್ಯಾಯ ಪ್ರಶ್ನಿಸಿ ಎರಡು ಮುಂಭಡ್ತಿಗಳನ್ನು ನಾನು ಕಳೆದುಕೊಂಡೆ” ಎಂದು ಬೇಸರದಿಂದ ಹೇಳಿದರು.

Pradhan Mantri Fasal Bima Yojana PMFBY

ಬೆಳೆ ವಿಮೆ ಇದೆ, ಆದರೆ ಅದೊಂದು ಮೋಸದಾಟ

ಇನ್ನು ರೈತರಿಗೆ ಅನುಕೂಲವಾಗಲೆಂದೇ ಬೆಳೆ ಹಾನಿಗೆ ಪರಿಹಾರ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ‘ಯನ್ನು ದೇಶದಲ್ಲಿ ಜಾರಿಗೆ ತಂದಿದೆ. ವಿಮೆಯನ್ನು ಮಾಡಿಸಿಕೊಳ್ಳುವ ಕಂಪನಿಗಳು ಖಾಸಗಿ ಕಂಪನಿಗಳಾಗಿದ್ದು, ಆಳುವ ಸರ್ಕಾರಕ್ಕೆ ಹತ್ತಿರವಾದ ಬಲಾಢ್ಯ ವ್ಯಕ್ತಿಗಳ ಕೈಯಲ್ಲಿ ಆ ಎಲ್ಲ ಕಂಪನಿಗಳಿವೆ ಎಂಬುದು ಗುಟ್ಟಾಗಿಲ್ಲ. ರೈತರು ಒಂದು ಹೆಜ್ಜೆ ಮುಂದೆ ಹೋಗಿ ವಿಮೆ ಮಾಡಿಸಿದ ಮೇಲೆ ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡುವುದಿಲ್ಲ ಎಂಬ ಆರೋಪಗಳು ಬೆಳೆ ಹಾನಿ ವಿಮಾ ಕಂಪನಿಗಳ ಮೇಲೆ ಸಾಕಷ್ಟು ಕೇಳಿಬಂದಿವೆ. ಈ ಕಾರಣಕ್ಕೆ ಈಗಲೂ ರೈತರು ವಿಮೆ ಮಾಡಿಸಲು ಹಿಂದು ಮುಂದು ನೋಡುತ್ತಿದ್ದಾರೆ.

ಅಲ್ಲದೇ ಬೆಳೆ ವಿಮೆಯ ಪ್ರೀಮಿಯಮ್‌ ಮೊತ್ತ ಬಡ ರೈತರಿಗೆ ದುಬಾರಿಯಾಗಿದೆ. ಉದಾಹರಣೆಗೆ ರಾಗಿ ಬೆಳೆಯನ್ನು ನೋಡುವುದಾದರೆ ಪ್ರತಿ ಹೆಕ್ಟೇರ್‌ (ಎರಡುವರೆ ಎಕರೆ) ರಾಗಿ ಬೆಳೆಗೆ 44,000 ರೂ. ಮೊತ್ತದ ವಿಮೆ ಮಾಡಿಸಿಕೊಳ್ಳಬಹುದು. ಇದಕ್ಕೆ ರೈತರು ಶೇ.2ರಷ್ಟು ಪ್ರೀಮಿಯಮ್‌ ಮೊತ್ತ ಕಟ್ಟಬೇಕು. ಅಂದರೆ ಪ್ರತಿ ಹೆಕ್ಟೇರ್‌ಗೆ 8,800 ರೂ. ಪ್ರೀಮಿಯಮ್‌ ಕಟ್ಟಬೇಕು. ಬಹುಪಾಲು ರೈತರು ಕೃಷಿ ಚಟುವಟಿಕೆಗೆ ಸಾಲ ಮಾಡಿ ಕೃಷಿ ಮಾಡುತ್ತಿರುವಾಗ ಶೇ.2ರಷ್ಟು ಪ್ರೀಮಿಯಮ್‌ ಮೊತ್ತ ಕಟ್ಟಿ ವಿಮೆ ಮಾಡಿಸಿಕೊಳ್ಳುತ್ತಾರಾ?

ಇನ್ನು ಬೆಳೆ ವಿಮೆ ಕಂಪನಿಗಳು ಬೆಳೆ ವಿಮೆಯನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದು ಸಾವಿರಾರು ಕೋಟಿ ಲಾಭದಲ್ಲಿವೆ ಎಂಬುದು ಪಂಜಾಬ್‌ ರಾಜ್ಯದಲ್ಲಿ ವರದಿಯಾಗಿದೆ. ನಮ್ಮ ರಾಜ್ಯಕ್ಕೆ ಬರುವುದಾದರೆ ಕೊಪ್ಪಳ ಜಿಲ್ಲಾಡಳಿತ ಆರಂಭದಲ್ಲಿ ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆಗಾಗಿ ರೈತರ ಬೆಳೆವಿಮೆ ಪಾವತಿಸಲು ತುಂಬಾ ಆಸಕ್ತಿ ವಹಿಸಿ ವಿಮಾ ನೋಂದಣಿ ಮಾಡಿಸುವ ಕೆಲಸವನ್ನು ಮಾಡಿಸುತ್ತ ಬಂದಿದೆ. ಈ ವಿಮೆ ಯೋಜನೆಯಲ್ಲಿ ರೈತರ ಪಾಲು, ರಾಜ್ಯ ಸರ್ಕಾರದ ಪಾಲು, ಕೇಂದ್ರ ಸರ್ಕಾರದ ವಿಮಾ ಮೊತ್ತದ ಪಾಲನ್ನು ವಿಮಾ ಕಂಪನಿಗೆ ಪಾವತಿ ಮಾಡುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ 2016-17ರಿಂದ 2022-23ನೇ ಸಾಲಿನ ವರೆಗೂ ಕಳೆದ ಏಳು ವರ್ಷದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮು ಸೇರಿದಂತೆ ರೈತರ ವಂತಿಗೆ 68 ಕೋಟಿ ರೂ. ಆಗಿದೆ. ರೈತರ ಪರ ರಾಜ್ಯ ಸರ್ಕಾರ 339 ಕೋಟಿ ರೂ., ಕೇಂದ್ರ ಸರ್ಕಾರ 337 ಕೋಟಿ ರೂ. ವಿಮಾ ಮೊತ್ತವನ್ನು ಕಳೆದ 7 ವರ್ಷದಲ್ಲಿ ವಿಮಾ ಕಂಪನಿಗೆ ಪಾವತಿ ಮಾಡಿದೆ. ರೈತರ ವಂತಿಗೆ, ರಾಜ್ಯ ಹಾಗೂ ಕೇಂದ್ರದ ವಂತಿಗೆ ಸೇರಿ ಒಟ್ಟು 745 ಕೋಟಿ ರೂ. ಹಣ ವಿಮಾ ಕಂಪನಿಗೆ ಇಲ್ಲಿಯವರೆಗೂ ಪಾವತಿಯಾಗಿದೆ. ವಿಮಾ ಕಂಪನಿ ರೈತರ ಬೆಳೆ ಹಾನಿ ಪರಿಹಾರವಾಗಿ ಇಲ್ಲಿಯವರೆಗೂ 527 ಕೋಟಿ ರೂ. ಪರಿಹಾರ ಮೊತ್ತವನ್ನು ಮಾತ್ರ ಪಾವತಿಸಿದೆ. ಅಂದರೆ 7 ವರ್ಷದಲ್ಲಿ ರೈತರಿಗಿಂತ ವಿಮಾ ಕಂಪನಿಗೆ 218 ಕೋಟಿ ರೂ. ಉಳಿಕೆಯಾಗಿದೆ.

ಸರ್ಕಾರವೇನೋ ವಿಮಾ ಕಂಪನಿಗಳಿಗೆ ರೈತರ ಬೆಳೆಗೆ ಭದ್ರತೆಯಾಗಿ ಕೋಟಿ ಕೋಟಿ ರೂ. ಅನುದಾನವನ್ನು ಪಾವತಿಸುತ್ತಿದೆ. ಆದರೆ ಇಲ್ಲಿ ರೈತರಿಗಿಂತ ವಿಮೆ ಕಂಪನಿಗೆ ಹೆಚ್ಚೆಚ್ಚು ಲಾಭ ಪಡೆಯುತ್ತಿರುವುದು ಹಲವು ರೀತಿಯಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದು ಕೇವಲ ಕೊಪ್ಪಳ ಜಿಲ್ಲೆಯದಷ್ಟೇ ವಿಮೆಯ ಲೆಕ್ಕಾಚಾರ. ರಾಜ್ಯಾದ್ಯಂತ ಜಿಲ್ಲೆಗಳ ಅಂಕಿ ಅಂಶಗಳನ್ನು ನೀವೇ ಊಹಿಸಿ.

ರೈತ5

ವಿಮೆ ವಿತರಣೆಯಲ್ಲಿ ಪಾರದರ್ಶಕ ನಿಯಮಗಳೇ ಇಲ್ಲದ ಕಾರಣ ಬೆಳೆ ವಿಮೆ ಎನ್ನುವುದೇ ಒಂದು ಮೋಸ ಎನ್ನುವ ಅಭಿಪ್ರಾಯ ಬಹುತೇಕ ರೈತರಲ್ಲಿ ಈಗ ಮನೆಮಾಡಿದೆ. ಈ ಅನುಮಾನಗಳನ್ನು ಪರಿಹರಿಸುವ ಗೋಜಿಗೆ ಯಾವ ಸರ್ಕಾರವೂ ಕೈ ಹಾಕಿಲ್ಲ. ರೈತರ ಹೆಸರಲ್ಲಿ ಅಕ್ರಮವಾಗಿ ಖಜಾನೆ ತುಂಬಿಸಿಕೊಳ್ಳುವವರು ತುಂಬಿಸಿಕೊಳ್ಳುತ್ತಲೇ ಇದ್ದಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ವೈಜ್ಞಾನಿಕ ಬೆಳೆ ಪರಿಹಾರ ನೀತಿ ರಾಜ್ಯಕ್ಕೆ ಬೇಕಿದೆ. ಅನ್ನ ಕೊಡುವ ರೈತನಿಗೆ ಅನ್ಯಾಯ ಸಲ್ಲದು. ಇಡೀ ರೈತ ಸಮೂಹಕ್ಕೆ ಬೆಳೆ ಪರಿಹಾರ ಹೆಸರಲ್ಲಿ ‘ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ’ ಎಂಬಂತೆ ಸಹಾಯಧನ ವಿತರಿಸುವುದು ಬಿಟ್ಟು ವೈಜ್ಞಾನಿಕ ಬೆಳೆ ಪರಿಹಾರಕ್ಕೆ ಕಾಯ್ದೆ – ಕಾನೂನು ರೂಪಿಸುವಲ್ಲಿ ರಾಜ್ಯ ಸರ್ಕಾರ ಮುಂದೆ ಬರಬೇಕಿದೆ.

ಶತಮಾನಗಳ ಹಿಂದಿನಿಂದಲೂ, ಇಂದಿಗೂ ರಾಜ್ಯದ ಬಹುಪಾಲು ಜನರ ಮೂಲ ಕಸುಬು ಕೃಷಿ. ರಾಜ್ಯದ ಶೇ.50ರಿಂದ 70 ರಷ್ಟು ಜನರು ಜೀವನೋಪಾಯವಾಗಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದಾರೆ. ರಾಜ್ಯದ ಬಹುತೇಕರ ಬೇಸಾಯ ಭೂಮಿಗೆ ಸೂಕ್ತ ನೀರಾವರಿ ಸೌಲಭ್ಯವಿಲ್ಲ. ಮುಂಗಾರಿನೊಡನೆ ಜೂಜಾಟವಾಡುವ ದೌರ್ಭಾಗ್ಯ ರಾಜ್ಯದ ಬಡ ರೈತರದ್ದು. ಇದರ ಜೊತೆಗೆ ಹವಾಮಾನ ಬದಲಾವಣೆಯ ದುಷ್ಪರಿಣಾಮ ರೈತರ ಮೇಲೆ ಅಧಿಕವಾಗಿದೆ ಎಂಬುದು ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ವರದಿಯಿಂದ ತಿಳಿದುಬಂದಿದೆ.

ಈಗ ರಾಜ್ಯದಲ್ಲಿ ಬೀಸಿರುವ ‘ಫೆಂಗಲ್‌ ಚಂಡಮಾರುತ‘ದಿಂದ ದಕ್ಷಿಣ ಕರ್ನಾಟಕದಲ್ಲಿ ರಾಗಿ, ತೊಗರಿ ಹಾಗೂ ಭತ್ತ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಾಗಿ, ಭತ್ತ ಹಾಗೂ ತಿಗರಿ ಬೆಳೆ ಈ ಸಾರಿ ರೈತರ ಮನೆ ಸೇರುವುದೇ ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ತರಕಾರಿ ಬೆಳೆಗಳು ನಾಶವಾಗಿವೆ. ಫೆಂಗಲ್‌ ಚಂಡಮಾರುತ ಹಾನಿಗೆ ಇನ್‌ಪುಟ್ ಸಬ್ಸಿಡಿ ಪರಿಹಾರ ವಿತರಿಸಿ ಸರ್ಕಾರ ಕೈತೊಳೆದುಕೊಂಡರೆ ಸರ್ಕಾರದ ಜವಾಬ್ದಾರಿ ಇಲ್ಲಿಗೆ ಮುಗೀತಾ? ರೈತರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಪಡಿಸುವುದು ಯಾವಾಗ? ಉತ್ತಮ ದಿನಗಳಿಗೆ ರೈತರು ಇನ್ನೂ ಎಷ್ಟು ದಿನ ಕಾಯಬೇಕು?

ಕಮ್ಮರಡಿ
ಡಾ ಟಿ ಎನ್‌ ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಡಾ ಟಿ ಎನ್‌ ಪ್ರಕಾಶ್‌ ಕಮ್ಮರಡಿ ಅವರು ಈ ದಿನ.ಕಾಮ್‌ ಜೊತೆ ಬೆಳೆ ಪರಿಹಾರ ಪರಿಕಲ್ಪನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ತಾಪಮಾನ ಬದಲಾವಣೆಯ ಪರಿಣಾಮ ಅಕಾಲಿಕ ಮಳೆ, ಅತಿವೃಷ್ಟಿ, ಬರ, ಪೀಡೆ ರೋಗ ಇತ್ಯಾದಿಗಳಿಂದ ಬೆಳೆಗಳ ಮೇಲೆ ಮುಂಬರುವ ದಿನಗಳಲ್ಲಿ ದಾಳಿ ಅತಿಸಾಮಾನ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ವೈಜ್ಞಾನಿಕವಾಗಿ ಬೆಳೆ ಪರಿಹಾರ ರೂಪಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಈ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿಸಬೇಕು” ಎಂದು ಹೇಳಿದ್ದಾರೆ.

“ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಸರ್ಕಾರ ಬೇಗ ಪೂರ್ಣಗೊಳಿಸಬೇಕು. ಪ್ರಕೃತಿ ವಿಕೋಪ ಪರಿಹಾರ ನಿಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅನಗತ್ಯ ತಿಕ್ಕಾಟ ತಪ್ಪಬೇಕು. ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ನ್ಯಾಯಯುತ ಪಾಲು ಪಡೆಯುವ ಸಮರ್ಥ ವ್ಯವಹಾರ ಸಾಧ್ಯವಾಗಬೇಕು. ಜೊತೆಗೆ ರಾಜ್ಯಮಟ್ಟದಲ್ಲಿ ವಿಪತ್ತು ಪರಿಹಾರ ನಿಧಿಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಬೇಕು. ಪ್ರತ್ಯೇಕ ಕೃಷಿ ಸಚಿವ ಸಂಪುಟ ಸಭೆಗಳನ್ನು ನಿಯಮಿತವಾಗಿ ನಡೆಸಿ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಜ್ಜೆ ಇಡಬೇಕು. ಕೃಷಿ ಸುಧಾರಣೆಗೆ ನೀಲ ನಕ್ಷೆ ಸರ್ಕಾರದಿಂದ ರೂಪುಗೊಳ್ಳಬೇಕು. ರಾಜ್ಯದ ಒಟ್ಟು ಆಯವ್ಯಯದಲ್ಲಿ ಕೃಷಿ ಮತ್ತು ರೈತಾಪಿ ವರ್ಗದ ಪಾಲನ್ನು ನ್ಯಾಯಯುತವಾಗಿ ನಿರ್ಧರಿಸಿ ಅದರ ಸದುಪಯೋಗಕ್ಕೆ ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಬೇಕು. ಅಂತಿಮವಾಗಿ ರಾಜ್ಯದ ಕೃಷಿಗೆ ಹೊಸ ದಿಕ್ಕು ದೆಸೆ ನೀಡಲು ಹಿರಿಯ ಅಧಿಕಾರಿ ಶ್ರೀನಿವಾಸಮೂರ್ತಿ ವರದಿಯಲ್ಲಿ ಪ್ರಸ್ತಾಪಿಸಿರುವ ರೀತಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ‘ಕರ್ನಾಟಕ ಕೃಷಿ ಮಿಷನ್‌-2024’ ರೂಪಿಸಬೇಕು” ಎಂದು ಸಲಹೆ ನೀಡಿದ್ದಾರೆ.

ಪ್ರೊ
ಪ್ರೊ. ನರಸಿಂಹಪ್ಪ, ನೀರಾವರಿ ಮತ್ತು ಕೃಷಿ ತಜ್ಞ

ನೀರಾವರಿ ಮತ್ತು ಕೃಷಿ ತಜ್ಞ ಪ್ರೊ. ನರಸಿಂಹಪ್ಪ ಅವರನ್ನು ಸಂಪರ್ಕಿಸಿದಾಗ, “ದೇಶ ಮತ್ತು ರಾಜ್ಯದಲ್ಲಿ ಬೆಳೆ ಪರಿಹಾರ ಎನ್ನುವ ಪರಿಕಲ್ಪನೆಯೇ ಇಲ್ಲ. ಬೀಜ, ಗೊಬ್ಬರ, ಕಾರ್ಮಿಕರ ಖರ್ಚನ್ನು ಸರಿದೂಗಿಸಲು ಇನ್‌ಪುಟ್‌ ಸಬ್ಸಿಡಿಯನ್ನು ಸರ್ಕಾರಗಳು ಕೊಡುತ್ತ ಬಂದಿವೆ. ವೈಜ್ಞಾನಿಕವಾದ ಬೆಳೆ ಪರಿಹಾರ ಯೋಜನೆ ರಾಜ್ಯಕ್ಕೆ ಅಗತ್ಯವಿದೆ. ಕಾಂಗ್ರೆಸ್‌ ಸರ್ಕಾರ ಇದಕ್ಕೆ ದೃಢ ಮನಸ್ಸು ಮಾಡಬೇಕು. ಜನತಾ ಪಕ್ಷ ಇದ್ದಿದ್ದರೆ ಬಹುಶಃ ಈ ಯೋಜನೆ ಜಾರಿಗೆ ಬರುತ್ತಿತ್ತು ಅಂತ ನನಗೆ ಅಭಿಪ್ರಾಯ. ಬಿಜೆಪಿಯಿಂದ ಇಂತಹ ಯೋಜನೆ ಜಾರಿ ಕಷ್ಟ. ಬೆಳೆ ಪರಿಹಾರದ ಬಗ್ಗೆ ನೀತಿ ನಿಯಮಗಳನ್ನು ರೂಪಿಸಿ ಕೇಂದ್ರ ಸರ್ಕಾರದ ಜೊತೆ ಕುಳಿತು ಮಾತನಾಡಿ ಜಾರಿಗೆ ತರಬೇಕು. ಆಗ ರೈತರ ಬದುಕು ಹಸನಾಗಲು ಸಾಧ್ಯ” ಎಂದು ತಿಳಿಸಿದರು.

“ಪ್ರಧಾನ ಮಂತ್ರಿ ಫಸಲ್ ಬಿಮಾ ಬೆಳೆ ವಿಮೆ ಯೋಜನೆ ಜಾರಿಯಲ್ಲಿದೆ. ಆದರೆ ಈ ಯೋಜನೆ ಸಾಕಷ್ಟು ಲೋಪದೋಷಗಳನ್ನು ಹೊಂದಿದೆ. ಖಾಸಗಿ ಕಂಪನಿಗಳಿಗೆ ಪ್ರೀಮಿಯಮ್‌ ಮೊತ್ತ ಕಟ್ಟುವ ಬದಲು ರೈತರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ ಪ್ರೀಮಿಯಮ್‌ ಮೊತ್ತ ಕಟ್ಟುವಂತಾಗಬೇಕು. ಆಗ ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರು ಮುಂದೆ ಬರುತ್ತಾರೆ” ಎಂದು ಪ್ರೊ. ನರಸಿಂಹಪ್ಪ ಅಭಿಪ್ರಾಯಪಟ್ಟರು.

ಸಿದಗೌಡ ಮೋದಗಿ
ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರು

“ರಾಜ್ಯದಲ್ಲಿ ಬೆಳೆ ಪರಿಹಾರ ಯೋಜನೆ ಖಂಡಿತ ಜಾರಿಗೆ ಬರಬೇಕಿದೆ. ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಕಾಲಕಾಲಕ್ಕೆ ವೇತನ, ಟಿ.ಎ, ಡಿ.ಎ ಹೆಚ್ಚಿಸಿಕೊಳ್ಳುವುದಿಲ್ಲವೇ? ಅವರ ಬದುಕು ಮಾತ್ರ ಉತ್ತಮವಾಗಬೇಕು, ರೈತರ ಬದುಕು ಹೀಗೆ ಹಾಳಾಗುತ್ತಲೇ ಇರಬೇಕಾ? ರೈತರ ಆರ್ಥಿಕ ಸ್ಥಿತಿಗತಿ ಉತ್ತಮವಾಗುವುದು ಬೇಡವಾ? ಹವಾಮಾನ ವೈಪರೀತ್ಯದಿಂದ ಬೆಳೆ ಕೈಗೆ ಬಂದರೆ ರೈತರು ಉಣಬೇಕು ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕು. ಈ ಅನ್ಯಾಯ ಇನ್ನೂ ಎಷ್ಟು ದಿನ? ಇನ್ನಾದರೂ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಕೃಷಿ ವಲಯಕ್ಕೆ ಆವರ್ತ ನಿಧಿಯನ್ನು ಸ್ಥಾಪಿಸಬೇಕು. ಹಣದುಬ್ಬರ ಏರಿಕೆ ಅನುಗುಣವಾಗಿ ಬೆಳೆ ಹಾನಿಗೆ ಪರಿಹಾರ ನೀಡಬೇಕು” ಎಂದು ಭಾರತೀಯ ಕೃಷಿಕ ಸಮಾಜ (ಸಂ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಒತ್ತಾಯಿಸಿದರು.

ನಲಿ ಕೃಷ್ಣ
ನಲಿ ಕೃಷ್ಣ, ರಾಮನಗರದ ರೈತ ಹೋರಾಟಗಾರ

“ಒಂದು ಎಕರೆಗೆ ಬೆಳೆ ಇಳುವರಿ ಅಂದಾಜು ಮಾಡಿ ನಷ್ಟದ ಪರಿಹಾರ ಕೊಡಬೇಕು. ಹಾನಿಗೊಳಗಾದ ಬೆಳೆಗೆ ಮಾರುಕಟ್ಟೆಯ ವ್ಯಾಲ್ಯೂ ಪ್ರಕಾರ ಬೆಳೆ ಪರಿಹಾರ ಸಿಗಬೇಕು. ತೋಟಗಾರಿಕೆ ಬೆಳೆಗಳಿಗೆ ಅವುಗಳ ಜೀವಿತಾವಧಿಯ ಫಸಲನ್ನು ಗಮನಿಸಿ ಪರಿಹಾರ ನೀಡುವಂತಾಗಬೇಕು. ಸಾಂಕೇತಿಕ ಪರಿಹಾರ ನಮಗೆ ಬೇಡವೇ ಬೇಡ. ಬೆಳೆ ಹಾನಿಯ ಪ್ರಮಾಣವನ್ನು ಶೇ.90 ರಷ್ಟಾದರೂ ಸರ್ಕಾರ ತುಂಬಿಕೊಟ್ಟಾಗ ಅನ್ನದಾತರು ನಿಟ್ಟಿಸಿರು ಬಿಡಲು ಸಾಧ್ಯ. ಅದು ಕೂಡ ಪರಿಹಾರ ತಕ್ಷಣವೇ ಸಿಗಬೇಕು. ಮುಂದಿನ ಬೆಳೆಗೆ ಸಾಲ ಮಾಡಿ ಯಾವ ರೈತರೂ ಬಿತ್ತನೆ ಮಾಡದಂತಹ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಬೇಕು. ಬೆಂಕಿ ಬಿದ್ದಾಗ ಅಗ್ನಿ ಶಾಮಕ ದಳ ಹೇಗೆ ಸಿದ್ಧವಾಗಿರುತ್ತದೋ ಅದೇ ರೀತಿ ಪ್ರಕೃತಿ ವಿಕೋಪವಾದಾಗ ಬೆಳೆ ಹಾನಿಗೆ ಅಧಿಕಾರಿ ವರ್ಗ ಸಿದ್ಧವಾಗಿರಬೇಕು” ಎಂದು ರಾಮನಗರದ ರೈತ ಹೋರಾಟಗಾರ ನಲಿ ಕೃಷ್ಣ ಹೇಳಿದರು.

ಬಡವರ, ದೀನ ದಲಿತರ, ರೈತರ ಪಕ್ಷ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಂಗ್ರೆಸ್‌ ಸರ್ಕಾರ ಇನ್ನಾದರೂ ರೈತರ ಬಗ್ಗೆ ಗಂಭೀರವಾಗಿ ಯೋಚಿಸಿ ಪ್ರತ್ಯೇಕ ಬೆಳೆ ಪರಿಹಾರ ಯೋಜನೆಯನ್ನು ಜಾರಿಗೆ ತರಲು ದಿಟ್ಟ ಹೆಜ್ಜೆ ಇಡಬೇಕಿದೆ. ಬೆಳಗಾವಿ ಚಳಿಗಾಲ ಅಧಿವೇಶನ ಸರ್ಕಾರದ ಮುಂದಿದೆ. ಇಲ್ಲಿ ಬೆಳೆ ಪರಿಹಾರ ವಿತರಣೆ ಬಗ್ಗೆ ವೈಜ್ಞಾನಿಕ ನೀತಿ, ನಿಯಮಗಳನ್ನು ರೂಪಿಸಿ ಹೊಸ ಕಾಯ್ದೆಯನ್ನು ಜಾರಿಗೆ ತರಬೇಕು. ಉಳಿದ ರಾಜ್ಯಗಳಿಗೂ ಕರ್ನಾಟಕದ ನಡೆ ಮಾದರಿಯಾಗುವಂತಾಗಬೇಕು. ಆಗ ಕೇಂದ್ರ ಸರ್ಕಾರದ ಸಹಕಾರ ಕೋರಲು, ಧೈರ್ಯದಿಂದ ಕೇಂದ್ರದೊಂದಿಗೆ ವ್ಯವಹರಿಸಲು ಇನ್ನೂ ಹೆಚ್ಚು ಅನುಕೂಲವಾಗುತ್ತದೆ. ಇದರಿಂದ ರೈತರ ಬದುಕು ಮತ್ತಷ್ಟು ಹಸನಾಗಬಹುದು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

Download Eedina App Android / iOS

X