ಚಿಕ್ಕನಾಯಕನಹಳ್ಳಿ | ಎಪ್ಪತ್ತು ಗಿಡ ನೆಟ್ಟು ಹುಟ್ಟುಹಬ್ಬ ಆಚರಣೆ ; ಅಧ್ಯಾಪಕಿಯ ಪರಿಸರ ಕಾಳಜಿ

Date:

Advertisements

ಅಪರೂಪದ ದಿಟ್ಟೆ ಮತ್ತು ಪುರುಷಾಧಿಕ್ಯಕ್ಕೆ ಬಂಡಾಯ ಒಡ್ಡಿನಿಂತ ಅಪ್ಪಟ ಮಹಿಳಾ ಹೋರಾಟಗಾರ್ತಿ ಸಾಹೇರಾ ಬಾನು ಬಿ. ಎಸ್


ತಮ್ಮ ಹುಟ್ಟುಹಬ್ಬದ ದಿನವನ್ನು ಗಿಡ ನೆಡುವ ಮೂಲಕ ನೆನಪಿಸಿಕೊಂಡ ಅಧ್ಯಾಪಕಿ ಬಿ ಎಸ್ ಸಾಹೇರಾ ಬಾನು, ಬುಧವಾರದಂದು ಕಾತ್ರಿಕೆಹಾಲ್-ತೀರ್ಥಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 70 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಗೆ ಮಾದರಿಯಾದರು.

ಕಾತ್ರಿಕೆಹಾಲ್ ಗ್ರಾಮದ ಡಾ.ಅಂಬೇಡ್ಕರ್ ಪ್ರೌಢಶಾಲೆಯ ಅಧ್ಯಾಪಕಿಯಾದ ಇವರು, ಅಧ್ಯಾಪನ ವೃತ್ತಿಯ ಜೊತೆಗೆ ಒಂದಿಲ್ಲೊಂದು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಈ ಹಿಂದೆ, ಕೆಂಪರಾಯನಹಟ್ಟಿಯ ಮಾರ್ಗದಲ್ಲಿ ಬಸ್ ಸೌಕರ್ಯವಿಲ್ಲದೆ ನಿತ್ಯ ಪರದಾಡುತ್ತಿದ್ದ ಶಾಲಾ ಮಕ್ಕಳಿಗಾಗಿ ಸ್ಥಳೀಯ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಬಳಿ ಮನವಿ ಸಲ್ಲಿಸಿದ್ದರು. ಅವರಿಂದ ಏನೂ ಪ್ರಯೋಜನವಾಗದ ಕಾರಣ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರೆಗೂ ಬಸ್ ಸೌಕರ್ಯಕ್ಕಾಗಿ ತಮ್ಮ ಮನವಿಯನ್ನು ಕೊಂಡೊಯ್ದರು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆದೇಶದ ಮೇರೆಗೆ ಅಂತಿಮವಾಗಿ ಆ ಮಾರ್ಗಕ್ಕೆ ಬಸ್ ಸೌಕರ್ಯ ಒದಗಿತು.

Advertisements

ಹಾರ್ಮೋನಲ್ ದುಷ್ಪರಿಣಾಮಗಳಿಗೆ ಒಳಗಾಗಿ ಕೊಂಚ ಅನಿಯಮಿತವಾಗಿ ವರ್ತಿಸುವ ಹರೆಯದ ಹೆಣ್ಣುಮಕ್ಕಳಿಗೆ ದೆವ್ವ ಹಿಡಿದಿದೆ ಎಂದು ಸ್ವಂತ ತಾಯ್ತಂದೆಯರೇ, ನಾಟಿವೈದ್ಯ ಅಥವಾ ದೆವ್ವ ಬಿಡಿಸುವ ತಾಂತ್ರಿಕನ‌ ಬಳಿ ಕರೆದೊಯ್ದು ಬೇವಿನಸೊಪ್ಪಿನಲ್ಲಿ ಅವರನ್ನು ಬೇಕಾಬಿಟ್ಟಿ ಬಡಿಸುವಂತಹ ಕಂದಾಚಾರ ಮತ್ತು ಮೌಢ್ಯಾಚರಣೆ ಮಾಡುತ್ತಿರುವ ಪೋಷಕರ ಬಗ್ಗೆ ಇವರಿಗೆ ತಿಳಿದುಬಂದರೆ, ಅಂಥವರ ವಿರುದ್ಧ ಯುದ್ಧವನ್ನೇ ಸಾರಿಬಿಡುವ ದಿಟ್ಟೆ ಸಾಹೇರಾ ಬಾನು, ಅಲ್ಲಿಂದ ಆ ಹೆಣ್ಣುಮಗಳನ್ನು ಬಿಡಿಸಿ ಕರೆತಂದು ತನ್ನ ಮನೆಯಲ್ಲೇ ವಾರಗಟ್ಟಳೆ ಇಟ್ಟುಕೊಂಡು, ಆಕೆಯನ್ನು ಸಂತೈಸಿ, ಆಕೆಯ ಓದಿಗೆ ಅನುವು ಮಾಡಿಕೊಟ್ಟು, ಪರೀಕ್ಷೆ ಬರೆಯಿಸಿ, ಆಕೆಯ ಅಂತರಂಗಕ್ಕೆ ಛಲ ಮತ್ತು ಧೈರ್ಯ ತುಂಬಿ, ಬದುಕುವ ಭರವಸೆ ಮೂಡಿಸಿ ಕಳಿಸಿರುವ ಉದಾಹರಣೆಗಳು ಹಲವಾರು.

1000735434

ಕಾತ್ರಿಕೆಹಾಲ್ ಗ್ರಾಮದ ಡಾ ಅಂಬೇಡ್ಕರ್ ಪ್ರೌಢಶಾಲೆಯ ಅಧ್ಯಾಪಕಿಯಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿ ಎಸ್ ಸಾಹೇರಾ ಬಾನು, ತಮ್ಮ ಅಧ್ಯಾಪನವೃತ್ತಿಯ ಜೊತೆ ಜೊತೆಯಲ್ಲೇ ಸುತ್ತಲಿನ ಪರಿಸರ, ಸಾಮಾಜಿಕ ಮತ್ತು ಸಾಂಪ್ರದಾಯಿಕ ಮೌಢ್ಯ, ಕಂದಾಚಾರ ಹಾಗೂ ಮಹಿಳೆಯರ ಮೇಲಿನ ಶೋಷಣೆಯ ವಿರುದ್ಧ ಪ್ರತಿಭಟಿಸುವ ದಿಟ್ಟತನ ರೂಢಿಸಿಕೊಂಡಿರುವವರು. ಬಾಲ್ಯದಿಂದಲೂ ಬಂಡಾಯಗಾರ್ತಿಯಾಗೇ ಬೆಳೆದುಬಂದ ಸಾಹೇರಾ ಬಾನು’ರವರಿಗೆ ಅವರ ತಾಯಿಯೇ ಪ್ರೇರಣೆ ಮತ್ತು ಸ್ಫೂರ್ತಿ. ಇವರ ತಾಯಿ ಕೂಡ ಇದೇ ಅಧ್ಯಾಪನ ವೃತ್ತಿಯಲ್ಲಿದ್ದವರು. ಮೂವತ್ತು ವರ್ಷಗಳಿಗೂ ಹೆಚ್ಚುಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಅವರು, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

1000735433

ತೀರ್ಥಪುರ-ಕಾತ್ರಿಕೆಹಾಲ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 70 ಗಿಡಗಳನ್ನು ನೆಡುವುದರ ಮೂಲಕ ಹುಟ್ಟುಹಬ್ಬದ ದಿನವನ್ನು ಆಚರಿಸಿಕೊಳ್ಳುವ ಸಮಾಜಮುಖಿ ಆಯಾಮಕ್ಕೆ ಇವರು ಮಾದರಿಯಾಗಿದ್ದಾರೆ. ಇವರನ್ನು ಗೌರವ ಮತ್ತು ಮೆಚ್ಚಿಗೆಯಿಂದ ಕಾಣುವ ಗ್ರಾಮಸ್ಥರು ನಮ್ಮೂರಿಗೆ ಅತ್ತ್ಯುತ್ತಮ ಶಿಕ್ಷಕಿಯೊಬ್ಬರು ಸಿಕ್ಕಿರುವುದರಿಂದ ‘ನಮಗೆ ನಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಚಿಂತಿಲ್ಲ’ ಎಂದು ಪ್ರಶಂಸಿಸುತ್ತಾರೆ.

ತಮ್ಮ ಮತ್ತು ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ 100 ಗಿಡಗಳನ್ನು ನೆಟ್ಟು ಅವನ್ನು ಪೋಷಿಸಿ ಬೆಳೆಸುವ ಸಂಕಲ್ಪ ಇಟ್ಟುಕೊಂಡಿದ್ದ ಅಧ್ಯಾಪಕಿ ಸಾಹೇರಾ ಬಾನು, ಕಾಲೇಜು ಆವರಣದಲ್ಲಿ ಜಾಗ ಸಾಲದೇ ಬಂದದ್ದಕ್ಕೆ ಕೇವಲ 70 ಗಿಡಗಳನ್ನು ನೆಟ್ಟು ತೃಪ್ತರಾದರು. ಸಾಮಾಜಿಕ ವಲಯ ಅರಣ್ಯ ಇಲಾಖೆಯ ನರ್ಸರಿಯಿಂದ ಪಡೆದುತಂದಿದ್ದ ಆರೋಗ್ಯವಂತ ಗಿಡಗಳನ್ನು ಬುಧವಾರ ಬೆಳಗ್ಗೆ ಕಾತ್ರಿಕೆಹಾಲ್ ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಹಾಯ ಪಡೆದು, ಕಾಲೇಜು ಆವರಣದಲ್ಲಿನ ಖಾಲಿ ಜಾಗದಲ್ಲಿ ನೆಟ್ಟು ಗಿಡಗಳಿಗೆ ನೀರುಣಿಸಿದರು.

1000735442

ಇದೇ ಸಂದರ್ಭದಲ್ಲಿ, ಗ್ರಾಮದ ಹಿರಿಯರಾದ ಮೂರ್ತಪ್ಪ, ಕಾಲೇಜಿನ ಪ್ರಾಂಶುಪಾಲ ಶಿವರುದ್ರಪ್ಪ, ಗ್ರಾಮದ ಮಾರಪ್ಪ ಮತ್ತು ಪರಮೇಶ್, ವಿನಯ್, ಮಾರುತಿ, ಮಣಿಕಂಠ, ಮದನ, ಪ್ರಸನ್ನ, ಸಂದೀಪ, ಯಶ್ವಂತ, ಸಂತೋಷ, ರಮೇಶ, ಗಿರೀಶ ಸೇರಿದಂತೆ ಇನ್ನೂ ಹತ್ತಾರು ಮಂದಿ ಹಳೆಯ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವರದಿ- ಸಂಚಲನ ಚಿಕ್ಕನಾಯಕನ ಸೀಮೆಯಿಂದ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

Download Eedina App Android / iOS

X