ನಿರಾಶ್ರಿತ ದಂಪತಿಯ ಏಳು ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 30ರಂದು ಮಗುವೊಂದು ಫುಟ್‌ಪಾತ್‌ನಲ್ಲಿ ಒಬ್ಬಂಟಿಯಾಗಿ ಅಳುತ್ತಿರುವುದನ್ನು ವ್ಯಕ್ತಿಯೊಬ್ಬರು ಬರ್ತುಲ್ಲಾ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದರು.
“ಈ ವೇಳೆ ಮಗುವಿನ ಪೋಷಕರೂ ಕೂಡಾ ನಮ್ಮನ್ನು ಸಂಪರ್ಕಿಸಿದ್ದಾರೆ. ನಾವು ಮಗುವನ್ನು ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ವೈದ್ಯರು ಮಗುವಿನ ಖಾಸಗಿ ಅಂಗದಲ್ಲಿರುವ ಗಾಯದ ಗುರುತುಗಳನ್ನು ನೋಡಿ ಆಘಾತಗೊಂಡರು” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ಶಾಲಾ ಶಿಕ್ಷಕ ಹಾಜಿಮಲಂಗ ಗಿಣಿಯಾರ ಬಂಧನ
“ಮಗುವಿನ ದೇಹ ಪೂರ ಗೀರುಗಳ ಗುರುತುಗಳಿವೆ. ಸ್ಪಷ್ಟವಾಗಿ ಲೈಂಗಿಕ ದೌರ್ಜನ್ಯ ನಡೆದಿರುವ ಸೂಚನೆಗಳು ಕಂಡುಬಂದಿದೆ. ಈ ಬಗ್ಗೆ ನಾವು ತನಿಖೆ ಆರಂಭಿಸಿದ್ದೇವೆ. ಸದ್ಯ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.
“ಮಗುವನ್ನು ಫುಟ್‌ಪಾತ್‌ನಿಂದ ಎತ್ತಿಕೊಂಡು ಹೋಗಿ, ಎಲ್ಲೋ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದು ಯಾರೋ ಅಲೆಮಾರಿಗಳ ಕೆಲಸವಾಗಿರಬಹುದು. ಅಪರಾಧ ಎಸಗಿ ಮತ್ತೆ ಮಗುವನ್ನು ಫುಟ್‌ಪಾತ್‌ನಲ್ಲಿ ಬಿಟ್ಟು ಹೋಗಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
