ಲೈಂಗಿಕ ಕಿರುಕುಳ, ದೌರ್ಜನ್ಯ, ಹಿಂಸೆಗಳಿಂದ ನೊಂದ ಸಂತ್ರಸ್ತ ಬಾಲಕಿಯರಿಗೆ ಆತ್ಮಸ್ಥೈರ್ಯ, ಧೈರ್ಯ ತುಂಬಬೇಕಿದ್ದ ಬಾಲಕಿಯರ ಮಂದಿರದಲ್ಲಿಯೇ ಸಂತ್ರಸ್ತೆಯರ ಮೇಲೆ ದೌರ್ಜನ್ಯಗಳು ನಡೆದಿರುವ ಆಘಾತಕಾರಿ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ನಗರದಲ್ಲಿರುವ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮತ್ತು ಸಹಾಯಕಿ ಬಾಲಕಿಯರನ್ನು ಕಟ್ಟಿ ಹಾಕಿ ಹಲ್ಲೆ ನಡಸಿ, ವೇಶ್ಯಾವೃತ್ತಿ ಅನುಸರಿಸುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ರಕ್ಷಣೆ ಮತ್ತು ನೆರವಿಗಾಗಿ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬಾಲಕಿಯರ ಮಂದಿರಗಳನ್ನು ನಡೆಸುತ್ತಿದೆ. ಮಂದಿರದಲ್ಲಿ ನೊಂದ ಬಾಲಕಿಯರಿಗೆ ಆಹಾರ, ವಸತಿ ನೀಡಿ ಅವರನ್ನು ಪೋಷಿಸಲಾಗುತ್ತದೆ. ಆದರೆ, ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರವು ಹೆಣ್ಣುಮಕ್ಕಳ ಪಾಲಿಗೆ ಯಮ ಸ್ವರೂಪಿಯಾಗಿದೆ.
ಸಂತ್ರಸ್ತ ಹೆಣ್ಣುಮಕ್ಕಳಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಬೇಕಾದ ಬಾಲಮಂದಿರದ ಅಧೀಕ್ಷಕಿ ಮಮತಾ ಮತ್ತು ಸಹಾಯಕಿ ಸರಸ್ವತಿ ಬಾಲಕಿಯರಿಗೆ ದೈಹಿಕ ಹಿಂಸೆ, ಮಾನಸಿಕ ಕಿರುಕುಳ ನೀಡಿದ್ದಾರೆ. ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯ ಹಾಕಿದ್ದಾರೆ. ನಿರಾಕರಿಸಿದ ಬಾಲಕಿಯರನ್ನು ಕಟ್ಟಿ ಹಾಕಿ, ಅವರ ಮೇಲೆ ಹಲ್ಲೆಗೈದು, ಬರೆ ಹಾಕಿದ್ದಾರೆ. ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಮಂದಿರಕ್ಕೆ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಭೇಟಿ ನೀಡದಾಗ ಬಾಲಕಿಯರು ತಾವು ಅನುಭಿಸುತ್ತಿರುವ ಹಿಂಸೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಾಲಮಂದಿರದ ಅಧೀಕ್ಷಕಿ ಮಮತಾ ಮತ್ತು ಸಹಾಯಕಿಸ ಸರಸ್ವತಿ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಸೂಚನೆ ನೀಡಿದ್ದು, ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಈದಿನ.ಕಾಮ್ ಯತ್ನಿಸಿದ್ದು, ಅವರು ಸಂಪರ್ಕಕ್ಕೆ ದೊರೆತಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕಬಳಿಕ ಸುದ್ದಿಯನ್ನು ಅಪ್‌ಡೇಟ್ ಮಾಡಲಾಗುವುದು.
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಈದಿನ.ಕಾಮ್ ಪ್ರಕಟಿಸಿದ ಕೆಲ ವರದಿ ಇಲ್ಲಿವೆ;
_____________________________________________________________
ಹೊಸಕಾಲದ ವಿಕೃತಿ | ಹೆಣ್ಣನ್ನು ಅವಮಾನಿಸುವ ವೇದಿಕೆಯಾಗುತ್ತಿದೆಯೇ ಸಾಮಾಜಿಕ ಜಾಲತಾಣ?
ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರನ್ನು ಮಾರಿಯರಂತೆ ಬಿಂಬಿಸುವ, ದಡ್ಡರೆಂದು ಅಪಹಾಸ್ಯ ಮಾಡುವ, ನಡೆ, ವರ್ಣನೆ, ನಿರೂಪಣೆಗಳ ಮೂಲಕ ಮಹಿಳೆಯರನ್ನು ಅಪಮಾನ ಮಾಡುವ ಪೋಸ್ಟರ್‌ಗಳು, ಚಿತ್ರಗಳು, ರೀಲ್ಸ್-ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಅವುಗಳನ್ನು ಮಹಿಳೆಯರು ಅದರಲ್ಲೂ ಯುವತಿಯರು ಒಪ್ಪಿಕೊಳ್ಳುವಂತಹ ಮನಸ್ಥಿತಿಯನ್ನೂ ಹುಟ್ಟುಹಾಕಲಾಗಿದೆ. ಇದೆಲ್ಲದರ ನಡುವೆ, ಮಹಿಳೆಯರ ಪ್ರತಿಭೆಯನ್ನೂ ತಮ್ಮ ಟ್ರೋಲ್‌ಗಳ ಲಾಲಸೆಗಾಗಿ ಅವಹೇಳನ ಮಾಡುವ ಪ್ರವೃತ್ತಿಯೂ ಬೆಳೆಯುತ್ತಿದೆ. ನಿತ್ಯ ಮಹಿಳೆಯರು ಅಪ್‌ಲೋಡ್ ಮಾಡುವ ವಿಡಿಯೋ, ರೀಲ್ಸ್‌ಗಳಲ್ಲಿ ಹೆಚ್ಚಾಗಿ ಅವರ ಪ್ರತಿಭೆಯನ್ನು ಪುರಸ್ಕರಿಸುವುದಕ್ಕಿಂತ ಅವರ ಸೌಂದರ್ಯ ಕುರಿತ ಕಮೆಂಟ್‌ಗಳು ಹೆಚ್ಚಾಗುತ್ತಿವೆ. ಹೆಣ್ಣಿನ ಅಂದ-ಚೆಂದ, ಮೈಬಣ್ಣ, ದೇಹದ ಗಾತ್ರ, ಆಕಾರ ಸೇರಿದಂತೆ ಅವರ ಬಾಹ್ಯ ಸೌಂದರ್ಯದ ಬಗ್ಗೆ ಕೀಳು ಅಭಿರುಚಿಯ ಕಮೆಂಟ್ ಮಾಡುವ, ಅವಮಾನಿಸುವ ಪ್ರವೃತ್ತಿ ಮಿತಿ ಮೀರುತ್ತಿದೆ.
ಪ್ರಜ್ವಲ್ ಲೈಂಗಿಕ ಹಗರಣ | ಹಾಸನ ರಿಪಬ್ಲಿಕ್ ಮತ್ತು ರಾಜಕೀಯ ವಿಕೃತಿ
ಸಂತ್ರಸ್ತೆಯ ಕುಟುಂಬದವರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿ ಬಲವಂತವಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೆ, ತನ್ನ ಕೃತ್ಯದ ವಿಡಿಯೋಗಳನ್ನು ತಾನೇ ರೆಕಾರ್ಡ್ ಮಾಡಿ, ಸಂತ್ರಸ್ತೆಯನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಓರ್ವ ಸಂತ್ರಸ್ತೆ ಆರೋಪಿಸಿದ್ದಾರೆ. ರಾಜ್ಯಸಭಾ ಸಂಸದರಾಗಿದ್ದ ದೇವೇಗೌಡರ ಅಧಿಕೃತ ನಿವಾಸವನ್ನೂ ಈ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಲೈಂಗಿಕ ಹಗರಣವು ಹೊರಬರುತ್ತಿದ್ದಂತೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಭುಗಿಲೆದ್ದವು. ಸಂಸದ ಪ್ರಜ್ವಲ್‌ನನ್ನು ಬಂಧಿಸುವಂತೆ ಒತ್ತಾಯಗಳು ಕೇಳಿಬಂದವು. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟವೂ ಆರಂಭವಾಯಿತು.