ಮುಡಾ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಗಳನ್ನು ಕರ್ನಾಟಕ ಹೈಕೋರ್ಟ್ ಇಂದು ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಏಕಸದಸ್ಯ ಅಥವಾ ಬೇರೆ ಪೀಠದ ವಿಚಾರಣೆಯಲ್ಲಿ ಮಧ್ಯ ಪ್ರವೇಶಿಸಲಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಪ್ರಶ್ನಿಸಿ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ಜೆ ದೇವರಾಜು ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ, “80 ವರ್ಷದ ಜೆ ದೇವರಾಜು ಅವರು ರಾಜಕೀಯ ದಾಳಿಯಲ್ಲಿ ಸಿಲುಕಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೋರಲಾಗಿದೆ. ಈ ವಿಚಾರ ಏಕಸದಸ್ಯ ಪೀಠದ ಮುಂದಿದೆ. ಹೀಗಾಗಿ, ಅಲ್ಲಿ ಜೆ ದೇವರಾಜು ಅವರಿಗೆ ರಕ್ಷಣೆ ನೀಡಬೇಕಿದೆ” ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಸರ್ಕಾರಿ ಸಂಸ್ಥೆಗಳಿಂದ ಮಾತ್ರ ಬೀಜ ಖರೀದಿಸಿ: ಸರ್ಕಾರದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
“ಜೆ ದೇವರಾಜು ಅವರು 2004ರಲ್ಲಿ ಭೂಮಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದುನನಿಗೆ ಮಾರಾಟ ಮಾಡಿದ್ದಾರೆ. ದೇವರಾಜು ಅವರ ವಾದ ಆಲಿಸದೆಯೇ ತನಿಖೆಗೆ ಆದೇಶಿಸಲಾಗಿದೆ. ವಾದ ಆಲಿಸದೆಯೇ ತನಿಖೆಗೆ ಹೇಗೆ ಆದೇಶಿಸಲಾಗುತ್ತದೆ? ಈ ಸಂಬಂಧ ಹಲವು ಸುಪ್ರೀಂ ಕೋರ್ಟ್ ಆದೇಶಗಳಿವೆ” ಎಂದು ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೈಕೋರ್ಟ್ ಪೀಠವು, “ನಾವು ಏಕಸದಸ್ಯ ಪೀಠ ಅಥವಾ ಬೇರೊಂದು ಪೀಠದಲ್ಲಿನ ವಿಚಾರಣೆಯಲ್ಲಿ ಮಧ್ಯ ಪ್ರವೇಶಿಸಲಾಗದು” ಎಂದು ತಿಳಿಸಿದೆ. “ನಮಗೆ ರಕ್ಷಣೆ ಒದಗಿಸಬೇಕು. ನಾವು ಮಧ್ಯಪ್ರವೇಶ ಮಾಡಬೇಕು ಎಂದು ಕೇಳುತ್ತಿಲ್ಲ” ಎಂದು ದೇವರಾಜು ಪರ ವಕೀಲರು ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಮೂರು ಮೇಲ್ಮನವಿಗಳಲ್ಲಿನ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಿದೆ.
