ಸ್ವಾತಂತ್ರ್ಯ ಪೂರ್ವದಿಂದಲೂ ವಕೀಲರು ತಮ್ಮ ವೃತ್ತಿಪರತೆ ಮೆರೆದಿದ್ದು, ದೇಶ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ತಮ್ಮ ವೃತ್ತಿ ತ್ಯಜಿಸಿ ಹೋರಾಟದಲ್ಲಿ ಧುಮುಕಿದ ಹಲವು ಉದಾಹರಣೆಗಳಿವೆ. ಜಗತ್ತಿನಲ್ಲಿಯೇ ವಕೀಲಿಕೆ ವೃತ್ತಿ ಶ್ರೇಷ್ಠವಾದದ್ದು, ವಕೀಲರು ಮಾತ್ರ ನ್ಯಾಯಾಧೀಶರಾಗಲು ಸಾಧ್ಯ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ನ್ಯಾ. ಎಂ.ಭಾರತಿ ಹೇಳಿದರು.
ಬಾಗೇಪಲ್ಲಿ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬ್ರಿಟೀಷರ ಆಡಳಿತದಿಂದ ದೇಶ ಸ್ವಾತಂತ್ರ್ಯ ಪಡೆಯಲು ಹಾಗೂ ಸಂವಿಧಾನ ರಚನೆಯಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಿವಿಲ್ ನ್ಯಾಯಾಧೀಶ ಮಂಜುನಾಥಾಚಾರಿ ಮಾತನಾಡಿ, ವಕೀಲರ ವೃತ್ತಿಯನ್ನು ಆರಾಧಿಸಿದ ಡಾ.ರಾಜೇಂದ್ರ ಪ್ರಸಾದ್ ಅವರು ಉನ್ನತ ಸ್ಥಾನವನ್ನು ಅಲಂಕರಿಸಿದ್ದರು. ಹೀಗಾಗಿ ವಕೀಲರು ವೃತ್ತಿಯಲ್ಲಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಕಕ್ಷಿದಾರರ
ವಿಶ್ವಾಸವನ್ನು ಉಳಿಸಿಕೊಂಡು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಕೀಲರಾದ ನಾರಾಯಣ ಸ್ವಾಮಿ ರಚಿತ (Judgments Decoded For Daily Practice,
7 Landmark Cases That Changed The Indian Judicial System) ಪುಸ್ತಕಗಳನ್ನು ನ್ಯಾಯಾಧೀಶರು ಹಾಗೂ ಹಿರಿಯ ವಕೀಲರು ಬಿಡುಗಡೆ ಮಾಡಿದರು.
ವಕೀಲರ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿಜೆಪಿ ಬೀದಿ ಬಡಿದಾಟದ ಬಗ್ಗೆ ಆರ್‌ಎಸ್‌ಎಸ್ ಏಕೆ ಮಾತನಾಡುತ್ತಿಲ್ಲ?
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಉಪಾಧ್ಯಕ್ಷ ರಾಮಾಂಜಿ, ಕಾರ್ಯದರ್ಶಿ ಮಂಜುನಾಥ್ ಮುಸ್ತಕ್ ಅಹ್ಮದ್, ಬಿ.ಆರ್.ನರಸಿಂಹ ನಾಯ್ಡು, ಎ.ಜಿ.ಸುಧಾಕರ್, ಪ್ರಭಾನಾಗರಾಜು, ಅರುಣಾ ಕುಮಾರಿ ಮತ್ತಿತರರಿದ್ದರು.