ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ | ರಾಹುಲ್ ಆಟಕ್ಕೆ ಹತ್ತು ವರ್ಷ ಮತ್ತು ಪಿಂಕ್ ಬಾಲ್ ಟೆಸ್ಟ್

Date:

Advertisements
ಮೊದಲಿಗಿಂತ ಮಾಗಿರುವ, ಅನುಭವಿ ಆಟಗಾರ ಎನಿಸಿಕೊಂಡಿರುವ ರಾಹುಲ್, 'ಕಳೆದ ಒಂದು ದಶಕದಲ್ಲಿ ಬಹಳಷ್ಟನ್ನು ಕಲಿತಿದ್ದೇನೆ. ನಡೆದು ಬಂದ ಹಾದಿಗೆ ಆಭಾರಿಯಾಗಿರುವೆ. ಹತ್ತು ವರ್ಷದ ಹಿಂದೆ ಇದೇ ಆಸ್ಟ್ರೇಲಿಯಾದಲ್ಲಿ ಪಯಣ ಆರಂಭವಾಗಿತ್ತು. ಈಗ ಮತ್ತೆ ಉತ್ತಮ ಆರಂಭ ದೊರೆಯುವ ವಿಶ್ವಾಸವಿದೆ. ಅದು ಭವಿಷ್ಯವನ್ನು ಗಟ್ಟಿಗೊಳಿಸಲಿದೆ’ ಎಂದಿದ್ದಾರೆ. 

2014ರ ಡಿಸೆಂಬರ್‌ನಲ್ಲಿ ಕರ್ನಾಟಕದ ಕೆ.ಎಲ್. ರಾಹುಲ್ ‘ಬಾಕ್ಸಿಂಗ್ ಡೇ’ ಟೆಸ್ಟ್‌ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ, ಇದೇ ಡಿಸೆಂಬರ್ 2024ಕ್ಕೆ, ತಮ್ಮ ಕ್ರಿಕೆಟ್ ಬದುಕಿನ ಹತ್ತು ವರ್ಷಗಳನ್ನು ಪೂರೈಸಿದ್ದಾರೆ.

ಕನ್ನಡ ಮತ್ತು ತುಳುವನ್ನು ಸುಲಲಿತವಾಗಿ ಮಾತನಾಡುವ ಕನ್ನಡನಾಡಿನ ರಾಹುಲ್, ಹತ್ತು ವರ್ಷಗಳ ಕ್ರಿಕೆಟ್ ಬದುಕಿನ ಬಗ್ಗೆ ಮಾತನಾಡುತ್ತ, ‘ಹತ್ತು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಟೆಸ್ಟ್ ಸರಣಿಯಲ್ಲಿ ಆಡಿದ್ದೆ. ಬಾಲ್ಯದಿಂದಲೂ ಭಾರತ–ಆಸ್ಟ್ರೇಲಿಯಾ ಸರಣಿಗಳನ್ನು ಟಿವಿಯಲ್ಲಿ ನೋಡುತ್ತ ಬೆಳೆದಿದ್ದೆ. ಬೆಳಗಿನ ಜಾವ 5 ಗಂಟೆಗೆ ಎದ್ದು ಟಿವಿಯಲ್ಲಿ ಈ ತಂಡಗಳ ಪಂದ್ಯಗಳನ್ನು ಅಪ್ಪನೊಂದಿಗೆ ವೀಕ್ಷಿಸುತ್ತಿದ್ದೆ’ ಎಂದು ಬಾಲ್ಯದ ಅನುಭವವನ್ನು ಮೆಲುಕು ಹಾಕಿದ್ದಾರೆ.

ರಾಹುಲ್ ಇಲ್ಲಿಯವರೆಗೆ 54 ಟೆಸ್ಟ್‌ಗಳಲ್ಲಿ 3084 ರನ್ ಗಳಿಸಿದ್ದಾರೆ. ಆರಂಭದಲ್ಲಿ ಹುಟ್ಟು ಹಾಕಿದ್ದ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ ಎನ್ನುವುದು ಅವರ ಅನುಭವಕ್ಕೂ ಬಂದಿದೆ. ಕೊಂಚ ಕೊರಗಿನಿಂದಲೇ, ‘ಹತ್ತು ವರ್ಷಗಳ ಹಿಂದೆ ನನ್ನ ತಲೆಯಲ್ಲಿ ಬಹಳಷ್ಟು ಯೋಚನೆಗಳಿದ್ದವು. ಈಗಿನಷ್ಟು ಖಚಿತತೆ ಆಗಿರಲಿಲ್ಲ. ಬ್ಯಾಟಿಂಗ್ ಲಯ, ಅಗತ್ಯಕ್ಕೆ ತಕ್ಕಂತೆ ಆಡುವುದು, ರನ್‌ ಗಳಿಸುವ ವಿಧಾನಗಳು, ಒತ್ತಡ ನಿರ್ವಹಿಸುವ ಮಾರ್ಗಗಳು, ಸದ್ದು ಗದ್ದಲಗಳು ಮತ್ತು ಟೀಕೆಗಳಿಂದ ದೂರವಿರುವುದು ಹೇಗೆಂದು ತಿಳಿದಿರಲಿಲ್ಲ. ನನಗೂ ಬಹಳಷ್ಟು ರನ್‌ಗಳನ್ನು ಗಳಿಸಬೇಕು. ಕ್ರೀಡಾಂಗಣದ ಸ್ಟ್ಯಾಂಡ್‌ ಮೇಲೆ ನನ್ನ ಹೆಸರು ಬರುವಷ್ಟು ರನ್‌ಗಳನ್ನು ಕಲೆಹಾಕಬೇಕು ಎಂಬ ಆಸೆ ಇದೆ’ ಎಂದಿರುವುದು ಒಬ್ಬ ಮಹತ್ವಾಕಾಂಕ್ಷಿ ಆಟಗಾರನ ಸಹಜ ನುಡಿಗಳೇ ಆಗಿವೆ.

Advertisements

ಮೊದಲಿಗಿಂತ ಮಾಗಿರುವ, ಅನುಭವಿ ಆಟಗಾರ ಎನಿಸಿಕೊಂಡಿರುವ ರಾಹುಲ್, ‘ಕಳೆದ ಒಂದು ದಶಕದಲ್ಲಿ ಬಹಳಷ್ಟನ್ನು ಕಲಿತಿದ್ದೇನೆ. ನಾನು ನಡೆದು ಬಂದ ಹಾದಿಗೆ ಆಭಾರಿಯಾಗಿರುವೆ. ಏರಿಳಿತಗಳು, ಒಳ್ಳೆಯದು ಮತ್ತು ಕೆಟ್ಟದು ಸೇರಿದಂತೆ ಎಲ್ಲದಕ್ಕೂ ಕೃತಜ್ಞನಾಗಿರುವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ದಶಕವು 25 ವರ್ಷಗಳಂತೆ ಭಾಸವಾಗಿದೆ. ಹತ್ತು ವರ್ಷದ ಹಿಂದೆ ಇದೇ ಆಸ್ಟ್ರೇಲಿಯಾದಲ್ಲಿ ಪಯಣ ಆರಂಭವಾಗಿತ್ತು. ಈಗ ಮತ್ತೆ ಉತ್ತಮ ಆರಂಭ ದೊರೆಯುವ ವಿಶ್ವಾಸವಿದೆ. ಅದು ಭವಿಷ್ಯವನ್ನು ಗಟ್ಟಿಗೊಳಿಸಲಿದೆ’ ಎಂದಿದ್ದಾರೆ.

ಇದನ್ನು ಓದಿದ್ದೀರಾ?: ಸಚಿನ್‌ ತೆಂಡೂಲ್ಕರ್‌ನ ಸಾರ್ವಕಾಲಿಕ ದಾಖಲೆ ಮುರಿದ ಇಂಗ್ಲೆಂಡ್‌ ಆಟಗಾರ

ಹತ್ತು ವರ್ಷಗಳ ಹಿಂದೆ ಕೆ.ಎಲ್. ರಾಹುಲ್, ಮೆಲ್ಬರ್ನ್‌ನಲ್ಲಿ ತಮ್ಮ ಮೊದಲ ಪಂದ್ಯ ಆಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ 6ನೇ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ಅವರ ಆಟ ಕ್ರೀಡಾಸಕ್ತರ ಗಮನ ಸೆಳೆಯುವಂತಿರಲಿಲ್ಲ. ರನ್ ಗಳಿಸಲು ಕೂಡ ಸಾಧ್ಯವಾಗಿರಲಿಲ್ಲ. ಆದರೆ ಎರಡನೇ ಟೆಸ್ಟ್‌ನಲ್ಲಿ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ, ರಾಹುಲ್, ತಮ್ಮ ನೆಚ್ಚಿನ ಆರಂಭಿಕ ಕ್ರಮಾಂಕಕ್ಕೆ ಮರಳಿದ್ದರು. ಅದರಲ್ಲಿ ಚೆಂದದ ಶತಕ ಬಾರಿಸಿದ್ದರು. ಆಗ ವೀಕ್ಷಕ ವಿವರಣೆ ನೀಡುವವರಿಂದ, ‘ಕರ್ನಾಟಕದ ರಾಹುಲ್ ದ್ರಾವಿಡ್ ಸ್ಥಾನ ತುಂಬುವ ಮತ್ತೊಬ್ಬ ರಾಹುಲ್ ಉದಯಿಸಿದರು’ ಎಂಬ ಮೆಚ್ಚುಗೆಯ ಮಾತುಗಳು, ಉದ್ಗಾರಗಳು ಕೇಳಿಬಂದಿದ್ದವು. ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ಶೈಲಿ ಕೂಡ ರಾಹುಲ್ ದ್ರಾವಿಡ್ ಅವರ ಶೈಲಿಯನ್ನೇ ಹೋಲುತ್ತಿದ್ದು, ಹೊಡೆತಗಳು ಉತ್ಕೃಷ್ಟವಾಗಿದ್ದವು.

ಇತ್ತೀಚೆಗೆ ತಾನೆ ಮುಗಿದ ಭಾರತ-ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಾಹುಲ್ ಅರ್ಧಶತಕ ಗಳಿಸಿದ್ದರು. ಆ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಸಹಜವಾಗಿ ಇದು ಎರಡನೇ ಟೆಸ್ಟ್‌ನಲ್ಲಿ ಇನ್ನಷ್ಟು ಉತ್ಕೃಷ್ಟ ಹೊಡೆತಗಳಿಗೆ ಕಾರಣವಾಗಬಹುದೆಂಬ ನಿರೀಕ್ಷೆಗಳನ್ನು ಅಭಿಮಾನಿಗಳಲ್ಲಿ ಹುಟ್ಟು ಹಾಕಿದ್ದಾರೆ. 31 ವರ್ಷದ ರಾಹುಲ್, ತಮ್ಮ ವೃತ್ತಿಬದುಕಿನಲ್ಲಿ ಮತ್ತೆ ವೈಭವದ ದಿನಗಳಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಕುತೂಹಲಕರ ವಿಷಯವೆಂದರೆ, ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಯಶಸ್ವಿ ಜಯಸ್ವಾಲ್ ಜೊತೆ ಸೇರಿ, 201 ರನ್ ಪೇರಿಸುವ ಮೂಲಕ ಉತ್ತಮ ಆರಂಭಿಕ ಇನ್ನಿಂಗ್ಸ್‌ ಕಟ್ಟಿದ್ದ ರಾಹುಲ್, ಎರಡನೇ ಟೆಸ್ಟ್‌ನಲ್ಲಿಯೂ ಅದೇ ಸ್ಥಾನದಲ್ಲಿ- ಆರಂಭಿಕ ಆಟಗಾರರಾಗಿ ಆಡಲಿದ್ದಾರೆ ಎಂದು ಘೋಷಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 9.30ಕ್ಕೆ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಎರಡನೇ ಡೇ/ನೈಟ್ ಟೆಸ್ಟ್‌ನಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಎರಡು ದಿನಗಳ ಕಾಲ ಪಿಂಕ್ ಬಾಲ್ ಅಭ್ಯಾಸ ಪಂದ್ಯವನ್ನು ಆಡಿ, ಗೆದ್ದ ಆತ್ಮವಿಶ್ವಾಸದಲ್ಲಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡಕ್ಕೆ ಇದು ಐದನೇ ಪಿಂಕ್ ಬಾಲ್ ಟೆಸ್ಟ್ ಆಗಲಿದೆ. 2015ರಲ್ಲಿ ಶುರುವಾದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಈವರೆಗೆ 22 ಪಂದ್ಯಗಳನ್ನು ಆಡಲಾಗಿದೆ. ಈ ಹಿಂದೆ ನಾಲ್ಕು ಪಿಂಕ್ ಬಾಲ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಗೆದ್ದು ಒಂದರಲ್ಲಿ ಸೋತಿತ್ತು. ಈ ಎಲ್ಲಾ ಪಂದ್ಯಗಳಲ್ಲೂ ಫಲಿತಾಂಶ ಮೂಡಿಬಂದಿರುವುದು ವಿಶೇಷ. ಅಂದರೆ ಯಾವುದೇ ಮ್ಯಾಚ್ ಡ್ರಾನಲ್ಲಿ ಕೊನೆಗೊಂಡಿಲ್ಲ.

ಪಿಂಕ್ ಬಾಲ್ ಕ್ರಿಕೆಟ್

ಆದರೆ, ಶುಕ್ರವಾರದಿಂದ ಆರಂಭವಾಗಲಿರುವ ಅಡಿಲೇಡ್ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು ಎಂದು ಪಿಚ್ ಕ್ಯೂರೇಟರ್ ಹೇಳಿದ್ದಾರೆ. ಶುಕ್ರವಾರ ಭಾರೀ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಯಾವಾಗ ಮಳೆ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಶನಿವಾರ ಮಳೆಯ ಪರಿಣಾಮ ಅಷ್ಟಾಗಿ ಇರುವುದಿಲ್ಲ. ಉಳಿದ ನಾಲ್ಕು ದಿನಗಳು ಸುಗಮವಾಗಿ ಸಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಂದರೆ, ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಪಂದ್ಯ ಮಳೆ ಮೇಲೆ ನಿಂತಿದೆ.

ಇದರ ನಡುವೆಯೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಬಹುದಾದ ತಂಡಗಳ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಆ ಪಟ್ಟಿಯಲ್ಲಿ ಮೊದಲ ಐದು ತಂಡಗಳಲ್ಲಿ ಮೂರಕ್ಕೆ- ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಹೆಚ್ಚಿನ ಅವಕಾಶವಿದೆ. ಆದರೆ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳಿಗೆ ಚಾನ್ಸ್ ಕಡಿಮೆ ಇದ್ದು, ಫೈನಲ್ ರೇಸ್‌ನಿಂದ ಸಂಪೂರ್ಣ ಹೊರಬಿದ್ದಿಲ್ಲದಿರುವುದು ಪೈಪೋಟಿ ಆಟವನ್ನು ಜೀವಂತವಿಟ್ಟಿದೆ.

ಭಾರತ ಕ್ರಿಕೆಟ್ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಾರ್ಡರ್ – ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ 3ರಲ್ಲಿ ಗೆದ್ದು, ಒಂದು ಪಂದ್ಯವನ್ನ ಡ್ರಾ ಮಾಡಿಕೊಂಡರೂ, ಫೈನಲ್‌ ಹಾದಿ ಸುಗಮವಾಗಲಿದೆ. ಒಂದು ವೇಳೆ 3-2ರಲ್ಲಿ ಗೆದ್ದರೆ ಉಳಿದ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ… ನೋಡೋಣ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X