ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ₹83 ಲಕ್ಷ ನಕಲಿ ಬಿಲ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗಮಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡಕ್ಕೆ ಆರೋಪಿತ ನಿವೃತ್ತ ನೌಕರನ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಭರ್ಜರಿ ಬಾಡೂಟವನ್ನು ನೀಡಿ ಸತ್ಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆಯಂತೆ ತನಿಖೆಗೆ ಬಂದ ಅಧಿಕಾರಿಗಳಿಗೆ ಹಗರಣದಲ್ಲಿ ಭಾಗಿಯಾಗಿದ್ದರೆನ್ನಲಾದ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯ ನಿವೃತ್ತ ಕಚೇರಿಯ ಅಧೀಕ್ಷಕ ಬಾಡೂಟದ ಔತಣ ನೀಡಿದ್ದಾರೆಂದು ವರದಿಯಾಗಿದೆ.

ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಎಬಿಆರ್‌ಕೆ ಹಾಗೂ ಆರೋಗ್ಯ ರಕ್ಷಾ ನಿಧಿ ದುರ್ಬಳಕೆ ಮಾಡಿಕೊಂಡು ₹83 ಲಕ್ಷ ಮೌಲ್ಯದ ಖರೀದಿ ಹಗರಣ ನಡೆದಿರುವ ಕುರಿತು ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ ಬಿ ನಾಗಣ್ಣಗೌಡ ದಾಖಲೆಗಳ ಸಮೇತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದರು.
ಇದನ್ನು ಓದಿದ್ದೀರಾ? ಸಮಗ್ರ ವರದಿ | ವಕ್ಫ್ ಬಗ್ಗೆ ಬಿಜೆಪಿ ಬಿತ್ತಿದ ಭಯಾನಕ ಸುಳ್ಳುಗಳು!
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಕುಮಾರ್ ಹೆಚ್, ಜಿಲ್ಲಾ ಕುಟುಂಬ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್ ಎಂ ಸಿ, ಡಿಎಚ್‌ಒ ಕಚೇರಿ ಅಧೀಕ್ಷಕ ಸುರೇಶ್ ಬಾಬು, ಪ್ರಥಮ ದರ್ಜೆ ಸಹಾಯಕರಾದ ಶಂಕರ್, ರವೀಶ್ ಹಾಗೂ ಜಿಆರ್‌ಸಿಎಚ್ ಅಧಿಕಾರಿಗಳ ಕಚೇರಿಯ ಸೋಮಶೇಖರ್ ಅವರನ್ನೊಳಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತನಿಖಾ ತಂಡವನ್ನು ರಚಿಸಿದ ಡಿಎಚ್‌ಒ ಡಾ.ಮೋಹನ್, ಸೂಕ್ತ ತನಿಖೆ ನಡೆಸುವಂತೆ ತಿಳಿಸಿದ್ದರು.
ವೈದ್ಯ ಡಾ.ವೆಂಕಟೇಶ್ ಹಾಗೂ ಕಚೇರಿ ಅಧೀಕ್ಷಕರಾಗಿದ್ದ ನಿವೃತ್ತ ನೌಕರ, ಮೋಹನ್ ಅವಧಿಯಲ್ಲೇ ₹83 ಲಕ್ಷ ಅಕ್ರಮ ಬಿಲ್ ಹಗರಣ ನಡೆದಿದ್ದು, ಈ ಸಮಯದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇಂತಹವರ ಜೊತೆಯೇ ಕುಳಿತು ಮಂಡ್ಯ ಜಿಲ್ಲಾ ಸರ್ವೇಕ್ಷಣ ಇಲಾಖೆಯ ಆರು ಜನರ ತನಿಖಾ ತಂಡ ಬಾಡೂಟ ಸವಿಯುತ್ತಿರುವುದು ನ್ಯಾಯ ಸಮ್ಮತ ತನಿಖೆ ನಡೆಸುವುದೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಇದನ್ನು ನೋಡಿದ್ದೀರಾ? ಮಂಡ್ಯ | ಕನ್ನಂಬಾಡಿ ಕಟ್ಟಿದ ತಮಿಳರ ಎತ್ತಂಗಡಿ?
ತನಿಖೆ ನಡೆಸಬೇಕಾದ ಈ ಅಧಿಕಾರಿಗಳ ತಂಡದ ಸದಸ್ಯರು ಪ್ರಕರಣದ ಆರೋಪಿ ನಿವೃತ್ತ ನೌಕರ ಮೋಹನ್ ಜೊತೆಯಲ್ಲಿ ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯ ಭುವನೇಶ್ವರಿ ಡಾಬಾದಲ್ಲಿ ಬಾಡೂಟ ಸೇವನೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತನಿಖೆಯು ಎಷ್ಟು ಪಾರದರ್ಶಕವಾಗಿ ನಡೆಯಲಿದೆ ಎಂಬುದರ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.