ಮೊಳಕಾಲ್ಮುರು ನಗರದ ಸಮೀಪ ಇಂದು ಬೆಳಿಗ್ಗೆ ನಸುಕಿನ ವೇಳೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ಕು ಎತ್ತುಗಳು, ಓರ್ವ ಚಾಲಕ ದುರ್ಮರಣ ಹೊಂದಿದ ಘಟನೆ ರಾಷ್ಟ್ರೀಯ ಹೆದ್ದಾರಿ 150ರ ಬೈರಾಪುರ ಬಳಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಬಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಟಿಪ್ಪರ್ ಲಾರಿಯೊಂದು ರಸ್ತೆಯಲ್ಲಿ ಹೋಗುತ್ತಿದ್ದ ಮೂರು ಎತ್ತಿನ ಬಂಡಿಗಳಿಗೆ ಡಿಕ್ಕಿ ಹೊಡೆದಿದ್ದು, ಬಂಡಿ ಎಳೆಯುತ್ತಿದ್ದ ನಾಲ್ಕು ಎತ್ತುಗಳು ಬಲಿಯಾಗಿವೆ. ಘಟನೆಯಲ್ಲಿ ಟಿಪ್ಪರ್ ಕೂಡ ಪಲ್ಟಿಯಾಗಿದೆ. ಈ ವೇಳೆ ಟಿಪ್ಪರ್ ಚಾಲಕ ಕೂಡ ಮತಪಟ್ಟಿದ್ದು, ಬಂಡಿಯಲ್ಲಿದ್ದ ರೈತರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ಕು ಮುಗ್ಧ ಮೂಕ ಪ್ರಾಣಿಗಳು ಬಲಿಯಾಗಿದ್ದು, ಎತ್ತಿನ ಬಂಡಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಘಟನೆ ಅಪಘಾತದ ತೀವ್ರತೆಗೆ ಸಾಕ್ಷಿಯಾಗಿತ್ತು. ಮೃತಪಟ್ಟ ಟಿಪ್ಪರ್ ಚಾಲಕನನ್ನು ಇಮ್ರಾನ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೈಕ್ರೋ ಫೈನಾನ್ಸ್ ಕಿರುಕುಳ; ಆರು ತಿಂಗಳ ಕಾಲಾವಕಾಶ ನೀಡುವಂತೆ ಪ್ರತಿಭಟನೆ
ಅಚ್ಚರಿ ಎಂಬಂತೆ ಎರಡು ಎತ್ತುಗಳು ಮತ್ತು ಗಾಡಿಯಲ್ಲಿದ್ದ ರೈತರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮನೆಮಕ್ಕಳಂತೆ ಸಾಕಿದ್ದ ಎತ್ತುಗಳು ತಮ್ಮ ಕಣ್ಣೆದುರೇ ಮೃತಪಟ್ಟಿದ್ದನ್ನು ಕಂಡ ರೈತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಕಣ್ಣಾಲಿಗಳು ತುಂಬಿ ಬಂದಿದ್ದವು.
ಸ್ಥಳಕ್ಕೆ ಮೊಳಕಾಲ್ಮುರು ಠಾಣೆಯ ಪೊಲೀಸ್ ಉಪನಿರೀಕ್ಷಕ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.