ಬೆಂಗಳೂರು ವಾಸಿಗಳನ್ನು ಶೀತ, ಕೆಮ್ಮು ಕಾಡಲಾರಂಭಿಸಿದೆ. ಇಡೀ ನಗರದಲ್ಲಿ ಬಹುಸಂಖ್ಯಾತರು ಕೆಮ್ಮಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಚಳಿಗಾಲದ ಶೀತ ಕಾರಣವೆಂದು ಹಲವರು ಭಾವಿಸಿದ್ದಾರೆ. ಆದರೆ, ಶೀತದ ಜೊತೆಗೆ ಬೆಂಗಳೂರಿನ ಗಾಳಿಯ ಗುಣಮಟ್ಟ ಕುಸಿದಿರುವುದು ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವೆಂದು ತಜ್ಞರು ಹೇಳುತ್ತಿದ್ದಾರೆ.
ನಗರದಲ್ಲಿ ನೈಟ್ರೋಜನ್ ಡೈಆಕ್ಸೈಡ್ (NO2) ಸಾಂದ್ರತೆಯು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಟಿಒ) ನಿಗದಿಪಡಿಸಿದ್ದ ಮಾನದಂಡಕ್ಕಿಂತ ದುಪ್ಪಟ್ಟು ಹೆಚ್ಚಾಗಿದೆ. ಅದರಲ್ಲೂ ಮೆಜೆಸ್ಟಿಕ್ ಅತೀ ಹೆಚ್ಚು ಮಾಲಿನ್ಯಕ್ಕೊಳಗಾಗಿರುವ ಪ್ರವೇಶವೆಂದು ‘ಗ್ರೀನ್‌ಪೀಸ್ ಇಂಡಿಯಾ’ದ ವರದಿ ಹೇಳಿದೆ.
ಡಬ್ಲ್ಯೂಟಿಒ ಮಾನದಂಡದ ಪ್ರಕಾರ, ಪ್ರತಿ ಘನ ಮೀಟರ್‌ಗೆ ಸರಾಸರಿ 10 ಮೈಕ್ರೋಗ್ರಾಂನಷ್ಟು ನೈಟ್ರೋಜನ್ ಡೈಆಕ್ಸೈಡ್ ಇರಬೇಕು. ಇದು ವರ್ಷದ 365 ದಿನಗಳೂ ಇದೇ ಪ್ರಮಾಣದಲ್ಲಿದ್ದರೆ, ಗಾಳಿಯ ಗುಟ್ಟಮಟ್ಟ ಶುದ್ಧವಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ 2023ರಲ್ಲಿ 365 ದಿನಗಳ ಪೈಕಿ 295 ದಿನಗಳಲ್ಲಿ ಡಬ್ಲ್ಯೂಟಿಒ ಮಾನದಂಡಗಳನ್ನು ಮೀರಿ ನೈಟ್ರೋಜನ್ ಡೈಆಕ್ಸೈಡ್ ಇರುವುದು ವರದಿಯಾಗಿದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಪ್ರತಿ ಘನ ಮೀಟರ್‌ಗೆ ಬರೋಬ್ಬರಿ 20 ಮೈಕ್ರೋಗ್ರಾಂ ನೈಟ್ರೋಜನ್ ಡೈಆಕ್ಸೈಡ್ ಕಂಡುಬಂದಿದೆ. ನಗರದಲ್ಲಿ 13 ಮಾನಿಟರಿಂಗ್ ಕೇಂದ್ರಗಳ ಪೈಕಿ 8 ಕೇಂದ್ರಗಳಲ್ಲಿ ವಾರ್ಷಿಕ ಸರಾಸರಿ ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಪ್ರತಿ ಘನ ಮೀಟರ್‌ಗೆ 20 ಮೈಕ್ರೋಗ್ರಾಂಗಳಿಗಿಂತಲೂ ಹೆಚ್ಚಿದೆ. ಶಿವಪುರ ಕೇಂದ್ರದಲ್ಲಿ 15 ಮೈಕ್ರೋಗ್ರಾಂಗಳಷ್ಟು ಕಂಡುಬಂದಿದ್ದರೆ, ಉಳಿದ ನಾಲ್ಕು ಕೇಂದ್ರಗಳಲ್ಲಿ 10 ರಿಂದ 13 ಮೈಕ್ರೋಗ್ರಾಂಗಳಷ್ಟು ನೈಟ್ರೋಜನ್ ಡೈಆಕ್ಸೈಡ್ ಇರುವುದಾಗಿ ವರದಿಯಾಗಿದೆ.
ಭಾರತದಲ್ಲಿಯೇ ದೆಹಲಿ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿದೆ. ಅಲ್ಲದೆ, ಜೈಪುರ, ಪುಣೆ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಹಾಗೂ ಚೆನ್ನೈನಲ್ಲಿಯೂ ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಹೆಚ್ಚಾಗಿದೆ.