ಬಿಹಾರದ ತಿರ್ಹತ್ ಪದವೀಧರ ಕ್ಷೇತ್ರಕ್ಕೆ ನಡೆದ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿವಿಧ ವಯೋಮಾನ 138 ಮಂದಿಗೆ ಮುನ್ನಾ ಕುಮಾರ್ ಎಂಬ ವ್ಯಕ್ತಿ ತಂದೆ ಎಂದು ಉಲ್ಲೇಖಿಸಲಾಗಿದೆ. ಚುನಾವಣಾ ಆಯೋಗದ ಯಡವಟ್ಟಿನಿಂದಾಗಿ ಈ ವಿದ್ಯಮಾನ ಸಂಭವಿಸಿದೆ ಎಂದು ವರದಿಯಾಗಿದೆ.
ಬಿಹಾರದ ಸೀತಾಮರ್ಹಿ, ಶಿಯೋಹರ್, ಮುಜಾಫರ್‌ಪುರ ಮತ್ತು ವೈಶಾಲಿ ಜಿಲ್ಲೆಗಳನ್ನೊಳಗೊಂಡ ತಿರ್ಹತ್ ಪದವೀಧರ ಕ್ಷೇತ್ರದಲ್ಲಿ ಗುರುವಾರ ವಿಧಾನ ಪರಿಷತ್ ಉಪಚುನಾವಣೆ ನಡೆದಿದೆ. ನಾಲ್ಕು ಜಿಲ್ಲೆಗಳಾದ್ಯಂತ 197 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈ ಪೈಕಿ, ಮುಜಾಫರ್‌ಪುರ ಜಿಲ್ಲೆಯ ಔರೈ ಮತಗಟ್ಟೆಯಲ್ಲಿ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ.
ಔರೈ ಮತಗಟ್ಟೆ ವ್ಯಾಪ್ತಿಯ ಮತದಾರರ ಪೈಕಿ 138 ಮತದಾರ ಚೀಟಿಯಲ್ಲಿ ಮತದಾರರ ತಂದೆಯ ಹೆಸರಿನ ಜಾಗದಲ್ಲಿ ಮುನ್ನಾ ಕುಮಾರ್ ಎಂದು ನಮೂದಿಸಲಾಗಿದೆ. 138 ಮಂದಿಗೂ ಮುನ್ನಾ ಕುಮಾರ್ ತಂದೆ ಎಂದು ಉಲ್ಲೇಖಿಸಲಾಗಿದೆ. ಮತದಾರರು ತಮ್ಮ ತಂದೆಯ ಹೆಸರಿನ ಜಾಗದಲ್ಲಿ ಮುನ್ನಾ ಕುಮಾರ್ ಎಂಬ ಹೆಸರಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.
ಮತದಾರರ ಪಟ್ಟಿ ಸಿದ್ದಪಡಿಸಿ, ಮುದ್ರಿಸುವಾಗ ಈ ಯಡವಟ್ಟು ನಡೆದಿದೆ ಎಂದು ಹೇಳಲಾಗಿದೆ. “ಇದು ಮೇಲ್ನೋಟಕ್ಕೆ ‘ಹ್ಯುಮನ್ ಎರರ್’ ಎಂದು ಕಂಡುಬಂದಿದೆ. ಆದರೆ, ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸುವ ಮೊದಲು ಪರಿಶೀಲನಾ ಪ್ರಕ್ರಿಯೆಯಲ್ಲಿ ಅದನ್ನು ಸರಿಪಡಿಸಬೇಕು. ಚುನಾವಣೆ ಮುಗಿದ ನಂತರ ಈ ಬಗ್ಗೆ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ತಿರ್ಹತ್ ವಿಭಾಗೀಯ ಆಯುಕ್ತ ಎಂ ಸರ್ವಣ ಹೇಳಿದ್ದಾರೆ.
ಈ ಯಡವಟ್ಟಿನಿಂದ ಮತದಾನ ಪ್ರಕ್ರಿಯೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲ ಮತದಾರರೂ ತಮ್ಮ ಗುರುತಿನ ಚೀಟಿ ತೋರಿಸಿ, ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ 47.56% ಮತದಾನವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸೀತಾಮರ್ಹಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದ ದೇವೇಶ್ ಚಂದ್ರ ಠಾಕೂರ್ ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಉಪಚುನಾವಣೆ ನಡೆದಿದೆ. ಜೆಡಿಯುನಿಂದ ಅಭಿಷೇಕ್ ಝಾ, ಆರ್‌ಜೆಡಿಯಿಂದ ಗೋಪಿ ಕಿಶನ್ ಹಾಗೂ ಪ್ರಶಾಂತ್ ಕಿಶೋರ್ ಅವರ ಜನ್ ಸೂರಾಜ್ ಪಕ್ಷದ ಡಾ. ವಿನಾಯಕ್ ಗೌತಮ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಚುನಾವಣಾ ಫಲಿತಾಂಶ ಡಿಸೆಂಬರ್ 9ರಂದು ಪ್ರಕಟವಾಗಲಿದೆ.
ವಿಚಿತ್ರ ಸಂಗತಿಯ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು ಅಭ್ಯರ್ಥಿ ಅಭಿಷೇಕ್ ಝಾ, “ಇದು ನಂಬಲಸಾಧ್ಯ. ವಿವಿಧ ವಯಸ್ಸಿನ, ಲಿಂಗ ಮತ್ತು ಧಾರ್ಮಗಳ ಮತದಾರರಿಗೆ ಒಂದೇ ವ್ಯಕ್ತಿಯನ್ನು ಅವರ ತಂದೆ ಎಂದು ಹೇಗೆ ನಮೂದಿಸಲು ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.