”ಇತರ ಧರ್ಮಗಳನ್ನು ಧರ್ಮ ಅನ್ನಬೇಕೋ, ಮತ ಅನ್ನಬೇಕೋ ಎಂದು ಗೊತ್ತಾಗುತ್ತಿಲ್ಲ” ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ವಿಶ್ವ ಹಿಂದೂ ಪರಿಷತ್ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಸಂತರ ಸಮಾವೇಶ’ದಲ್ಲಿ ಸ್ವಾಮೀಜಿಯವರು ಸಂವಿಧಾನದ ಕುರಿತು ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಅದೇ ಸಮಾವೇಶದಲ್ಲಿ ಇತರ ಧರ್ಮಗಳ ಕುರಿತು ಅವರು ಕುಹಕವಾಡಿರುವ ಮಾತುಗಳ ವಿಡಿಯೊ ತುಣುಕು ಈಗ ಲಭ್ಯವಾಗಿದೆ.
”ಅವುಗಳೆಲ್ಲ ಧರ್ಮದ ಹೆಸರಲ್ಲಿ ವಿಜೃಂಭಿಸುತ್ತಿವೆ. ಆದರೆ ಇದು ನಮ್ಮದೇ ರಾಷ್ಟ್ರ, ನಾವು ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿಕೊಂಡಿದ್ದೇವೆ. ಎಚ್ಚರ ತಪ್ಪಿದ್ದರಿಂದ ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ. ಇತರ ಮತೀಯರು ಈ ದೇಶವನ್ನು ಕಬಳಿಸಬೇಕೆಂದು ವ್ಯವಸ್ಥಿತವಾಗಿ ಯೋಜಿತ ಕಾರ್ಯತಂತ್ರ ರೂಪಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಮುಂದುವರಿದು, “ಇತರ ಧರ್ಮೀಯರು ನಮ್ಮ ಮಂದಿಯನ್ನೆಲ್ಲ ಆಕ್ರಮಿಸಿಕೊಳ್ಳುತ್ತಾ ಬಲಿಷ್ಠರಾಗುತ್ತಿದ್ದಾರೆ. ನಾವಿನ್ನೂ ಜಾಗೃತರಾಗಿಲ್ಲ, ಜಾಗೃತರಾಗಬೇಕಿದೆ. ನಮ್ಮ ಧರ್ಮವನ್ನು ಗೌರವಿಸುವಂತಹ ಸಂವಿಧಾನವನ್ನು ನಾವು ರೂಪಿಸಬೇಕು” ಎಂದು ಹೇಳಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಇದನ್ನೂ ಓದಿರಿ: ವಕ್ಫ್ ಆಸ್ತಿಯೂ, ಬಿಜೆಪಿಯವರ ರೈತಪರ ಕಾಳಜಿಯೂ…
ಸ್ವಾತಂತ್ರ್ಯ ಬಂದ ಮೇಲೆ ಹಿಂದೂರಾಷ್ಟ್ರ ಜಾತ್ಯತೀತ ರಾಷ್ಟ್ರವಾಯಿತು. ನಾವು ಹಿಂದೂಸ್ತಾನದಲ್ಲಿ ಇದ್ದೇವೆ ಎಂಬುದು ನಮ್ಮ ಭ್ರಮೆ. ಇದು ನಮ್ಮದೇ ದೇಶ; ನಾವು ಸುರಕ್ಷಿತವಾಗಿ, ಸುಭದ್ರವಾಗಿ ಇದ್ದೇವೆ ಎಂದುಕೊಂಡಿದ್ದೇವೆ. ಆದರೆ ಇತರೆ ಧರ್ಮಗಳು (ಅವುಗಳನ್ನು ಧರ್ಮ ಎನ್ನಬೇಕೋ, ಮತ ಎನ್ನಬೇಕೋ ಗೊತ್ತಿಲ್ಲ) ವಿಜೃಂಭಿಸುತ್ತಿವೆ ಎಂದು ಸ್ವಾಮೀಜಿ ವ್ಯಂಗ್ಯವಾಡಿದ್ದಾರೆ.
ಇತರ ಮತೀಯರು ತಮ್ಮ ಮಕ್ಕಳಿಗೆ ತಮ್ಮ ಮತದ ಬಗ್ಗೆ ವಿಶೇಷ ಶಿಕ್ಷಣ ಕೊಡುತ್ತಾರೆ. ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲವಾಗಿದೆ. ನಮ್ಮ ಒಗ್ಗಟ್ಟಿನ ಕೊರತೆಯಿಂದ ಹಿಂದೂ ವಿರೋಧಿ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿವೆ. ಚುನಾವಣೆಯಲ್ಲಿ ನಾವು ಒಂದಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, "ಸಂತರ ಸಮಾವೇಶ"ದಲ್ಲಿ ಸಂವಿಧಾನದ ವಿರುದ್ಧ ಮಾತ್ರ ಮಾತನಾಡಿಲ್ಲ.
— Yathiraj Byalahalli (@YathirajByalah1) December 6, 2024
ಇತರ ಧರ್ಮಗಳ ಕುರಿತೂ ಹಗುರವಾಗಿ ಮಾತನಾಡಿದ್ದಾರೆ. 'ಇತರ ಧರ್ಮಗಳನ್ನು ಧರ್ಮಗಳು ಅನ್ನಬೇಕೋ ಮತಗಳು ಅನ್ನಬೇಕೋ ಗೊತ್ತಿಲ್ಲ' ಎಂದು ಅಣಕ ಮಾಡುವ ಈ ವ್ಯಕ್ತಿ ನಿಜಕ್ಕೂ ಸ್ವಾಮೀಜಿ ಪೀಠದಲ್ಲಿ ಕೂರಲು ಯೋಗ್ಯವಾಗಿದ್ದಾರಾ? pic.twitter.com/zlbMmmxbcb
ಸ್ವಾಮೀಜಿಯವರ ಹೇಳಿಕೆಗೆ ಟೀಕೆ
ಹಿಂದೂ ಧರ್ಮವನ್ನು ಮಾತ್ರ ಧರ್ಮ ಎಂದು, ಇತರ ಧರ್ಮಗಳನ್ನು ‘ಮತ’ ಎಂದಿರುವುದು ಟೀಕೆಗೆ ಗುರಿಯಾಗಿದೆ. ಧರ್ಮಗಳ ನಡುವೆ ಬಾಂಧವ್ಯ ಬೆಸೆಯಬೇಕಾದ ಗುರುಪೀಠಗಳು, ರಾಜಕಾರಣಿಗಳಂತೆ ಮಾತನಾಡುತ್ತಾ, ಧರ್ಮಧರ್ಮಗಳ ನಡುವೆ ಅಸಹನೆಯನ್ನು ಬಿತ್ತುವ ಕೆಲಸಕ್ಕೆ ಕೈ ಹಾಕಿದ್ದಾರೆಂಬ ಟೀಕೆ ವ್ಯಕ್ತವಾಗುತ್ತಿದೆ.
ಹಿಂದೂ ಧರ್ಮ ತೊರೆದು, ಮತ್ತೊಂದು ಧರ್ಮಕ್ಕೆ ಹೋದರೆ ಅದನ್ನು ಮತಾಂತರ ಎಂದು ಸ್ವಾಮೀಜಿಗಳು ಹೇಳುತ್ತಾರೆ. ‘ಮತದಿಂದ ಮತಕ್ಕೆ ಹೋದರೆ ಮತಾಂತರ’ ಎಂದರ್ಥ. ಸ್ವಾಮೀಜಿಗಳು ಹಿಂದೂ ಧರ್ಮವನ್ನು ‘ಮತ’ ಎನ್ನುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಲಾಗುತ್ತಿದೆ.
ಸ್ವಾಮೀಜಿಗಳು ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸಕ್ಕೆ ಕೈ ಹಾಕಬಾರದು. ಧರ್ಮಗಳ ನಡುವೆ ಸೇತುವೆಯಾಗಿ ವರ್ತಿಸಬೇಕು ಎಂಬ ಆಗ್ರಹಗಳು ಬಂದಿವೆ.