ಬಾಂಗ್ಲಾ ಹಾಗೂ ಭಾರತದಲ್ಲಿನ ಕೋಮುವಾದ ಖಂಡಿಸಿ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಕ್ಷದ ರಾಜ್ಯ ಸಮಿತಿ ಸೆಕ್ರೆಟೆರಿಯೇಟ್ ಸದಸ್ಯ ಎಂ. ಶಶಿಧರ್ ಮಾತನಾಡಿ, ‘1971ರ ಬಾಂಗ್ಲಾ ವಿಮೋಚನಾ ಚಳುವಳಿಯಲ್ಲಿ ಮತ್ತು ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಇತ್ತೀಚಿನ ಐತಿಹಾಸಿಕ ವಿದ್ಯಾರ್ಥಿ ಬಂಡಾಯದಲ್ಲಿ ಮುಸಲ್ಮಾನರು ಮತ್ತು ಹಿಂದೂಗಳು ಪರಸ್ಪರ ಜೀವ ಕೊಟ್ಟು ಹೋರಾಡಿದ್ದರು. ಈಗ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಂತಹ ಘಟನೆಗಳು ವರದಿಯಾಗುತ್ತಿವೆ. ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಕೋಮುವಾದಿ ಶಕ್ತಿಗಳು ದುರುಪಯೋಗ ಮಾಡುತ್ತಿವೆ’ ಎಂದು ದೂರಿದರು.
‘ಭಾರತದಲ್ಲಿಯೂ ಸಹ ಪದೇ ಪದೇ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿವೆ. ಡಿಸೆಂಬರ್ 6ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದ್ದ ಬಾಬ್ರಿ ಮಸೀದೆಯ ಕಟ್ಟಡವನ್ನು ಕೆಡವಿ ಇಡೀ ದೇಶದಲ್ಲಿ ಕೋಮುವಾದವನ್ನು ಹರಡುವ ಪಿತೂರಿಯನ್ನು ಬಿಜೆಪಿ, ಸಂಘ ಪರಿವಾರ ಮಾಡಿತ್ತು. ಈಗ ಮತ್ತೆ ಇತರೆ ಮಸೀದಿಗಳಲ್ಲಿ ಇಂತಹ ವಿವಾದಗಳನ್ನು ಹುಟ್ಟುಹಾಕುತ್ತಿವೆ’ ಎಂದರು.
ʼಎನ್‍ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಜನಾಂಗೀಯ ಕಲಹದಲ್ಲಿ ನೂರಾರು ಜನರು ಜೀವ ಕಳೆದುಕೊಂಡಿದ್ದಾರೆ. ಹೀಗೆ ಬಾಂಗ್ಲಾ ಮತ್ತು ಭಾರತದಲ್ಲಿನ ಆಳ್ವಿಕರಿಗೆ ಜನರನ್ನು ಒಡೆದಾಳುವ ಕೋಮುವಾದ, ಜನಾಂಗೀಯವಾದ ಬೇಕಾಗಿದೆʼ ಎಂದು ಆರೋಪಿಸಿದರು.
ʼಎರಡೂ ದೇಶಗಳಲ್ಲಿ ಸಾಮಾನ್ಯ ಜನತೆ ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಮುಂತಾದ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಶೋಷಣೆ ಆಧಾರಿತ ಬಂಡವಾಳಶಾಹಿ ಪಕ್ಷಗಳು ಕೋಮು ವಿಷ ಬೀಜವನ್ನು ಎಲ್ಲ ಧರ್ಮಗಳ ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ. ದುಡಿಯುವ ಜನತೆ ಈ ಪಿತೂರಿಯನ್ನು ಅರ್ಥ ಮಾಡಿಕೊಂಡು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಜೀವನದ ನೈಜ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕುʼ ಎಂದು ಅವರು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆನ್‌ಲೈನ್ ಜೂಜಿನಲ್ಲಿ ₹80 ಲಕ್ಷ ಹಣ ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ
ಪ್ರತಿಭಟನೆಯಲ್ಲಿ ಪ್ರಮುಖರಾದ ವಿ.ಜಿ. ದೇಸಾಯಿ, ವಿ.ನಾಗಮ್ಮಾಳ್, ಎಸ್.ಎಮ್ ಶರ್ಮಾ, ಡಾ.ಸೀಮಾ ದೇಶಪಾಂಡೆ, ಮಹೇಶ್ ಎಸ್.ಬಿ., ಜಗನ್ನಾಥ್ ಎಸ್.ಎಚ್., ಹಣಮಂತ್ ಎಸ್.ಎಚ್., ಸಂತೋಷ್ ಹಿರವೆ, ತುಳಜರಾಮ್, ವೆಂಕಟೇಶ್ ದೇವದುರ್ಗ, ರಮೇಶ್, ಸಾಬಮ್ಮ ಮುಂತಾದವರು ಪಾಲ್ಗೊಂಡಿದ್ದರು.