ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ‘ಬಂಪರ್ ಲಾಟರಿ’ ಸಿಕ್ಕಿದೆ. 2021ರಲ್ಲಿ ಬೇನಾಮಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಅಜಿತ್ ಪವಾರ್ ಕುಟುಂಬದಿಂದ ವಶಪಡಿಸಿಕೊಂಡಿದ್ದ 1,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ತೆರಿಗೆ ಇಲಾಖೆ ವಾಪಸ್ ಕೊಟ್ಟಿದೆ.
‘ಬೇನಾಮಿ ಆಸ್ತಿ ತಡೆ ಮೇಲ್ಮನವಿ ನ್ಯಾಯಮಂಡಳಿ’ಯು ಅಜಿತ್ ಪವಾರ್ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿದ್ದ ಬೇನಾಮಿ ಆಸ್ತಿ ಮಾಲೀಕತ್ವ ಪ್ರಕರಣವನ್ನು ವಜಾಗೊಳಿಸಿದೆ. ಅಜಿತ್ ಕುಟುಂಬವನ್ನು ಆರೋಪ ಮುಕ್ತಗೊಳಿಸಿದೆ. ಈ ಬಳಿಕ, ಅವರಿಂದ ವಶಪಡಿಸಿಕೊಳ್ಳಲಾಗಿದ್ದ ಆಸ್ತಿಯನ್ನು ತೆರಿಗೆ ಇಲಾಖೆ ವಾಪಸ್ ಕೊಟ್ಟಿದೆ.
ಗಮನಾರ್ಹ ವಿಚಾರವೆಂದರೆ, ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಹಾಗೂ ಶಿವಸೇನೆಯ ಏಕನಾಥ್ ಶಿಂದೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ಬಳಿಕ ಈ ತೀರ್ಪು ಬಂದಿದೆ.
2021ರಲ್ಲಿ ಅಜಿತ್ ಪವಾರ್ ಅವರು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಸಚಿವರಾಗಿದ್ದರು. ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ಎನ್‌ಸಿಪಿಯಲ್ಲಿ ಇದ್ದರು. ಆ ವೇಳೆ, ಅಜಿತ್ ಪವಾರ್ ಮತ್ತು ಅವರ ಪತ್ನಿ ಸುನೇತ್ರಾ ಪವಾರ್, ಮಗ ಪಾರ್ಥ ಪವಾರ್ ಅವರು ಬೇನಾಪಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ 2021ರ ಅಕ್ಟೋಬರ್ 7ರಂದು ಅಜಿತ್ ಅವರಿಗೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲಾಟ್, ಗೋವಾದ ರೆಸಾರ್ಟ್ ಸೇರಿದಂತೆ ಹಲವು ಆಸ್ತಿಗಳನ್ನು ಜಪ್ತಿ ಮಾಡಿತ್ತು.
ಆ ನಂತರ, 2022ರಲ್ಲಿ ಅಜಿತ್ ಪವಾರ್ ಅವರು ಶರದ್ ಪವಾರ್ ವಿರುದ್ಧವೇ ಬಂಡಾಯ ಎದ್ದು, ಎನ್‌ಸಿಪಿಯನ್ನು ವಿಭಜಿಸಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರು. ಬಿಜೆಪಿ ಮತ್ತು ಶಿವಸೇನೆ (ಶಿಂದೆ ಬಣ)ದ ಜೊತೆ ಸೇರಿ ಮಹಾಯುತಿ ಸರ್ಕಾರ ರಚಿಸಿದರು. ಮಹಾಯುತಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆದರು. ಆ ಬಳಿಕ, ಅಜಿತ್ ವಿರುದ್ದದ ಎಲ್ಲ ಪ್ರಕರಣಗಳಿಗೆ ತಡೆ ನೀಡಲಾಗಿತ್ತು. ಇದೀಗ, ಎರಡನೇ ಬಾರಿಗೆ ಮಹಾಯುತಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ.
ಇದೆಲ್ಲದರ ನಡುವೆ, ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ನ್ಯಾಯಪೀಠವು ಅಜಿತ್ ಪವಾರ್ ಮತ್ತು ಅವರ ಕುಟುಂಬದ ವಿರುದ್ದದ ಆರೋಪಗಳನ್ನು ವಜಾಗೊಳಿಸಿದೆ. “ಅಜಿತ್ ಪವಾರ್ ಅಥವಾ ಅವರ ಕುಟುಂಬವು ಬೇನಾಮಿ ಆಸ್ತಿಗಳನ್ನು ಪಡೆಯಲು ಹಣವನ್ನು ವರ್ಗಾಯಿಸಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ” ಎಂದು ನ್ಯಾಯಪೀಠ ಹೇಳಿದೆ.
“ಅಜಿತ್ ಪವಾರ್ ವಿರುದ್ಧದ ಆರೋಪಗಳಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಅವರ ಕುಟುಂಬವು ಯಾವುದೇ ತಪ್ಪು ಮಾಡಿಲ್ಲ. ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ವ್ಯವಹಾರಗಳನ್ನು ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಕಾನೂನುಬದ್ಧ ಮಾರ್ಗಗಳ ಮೂಲಕ ಮಾಡಲಾಗಿದೆ” ಎಂದು ಅಜಿತ್ ಅವರ ವಕೀಲ ವಕೀಲ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ.
ಅಂದರೆ, ನೀವು ದೇಶವನ್ನು ಲೂಟಿ ಹೊಡೆದರೂ, ಸಾರ್ವಜನಿಕವಾಗಿ ಲೂಟಿಕೋರರು ಎಂದು ಕುಖ್ಯಾತಿ ಗಳಿಸಿದರೂ, ಬಿಜೆಪಿ ಮತ್ತು ಮೋದಿ ಬೆಂಬಲಿಸಿದರೆ, ನೀವು ಸತ್ಯಸಂಧರಾಗಬಹುದು. ಬಿಜೆಪಿಯ ವಾಷಿಂಗ್ ಮಷೀನ್‌ನಲ್ಲಿ ನಿಮ್ಮೆಲ್ಲ ಕೊಳಕನ್ನು ತೊಳೆದುಕೊಳ್ಳಬಹುದು ಎಂಬುದಕ್ಕೆ ಮತ್ತೊಂದು ಹೊಸ ಉದಾಹರಣೆ- ಅಜಿತ್ ಪವಾರ್ ಪ್ರಕರಣ.