10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿದ್ದ 19 ವರ್ಷದ ಕಾಮುಕ ಯುವಕನಿಗೆ ಮರಣದಂಡನೆ ವಿಧಸಲಾಗಿದೆ. ಕೃತ್ಯ ನಡೆದ ಎರಡೇ ತಿಂಗಳಲ್ಲಿ ತ್ವರಿತ ವಿಚಾರಣೆ ನಡೆದು, ಶಿಕ್ಷೆ ವಿಧಿಸಲಾಗಿದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಕಾಯುಕ ಮೊಸ್ತಕಿನ್ ಸರ್ದಾರ್ ಎಂಬಾತ ಅಕ್ಟೋಬರ್ 5ರಂದು ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿದ್ದ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಲಾಗಿತ್ತು. ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಪೊಲೀಸರು ನವೆಂಬರ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕಾಮುಕನನ್ನು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ), 65 (ಅತ್ಯಾಚಾರ) ಮತ್ತು 66 (ಸಾವಿಗೆ ಕಾರಣ) ಹಾಗೂ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಅಪರಾಧಿ ಎಂದು ಹೈಕೋರ್ಟ್ ಘೋಷಿಸಿದೆ.
ಪ್ರಕರಣದ ತ್ವರಿತ ವಿಚಾರಣೆಯಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶ್ಲಾಘಿಸಿದ್ದಾರೆ. “ಕೇವಲ 62 ದಿನಗಳ ಅವಧಿಯಲ್ಲಿ ಇಂತಹ ಪ್ರಕರಣದ ವಿಚಾರಣೆ ಪೂರ್ಣಗೊಂಡು, ಅಪರಾಧಿಗೆ ಶಿಕ್ಷೆ ವಿಧಿಸಿರುವುದು ರಾಜ್ಯದ ಇತಿಹಾಸದಲ್ಲಿ ಅಭೂತಪೂರ್ವದದ್ದು. ಈ ಮಹೋನ್ನತ ಸಾಧನೆಗಾಗಿ ರಾಜ್ಯ ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲರಿಗೂ ಅಭಿನಂದನೆಗಳು. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಸರ್ಕಾರವು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ನ್ಯಾಯವು ವಿಳಂಬವಾಗುವುದಿಲ್ಲ ಅಥವಾ ನಿರಾಕರಿಸುವುದಿಲ್ಲ ಎಂಬುದನ್ನು ನಾವು ಖಾತ್ರಿಪಡಿಸುತ್ತೇವೆ” ಎಂದಿದ್ದಾರೆ.
ಅಕ್ಟೋಬರ್ 5ರಂದು ಟ್ಯೂಷನ್‌ಗೆ ತೆರಳಿದ್ದ ಬಾಲಕಿ ಮನೆಗೆ ವಾಪಸ್ ಬಂದಿರಲಿಲ್ಲ. ಬಾಲಕಿ ಕಾಣೆಯಾಗಿದ್ದರಿಂದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆಕೆಯನ್ನು ಲಿಫ್ಟ್ ಕೊಡಿಸುವ ನೆಪದಲ್ಲಿ ಅಪರಾಧಿ ಅಪಹರಿಸಿದ್ದ. ಆತ ಬಾಲಕಿಯನ್ನು ಅಪಹರಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ತನ್ನ ಅಪರಾಧವನ್ನು ಕಾಮುಕ ಆರೋಪಿ ಒಪ್ಪಿಕೊಂಡಿದ್ದ. ಬಾಲಕಿಯ ಮೃತದೇವನ್ನು ಬಿಸಾಡಿದ್ದ ಸ್ಥಳವನ್ನು ತೋರಿಸಿದ್ದ. ಬಾಲಕಿ ಮೃಹದೇವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು.