ಗ್ರಾಮೀಣ ಮೂಲ ಸೌಕರ್ಯಗಳನ್ನು ಬಲಪಡಿಸಲು ಮತ್ತು ಸುಧಾರಿಸಲು ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಾನವ ದಿನಗಳನ್ನು 100 ದಿನದಿಂದ 150ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ (ಗ್ರಾಕೂಸ್) ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಕಾರ್ಯಕರ್ತರು ಮಾತನಾಡಿ, ʼಮನರೇಗಾ ಯೋಜನೆಡಿಯಲ್ಲಿ ಗ್ರಾಮೀಣ ಭಾಗದ ಕಾರ್ಮಿಕರಿಗೆ 100 ದಿನಗಳ ಕೆಲಸದ ಗ್ಯಾರಂಟಿಯನ್ನು ನೀಡಿದೆ. ಇದರಿಂದ ಗ್ರಾಮೀಣ ಭಾಗದ ಕೊಟ್ಯಾಂತರ ಕಾರ್ಮಿಕರಿಗೆ ಬದುಕಿಗೆ ಆಧಾರವಾಗಿದೆ ಹಾಗೂ ನಗರಗಳಿಗೆ ವಲಸೆ ಹೋಗುವುದು ತಪ್ಪಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಸರ್ಕಾರದ ಹೊಸ ನೀತಿಗಳ ಬದಲಾವಣೆಯಿಂದಾಗಿ ಕಾರ್ಮಿಕರಿಗೆ 100 ದಿನಗಳ ಖಾತ್ರಿ ಕೆಲಸ ಸರಿಯಾಗಿ ಸಿಗುತ್ತಿಲ್ಲʼ ಎಂದು ದೂರಿದರು.
ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‌ನಲ್ಲಿ ಮೀಸಲಿಡಬೇಕಾದ ಹಣ ಕೇಂದ್ರ ಸರಕಾರ ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಿದೆ. ಕಾರ್ಮಿಕರಿಗೆ ನೂರು ದಿನಗಳ ಉದ್ಯೋಗ ಖಾತ್ರಿ ಕೆಲಸದ ಹಕ್ಕು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ. ಕೆಲಸ ಮಾಡಿದ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಯಾಗದ ಕಾರಣ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 2 ಲಕ್ಷ ಕೋಟಿ ಹಣ ಮೀಸಲಿಡಬೇಕು. ಈ ವರ್ಷ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸಿದ ಕಾರ್ಮಿಕರ ಬಾಕಿ ಕೂಲಿ ಹಣ ಕೂಡಲೇ ಬಿಡುಗಡೆಗೊಳಿಸಬೇಕುʼ ಎಂದು ಒತ್ತಾಯಿಸಿದರು.
ʼಒಂದು ಕುಟುಂಬಕ್ಕೆ 100 ದಿನಗಳ ಬದಲು 200 ದಿನಗಳ ಕೆಲಸ ಖಾತ್ರಿಗೊಳಿಸಬೇಕು. ಕಾರ್ಮಿಕರಿಗೆ ಒಂದು ದಿನಕ್ಕೆ ಕನಿಷ್ಠ ವೇತನ 600 ನಿಗದಿಗೊಳಿಸಬೇಕು. ಕೆಲಸದ ವೇಳೆ ಮರಣ ಹೊಂದಿದ ಕಾರ್ಮಿಕರಿಗೆ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕುʼ ಎಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಲ್ಲಾ ರಾಜ್ಯಗಳ ಕಾರ್ಮಿಕರು ಡಿಸೆಂಬರ್ 5 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲಿಸಿ ಹಾಗೂ ನಮ್ಮ ಬೇಡಿಕೆ ಈಡೇರಿಸಬೇಕೆಂದು ಈ ಮೂಲಕ ಒತ್ತಾಯಿಸಲಾಗುತ್ತಿದೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಸಿದ ಹೊಟ್ಟೆ ತಣಿಸುವ ʼರಿಶೈನ್ʼ ಯುವಕರು
ರೇಷ್ಮೆ ನಂದೂರ್, ಸುನೀತಾ ಕಮಲಪೂರ, ರೇವಣಸಿದ್ದಪ್ಪ ಕುಸನೂರ್, ನೀಲಮ್ಮ ಮಹಾಗಾಂವ್, ರೇವಣಸಿದ್ದ ಕಾಳಗಿ, ಮಲ್ಲಿಕಾರ್ಜುನ ಜಾನೆ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.