ಮಂಡ್ಯದಲ್ಲಿ ಜರುಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಹಾರದ ವ್ಯವಸ್ಥೆ ಹಾಗೂ ಮುಂದಿನ ಪೀಳಿಗೆಗೆ ಆಹಾರ ಉಳಿಸುವ ಬಗ್ಗೆ ಯಾವ ರೀತಿ ಜಾಗೃತಿ ಮೂಡಿಸಬೇಕು? ಎಂಬ ನಿಟ್ಟಿನಲ್ಲಿ ಒಂದು ಗೋಷ್ಠಿಯನ್ನು ನಡೆಸಬೇಕು. ಜತೆಗೆ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ವ್ಯರ್ಥವಾಗದಂತೆ ತಡೆಯಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದಿಂದ ಮನವಿ ಮಾಡಿದರು.
ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿಯವರಿಗೆ ಮನವಿ ನೀಡಿದ್ದು, “ಕನ್ನಡ ನಾಡುನುಡಿಯ ಹಬ್ಬ ಎಂದೇ ಖ್ಯಾತಿ ಪಡೆದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮಗೆಲ್ಲ ತುಂಬಾ ಸಂತೋಷ ತಂದಿದೆ. ಈ ಸಮ್ಮೇಳನದಲ್ಲಿ, ಮದುವೆ ಬೀಗರ ಊಟ ಸೇರಿ ಎಲ್ಲ ರೀತಿಯ ಬೇರೆಬೇರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ತಯಾರಿಸಿ ಆಹಾರ ವ್ಯರ್ಥವಾಗುತ್ತಿರುವುದನ್ನು ತಡೆಗಟ್ಟುವುದು ಹೇಗೆ?” ಎಂಬುದರ ಕುರಿತು ಜಾಗೃತಿ ಗೋಷ್ಠಿ ನಡೆಸಬೇಕು” ಎಂದು ಒತ್ತಾಯಿಸಿದರು.

“ಸಸ್ಯಾಹಾರ ಮತ್ತು ಮಾಂಸಾಹಾರದ ಕುರಿತು ಇರುವ ಕೀಳರಿಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸಂವಿಧಾನದ ಅರ್ಟಿಕಲ್ 51ಎ(ಹೆಚ್) ಆಧಾರದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ಮಾಂಸಾಹಾರ ಮತ್ತು ಸಸ್ಯಾಹಾರದ ನಡುವಿನ ಮೇಲು ಕೀಳು ಹಾಗೂ ಶ್ರೇಷ್ಠತೆಯ ವ್ಯಸನವನ್ನು ಹೋಗಲಾಡಿಸಲು ಸಸ್ಯಾಹಾರ, ಮಾಂಸಾಹಾರ ಎರಡನ್ನೂ ಸಮ್ಮೇಳನದ ಊಟದ ಪಟ್ಟಿಯಲ್ಲಿ ಸೇರಿಸಿ ಮಾಂಸಾಹಾರದ ಬಗ್ಗೆ ಮತ್ತು ಅದನ್ನು ಸೇವಿಸುವವರ ಬಗ್ಗೆ ಇರುವ ತಾರತಮ್ಯ ಮನೋಭಾವವನ್ನು ತೊಡೆದುಹಾಕಬೇಕು” ಎಂದು ಒತ್ತಾಯಿಸಿದರು.

“ಆಹಾರ ಹಕ್ಕು ಹಾಗೂ ಸ್ವಾತಂತ್ರ್ಯದ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಬೇಕು. ನಮ್ಮ ಈ ಬೇಡಿಕೆಗಳನ್ನು ಜಾರಿಗೊಳಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಪ್ರೀತಿಯ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇವೆ” ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಪ್ರತಿ ವಿದ್ಯಾರ್ಥಿಗೆ ಮಾಸಿಕ ನಿರ್ವಹಣಾ ಹಣ ಹೆಚ್ಚಿಸುವಂತೆ ಸಚಿವರಿಗೆ ಮನವಿ
“ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿಯವರು ಸಚಿವರ ಮನೆಗೆ ಆಗಮಿಸಿದ್ದರು. ಇದೇ ವೇಳೆ ಅವರಿಗೂ ಆಹಾರ ವ್ಯಸ್ಥೆಯ ಪತ್ರಕೊಟ್ಟು ಸಮ್ಮೇಳನದಲ್ಲಿ ಮೊಟ್ಟೆ, ಕೋಳಿ ಮಾಂಸ ಕೊಡಬೇಕು” ಎಂದು ಒತ್ತಾಯ ಮಾಡಿದರು.
ವಚನ ಉಮೇಶ್, ಮೈಸೂರಿನ ರೇವಣ್ಣ, ವೆಂಕಟಗಿರಿ, ಸಂಜಯ್ ಇದ್ದರು.