ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದವನ್ನು ವಿರೋಧಿಸಿ, ಜನರಲ್ಲಿ ಸಾಮರಸ್ಯ ಉಳಿಸಿ, ಜನೈಕ್ಯತೆ ಬೆಳೆಸಿ, ಕೋಮುವಾದಿ ಶಕ್ತಿಗಳ ಘೋರತಂತ್ರದ ವಿರುದ್ಧ ಪ್ರತಿರೋಧ ದಿನವಾಗಿ ಆಚರಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಸೆಂಟರ್ ಫಾರ್ ಪ್ರೊಟೆಕ್ಷನ್ ಆಫ್ ಡೆಮೊಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ(ಸಿ.ಪಿ.ಡಿ.ಆರ್.ಎಸ್) ನಿಂದ ಧಾರವಾಡದ ಕಮ್ಯುನಿಸ್ಟ್ ಸಂಘಟನೆಯ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಭಾರತವಾಗಲಿ, ಬಾಂಗ್ಲಾದಲ್ಲಾಗಲಿ ಇರುವ ಬಹುಪಾಲು ಜನಸಾಮಾನ್ಯರು ಇಂದಿಗೂ ಶಾಂತಿ ಪ್ರಿಯರೇ, ಸಹಬಾಳ್ವೆಯನ್ನು ನಡೆಸುತ್ತಿರುವವರೇ. ಕೆಲವು ಮತಾಂಧ ಶಕ್ತಿಗಳು ಆಳುವವರ ಕುಮ್ಮಕ್ಕಿನಿಂದ ಜನರಲ್ಲಿ ದ್ವೇಷ ಭಾವನೆಗಳನ್ನು ಬಿತ್ತುತ್ತ, ಕೋಮು ದಳ್ಳೂರಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಆದ್ದರಿಂದ ಕೋಮುವಾದದ ವಿರುದ್ಧ ಜನಸಾಮಾನ್ಯರು, ಯುವಕರು ತುರ್ತಾಗಿ ದ್ವನಿ ಎತ್ತಬೇಕಿದೆ ಎಂದರು.
ಸಾಹಿತಿ ಡಾ. ಬಾಳಣ್ಣ ಶಿಗಿಹಳ್ಳಿ ಮಾತನಾಡಿ, ದೇಶದ ಜನರ ಮುಗ್ದತೆಯನ್ನು ಕೂದಲು ಸೀಳಿದಂತೆ ಸೀಳಲಾಗುತ್ತಿದೆ. ವೈದಿಕಶಾಹಿ ಎನ್ನುವುದು ಬ್ರಾಹ್ಮಣರಿಗಷ್ಟೇ ಸಂಬಂಧಪಟ್ಟಿದ್ದಲ್ಲ. ಎಲ್ಲ ಧರ್ಮ, ಜಾತಿಯಲ್ಲೂ ವೈದಿಕತೆ ಎದ್ದು ಕಾಣುತ್ತಿದೆ. ಆದರೆ ನಾವೆಲ್ಲ ಬಹಳ ಸಾಚಾ ಎನ್ನುವಂತೆ ಪೋಜು ಕೊಡುತ್ತಿದ್ದೇವೆ. ಈ ದೇಶದಲ್ಲಿ ಧರ್ಮಗಳಿಗೆ ಹರಿದಷ್ಟು ರಕ್ತ ಬೇರೆ ಯಾವುದಕ್ಕೂ ಹರಿದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಕಲಾವಿದ ಬಿ. ಮಾರುತಿ ಮಾತನಾಡಿ, ದೇಶದ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ವ್ಯವಸ್ಥಿತವಾಗಿ ಜಾತಿ ವ್ಯವಸ್ಥೆಯನ್ನು, ವರ್ಣವ್ಯವಸ್ಥೆಯನ್ನು ಜೀವಂತವಾಗಿಡಲು, ಅದರ ವಿರುದ್ಧ ಹೋರಾಡಿದ ನಾಯಕರುಗಳನ್ನು ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ಬಿತ್ತಲು ಈ ಜಾತಿ ಪದ್ಧತಿ, ಕೋಮುವಾದದ ವಿರುದ್ಧ ವ್ಯಕ್ತಿಗತವಾಗಿ ಹೋರಾಟ ನಡೆಸಿದರೆ ಸಾಲದು, ಸಂಘಟಿತರಾಗಿ ಪರ್ಯಾಯ ಸಂಸ್ಕೃತಿಕ ಆಂದೋಲನವನ್ನು ಪ್ರಬಲವಾಗಿ ಬೆಳೆಸಬೇಕು ಎಂದರು.

ಸಾಹಿತಿಗ ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಹಿಂದಿನಿಂದಲೂ ಆಳುವ ವರ್ಗ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೆ, ಜನರ ದಿಕ್ಕನ್ನು ತಪ್ಪಿಸಲು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಬಂದಿವೆ. ಜನ ಸಾಮಾನ್ಯರ ಶೋಷಣೆಯನ್ನು ಮುಂದುವರಿಸಲು ಜನರನ್ನು ಅಜ್ಞಾನದಲ್ಲಿಡಲು ಬಯಸುತ್ತಾರೆ. ಹಾಗಾಗಿ ವಾಣಿಜ್ಯೋದ್ಯಮಿಗಳು, ರಾಜಕಾರಣಿಗಳು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಜನರಲ್ಲಿ ಕೋಮು ದ್ವೇಷವನ್ನು ಹರಡುತ್ತಿದ್ದಾರೆ. ಇಂತಹ ಕುತಂತ್ರಗಳಿಗೆ ಜನಗಳು ಬಲಿಯಾಗದೆ ನಾಡಿನ ಶ್ರೇಷ್ಠ ಕವಿ ಕುವೆಂಪುರವರು ಹೇಳಿದಂತೆ “ಮನುಜ ಮತ ವಿಶ್ವಪಥ” ದ ಆಶಯವನ್ನು ಸಾಕಾರಗೊಳಿಸಲು ಎಲ್ಲ ಜನಸಾಮಾನ್ಯರು ಜಾತಿ, ಮತ, ಭೇದಗಳನ್ನು ತೊರೆದು ಒಂದಾಗಬೇಕು ಎಂದರು.
ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಭಾರತದಲ್ಲಿ 1992 ರ ಡಿಸೆಂಬರ್ 6ರಂದು ಸುಪ್ರೀಂಕೋರ್ಟಿನಲ್ಲಿ ಮೊಕದ್ದಮೆ ನಡೆಯುತ್ತಿದ್ದ ವಿವಾದಿತ ಮಸೀದಿಯ ಕಟ್ಟಡವನ್ನು ಕೆಡವಿ, ಇಡೀ ದೇಶದಲ್ಲಿ ಕೋಮುವಾದವನ್ನು ಹರಡುವ ಪಿತೂರಿಯನ್ನು ಬಿಜೆಪಿ, ಸಂಘ ಪರಿವಾರ ಮಾಡಿತು. ಈಗ ಮತ್ತೆ ಇತರ ಮಸೀದಿಗಳಲ್ಲಿ ಇಂತಹ ವಿವಾದವನ್ನು ಹುಟ್ಟು ಹಾಕುತ್ತಿದೆ. ಎನ್‌ಡಿಎ ಮಿತ್ರ ಪಕ್ಷ ಅಧಿಕಾರದಲ್ಲಿರುವ ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಜನಾಂಗೀಯ ಕಲಹದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ದಾಳಿ, ಹಲ್ಲೆಗಳು ನಡೆಯುತ್ತಿವೆ. ಅದೇ ರೀತಿ ನೆರೆಯ ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ದಾಳಿಯಂತಹ ಘಟನೆಗಳು ವರದಿಯಾಗುತ್ತಿವೆ. ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಕೋಮುವಾದಿ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಹೀಗೆ ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳ ಆಳ್ವಿಕರಿಗೂ ಕೂಡ ಜನರನ್ನು ಒಡೆದು ಆಳಲು ಕೋಮುವಾದ, ಜನಾಂಗೀಯ ವಾದ ಬೇಕಾಗಿದೆ.
ಈ ವರದಿ ಓದಿದ್ದೀರಾ? ವಿಜಯಪುರ | ಸಂವಿಧಾನ ವಿರೋಧಿಗಳಿಗೆ ಭಾರತದಲ್ಲಿ ಬದುಕಲು ಅವಕಾಶವಿಲ್ಲ: ಶ್ರೀನಾಥ್ ಪೂಜಾರಿ
ದೇಶದಲ್ಲಿ ಸಾಮಾನ್ಯ ಜನತೆ ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು ಮುಂತಾದ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಶೋಷಣೆ ಆಧಾರಿತ ಬಂಡವಾಳಶಾಹಿ ವ್ಯವಸ್ಥೆಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆಗಳ ವಿರುದ್ಧ ಜನರ ಆಕ್ರೋಶವನ್ನು ದಿಕ್ಕು ತಪ್ಪಿಸಲು ಆಳುವ ಬಂಡವಾಳಶಾಹಿ ಪಕ್ಷಗಳು ಕೋಮು ವಿಷಬೀಜವನ್ನು ಎಲ್ಲ ಧರ್ಮಗಳ ಜನರ ಮನಸ್ಸಿನಲ್ಲಿ ಬಿತ್ತುತ್ತಿವೆ. ದುಡಿಯುವ ಜನತೆ ಈ ಪಿತೂರಿಯನ್ನು ಅರ್ಥ ಮಾಡಿಕೊಳ್ಳುತ್ತಲೇ, ಸ್ವತಂತ್ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂತಾದವರ ಆಶಯದಂತೆ ಪ್ರಜಾತಂತ್ರ ಮೌಲ್ಯಗಳನ್ನು ಅಳವಡಿಸಿಕೊಂಡು, ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಮತ್ತು ಜೀವನದ ನೈಜ ಸಮಸ್ಯೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಮುಂದೆ ಬರಬೇಕೆಂದು ಹೇಳಿದರು.
ಸಿ.ಪಿ.ಡಿ.ಆರ್.ಎಸ್. ನ ಜಿಲ್ಲಾ ಸಂಚಾಲಕ ಅಕ್ಷಯ ಊರಮುಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ಬಡಾವಣೆಗಳ ನಾಗರಿಕರು, ಮಹಿಳೆಯರು, ವಿದ್ಯಾರ್ಥಿ-ಯುವಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಅಕ್ಷಯ ಊರಮುಂದಿನ CPDRS, ಧಾರವಾಡ.