ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವನ್ನೂ ನೀಡಬೇಕೆಂದು ಆಹಾರ ಸಂರಕ್ಷಣಾ ಜನಜಾಗೃತಿ ಅಭಿಯಾನ ಸಮಿತಿ ಒತ್ತಾಯಿಸಿದೆ. ಮಂಡ್ಯದ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಇತ್ತೀಚೆಗೆ, ಸಾಹಿತ್ಯ ಸಮ್ಮೇಳನದಲ್ಲಿನ ಆಹಾರ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಹೇಶ್ ಜೋಶಿ, ಸಮ್ಮೇಳನದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದರು. ಅವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಮ್ಮೇಳನದಲ್ಲಿ ಮಾಂಸಾಹಾರವನ್ನೂ ನೀಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.
ಸಚಿವರಿಗೆ ಹಕ್ಕೊತ್ತಾಯ ಸಲ್ಲಿಸಿರುವ ಅಹಾರ ಸಂರಕ್ಷಣಾ ಜನಜಾಗೃತಿ ಅಭಿಯಾನ ಸಮಿತಿಯ ಮುಖಂಡರು, “ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ -ಎರಡನ್ನೂ ನೀಡಬೇಕು. ಮೊಟ್ಟೆ , ಕೋಳಿ ಮಾಂಸ ನೀಡುವ ಮೂಲಕ ಬಹುಜನರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು. ಅಲ್ಲದೆ, ಆಹಾರ ಗೋಷ್ಠಿಯನ್ನೂ ಏರ್ಪಡಿಸಬೇಕು. ಆಹಾರದ ಬಗ್ಗೆ ಚರ್ಚೆಗಳು ನಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಬಾಡೂಟ, ಬಾಡಿಲ್ಲದ ಊಟ ಎರಡೂ ಇರಲಿ
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ… ಬಾಡಿಲ್ಲದ ಊಟ…. ಎರಡೂ ಇರಲಿ. ಯಾವುನ್ನು ತಿನ್ನಬೇಕು ಎಂಬುದನ್ನು ಜನರ ವಿವೇಚನೆ ಬಿಡಬೇಕು. ಸಸ್ಯಾಹಾರವೇ ಶ್ರೇಷ್ಠ ಎಂಬ ಹಲವು ದಶಕಗಳ ಹೇರಿಕೆಯನ್ನು ಮಂಡ್ಯ ಸಮ್ಮೇಳನದಲ್ಲಿ ಸುಳ್ಳಾಗಿಸುವ ಮೂಲಕ ಮಾಂಸಾಹಾರಕ್ಕೂ ಅವಕಾಶ ನೀಡಬೇಕೆಂಬ ಮಾತುಗಳು ಕೇಳಿ ಬರುತ್ತವೆ.
ರಾಷ್ಟ್ರಕವಿ ಹಾಗೂ ರಾಜ್ಯದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರು ಮಾಂಸಾಹಾರಿಯಾಗಿದ್ದರು, ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಕೂಡ ಮಾಂಸಾಹಾರಿಯಾಗಿದ್ದರು. ಮಂಡ್ಯ ನೆಲೆದ ಪ್ರಸಿದ್ದ ನಟ ಹಾಗೂ ರಾಜಕಾರಣಿ ಅಂಬರೀಶ್ ಕೂಡ ಮಾಂಸ ಪ್ರಿಯರಾಗಿದ್ದರು. ವಿಷ್ಟುವರ್ಧನ್ ಕೂಡ ಅಂಬರೀಶ್ ಜೊತೆ ಬಾಡೂಟ ಸವಿದಿರುವ ನಿದರ್ಶನಗಳಿವೆ. ಹೀಗಿರುವಾಗ ಹಲವು ದಶಕಗಳಿಂದ ಸಸ್ಯಾಹಾರವೇ ಶ್ರೇಷ್ಠ ಎಂಬ ಭ್ರಮೆಯನ್ನು ವೈದಿಕಶಾಹಿಗಳು ಜನರ ತಲೆಯಲ್ಲಿ ತುಂಬಿ ಮಾಂಸಾಹಾರ ಕನಿಷ್ಠ ಎಂದು ಬಹುಜನರ ಆಹಾರ ಸಂಸ್ಕೃತಿ ಮೇಲೆ ದಾಳಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಮ್ಮೇಳನದಲ್ಲಿ ಎಲ್ಲ ಧರ್ಮ, ಜಾತಿ, ಜನಾಂಗದವರು ಪಾಲ್ಗೊಳುವಿಕೆ ಇರುತ್ತದೆ. ಹಾಗಾಗಿ ಅವರವರ ಆಹಾರ ಸಂಸ್ಕೃತಿಯನ್ನು ರಾಜ್ಯದಲ್ಲಿರುವ ಜಾತ್ಯತೀತ ಸರ್ಕಾರ ಗೌರವಿಸುವ ಕೆಲಸ ಮಾಡಲಿ, ಎಲ್ಲಕ್ಕಿಂತ ಮಿಗಿಲಾಗಿ ಭಾರತದ ಸಂವಿಧಾನವು ಕೂಡ ಸಮಾನತೆ, ಸಹೋದರತೆ, ಭ್ರಾತೃತ್ವವನ್ನು ಪ್ರತಿಪಾದಿಸುತ್ತದೆ. ಇದು ಸಾಧ್ಯವಾಗಬೇಕಾದರೆ ಮಾಂಸಾಹಾರವನ್ನು ಸ್ವಾಗತಿಸುವ ಕೆಲಸವಾಗಬೇಕಿದೆ ಎಂದು ಸಾಹಿತಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಪಾದಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಆಹಾರಕ್ಕಾಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡಲಾಗುತ್ತದೆ. ಹೀಗಿರುವಾಗ ಬಹುಸಂಖ್ಯಾತರ ಮಾಂಸಾಹಾರವನ್ನು ನಿರಾಕರಿಸಲು ಹೇಗೆ ಸಾಧ್ಯ? ಸಮ್ಮೇಳನದಲ್ಲಿ ಮಾಂಸಾಹಾರ ನೀಡಿದರೆ ಇದುವರೆಗಿನ ಸಾಹಿತ್ಯ ಸಮ್ಮೇಳನಗಳಲ್ಲಿ ನಡೆದು ಬಂದು ಮಾಂಸಾಹಾರ ‘ಕನಿಷ್ಠ’ ಎಂಬ ಮನೋಭಾವನೆಯನ್ನು ತೊಡೆದು ಹಾಕಬಹುದು. ಇದರಿಂದಾಗಿ ಕನ್ನಡ ಸಾಹಿತ್ಯದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗುವುದರ ಜೊತೆಗೆ ಮಂಡ್ಯದ ಹೆಸರು ಕೂಡ ಇತಿಹಾಸದಲ್ಲಿ ದಾಖಲಾಗುತ್ತದೆ ಎಂದು ಮಂಡ್ಯದ ಜನರು ಒತ್ತಾಯಿಸಿದ್ದಾರೆ.