ನರೇಗಾ ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ತುಮಕೂರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಮನರೇಗಾದ ನೂರು ದಿನದ ಉದ್ಯೋಗ ಖಾತ್ರಿಯಿಂದ ಗ್ರಾಮೀಣ ಭಾಗದ ಜನರು ನೆಮ್ಮದಿಯ ಜೀವನ ಸಾಗಿಸಲು ನೆರವಾಗಿದೆ. ಆದರೆ ಇತ್ತೀಚೆಗೆ ಕೆಂದ್ರ ಸರ್ಕಾರದ ಹೊಸ ನಿಯಮಗಳಿಂದ ನೂರು ದಿನದ ಕೆಲಸ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದು ಗ್ರಾಕೂಸು ಸಂಘಟನೆ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.

ಡಿಸೆಂಬರ್ 5 ರಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ನರೇಗಾ ಕೂಲಿಕಾರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ.
ಕೇಂದ್ರ ಸರ್ಕಾರ ಪ್ರತಿ ಬಜೆಟ್ ನಲ್ಲಿ ನರೇಗಾಕ್ಕೆ ಮೀಸಲಿಡುವ ಹಣದ ಪ್ರಮಾಣವನ್ನು ಕಡಿತ ಮಾಡುತ್ತಿದೆ. ಇದರಿಂದ ನರೇಗಾದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಹಣ ಪಾವತಿಯಾಗುತ್ತಿಲ್ಲ. ಹಾಗಾಗಿ ಈ ಬಜೆಟ್ ನಲ್ಲಿ 2 ಲಕ್ಷ ಕೋಟಿ ಹಣವನ್ನು ನರೇಗಾಕ್ಕೆ ಮೀಸಲಿಡಬೇಕು. ಹಾಗೂ ಈ ವರ್ಷ ಕೆಲಸ ಮಾಡಿರುವ ಕಾರ್ಮಿಕರಿಗೆ ಬಾಕಿ ಕೂಲಿ ಹಣ ಬಿಡುಗಡೆ ಮಾಗಬೇಕು. ಒಂದು ಕುಟುಂಬಕ್ಕೆ ನೂರು ದಿನದ ಬದಲಾಗಿ 200 ದಿನ ಉದ್ಯೋಗ ಖಾತ್ರಿ ಮಾಡಬೇಕು. ಕಾರ್ಮಿಕರ ಕೂಲಿ ಮೊತ್ತವನ್ನು 600 ರೂಪಾಯಿಗೆ ಏರಿಸಬೇಕು. ಕೆಲಸ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದರೆ, ಅವರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಬೇಕು ಎಂದು ಪ್ರಧಾನಿಗಳಿಗೆ ಕಳಿಸಿರುವ ಮನವಿ ಪತ್ರದಲ್ಲಿ ಗ್ರಾಕೂಸು ಸಂಘಟನೆ ವಿವರಿಸಿದೆ.
