ಪರಿವರ್ತನೆಯ ದಿನಗಳಲ್ಲಿ ಸಂವಿಧಾನದ ಆಶಯ ಕಾಪಾಡುವ ಹೊಣೆ ವಕೀಲರದೇ ಆಗಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನೂ ಮಾಡಬೇಕಿದೆ ಎಂದು ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ವಿನಯ್ ಬಾಳಾ ಸಾಹೇಬ್ ಮಾಂಗಳೆಕರ್ ಕರೆ ನೀಡಿದರು.
ದಾವಣಗೆರೆ ನಗರದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಇಂದು ಕಾನೂನು ವಲಯ ಸಾಕಷ್ಟು ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಸಾಕಷ್ಟು ಪರಿಣಾಮಕಾರಿ ಬದಲಾವಣೆ ತರುತ್ತಿದೆ. ಇದು ನಮ್ಮ ವೃತ್ತಿಗೆ ಸಹಕಾರಿ. ಇದನ್ನು ಬಳಸಿಕೊಂಡು ನಾವು ನಮ್ಮ ನೈತಿಕತೆ ಮರೆಯದೆ ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಕೆಲಸ ಮಾಡಬೇಕು” ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ ಮಾತನಾಡಿ “ಅಂಬೇಡ್ಕರ್ ಅವರು ಸಂವಿಧಾನದ ರಚನಾಕಾರರು. ಅವರ ಕೊಡುಗೆ ದೊಡ್ಡದಿದೆ. ಆದರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಕೀಲಿ ದಕ್ಷತೆ ಕಾರಣಕ್ಕೆ ಅವರ ಹೆಸರಲ್ಲಿ ವಕೀಲರ ದಿನ ಆಚರಿಸಲಾಗುತ್ತಿದೆ. ಯುವ ವಕೀಲರು ಆರಂಭದಲ್ಲೇ ಹಣಕ್ಕಾಗಿ ಕೆಲಸ ಮಾಡಬೇಡಿ. ಮೊದಲು ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಿ. ಮುಂದೆ ದುಡ್ಡು ತಾನಾಗಿಯೇ ಬರುತ್ತದೆ” ಎಂದು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ ಎಚ್ ಅರುಣ್ ಕುಮಾರ್ ಮಾತನಾಡಿ “ಜಿಲ್ಲಾ ವಕೀಲರ ಸಂಘಕ್ಕೆ ರಾಜ್ಯ ಪರಿಷತ್‌ನಿಂದ ಬರುವ ಕಾರ್ಯಾಗಾರದ ಅನುದಾನ ಹೆಚ್ಚಿಸಬೇಕು. ಸಂವಿಧಾನ ರಚನಾ ಕರಡು ಸಮಿತಿಯಲ್ಲಿ ಸದಸ್ಯರಾಗಿದ್ದವರು ನಮ್ಮ ವಕೀಲರ ಸಂಘದವರು ಎಂಬುದು ನಾವೆಲ್ಲರೂ ಹೆಮ್ಮೆಪಡುವ ವಿಷಯ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ದೆಹಲಿ ಜಂತರ್ ಮಂತರ್ ಪ್ರತಿಭಟನೆಗೆ ಗ್ರಾಕೂಸು ಬೆಂಬಲ : ನರೇಗಾ ಕೂಲಿಕಾರರ ಬೇಡಿಕೆ ಈಡೇರಿಸುವಂತೆ ಒತ್ತಾಯ
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ವಕೀಲರು, ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿವಿಧ ಪೀಠದ ಜಿಲ್ಲಾ ನ್ಯಾಯಾಧೀಶರು ಇದ್ದರು. ಹಿರಿಯ ವಕೀಲ ಎಂ ಆರ್ ಮಹೇಶ್ವರಪ್ಪ ತಮ್ಮ ಪುಸ್ತಕ ಭಂಡಾರವನ್ನು ಜಿಲ್ಲಾ ನ್ಯಾಯಾಲಯದ ಗ್ರಂಥಾಲಯಕ್ಕೆ ಅರ್ಪಿಸಿದರು.
ಹಿರಿಯ ವಕೀಲರಾದ ಎ ಆರ್ ಗುರುಬಸವರಾಜ್, ಲೋಕೀಕೆರೆ ಸಿದ್ದಪ್ಪ, ಎಸ್ ಬಸವರಾಜು, ನ್ಯಾಯಾಲಯ ಸಿಬ್ಬಂದಿ ಅನಿತಾ, ಉಪಾಧ್ಯಕ್ಷ ಜಿ ಕೆ ಬಸವರಾಜ್, ಸಹ ಕಾರ್ಯದರ್ಶಿ ಎ ಎಸ್ ಮಂಜುನಾಥ್ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಭಾಗವಹಿಸಿದ್ದರು.