ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ‘ಅವ್ವ ಸೇವಾ ಟ್ರಸ್ಟ್’ ನೀಡುವ ಪ್ರಸ್ತುತ ವರ್ಷದ ‘ಅವ್ವ ಪ್ರಶಸ್ತಿ’ಗೆ ರಾಜಕಾರಣಿ ಎಸ್.ಆರ್.ಪಾಟೀಲ, ಪತ್ರಕರ್ತ ಚಂದ್ರಕಾಂತ ವಡ್ಡು, ಸೀತಾರ ವಾದಕ ಛೋಟೆ ರಹಮತ್‌ಖಾನ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಮಂದಿಯನ್ನು ಆಯ್ಕೆ ಮಾಡಲಾಗಿದೆ.
‘ಹುಬ್ಬಳ್ಳಿಯ ಗುಜರಾತ ಭವನದಲ್ಲಿ ಡಿಸೆಂಬರ್ 15ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ‘ಅವ್ವ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ’ ಎಂದು ಅವ್ವ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಸುದ್ದಿಗೋಷ್ಠಿಯಲ್ಲು ಮಾಹಿತಿ ನೀಡಿದರು.
“ಸಾಹಿತಿ ಸಂಗಮನಾಥ ಲೋಕಾಪುರ, ಗಾಯಕಿ ರೇಖಾ ಹೆಗಡೆ, ಭಾಗವತ ಕೇಶವ ಹೆಗಡೆ ಕೊಳಗಿ, ಉದ್ಯಮಿ ಮಹೇಂದ್ರ ಸಿಂಘಿ, ಬಸವ ತತ್ವ ಪ್ರಚಾರಕ ಎಸ್. ಮಹದೇವಯ್ಯ, ಸಮಾಜ ಸೇವಕಿ ರಾಜೇಶ್ವರಿ ಪಾಟೀಲ, ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಸ್ಟೇಟ್ ಕ್ರೀಡಾಪಟು ತ್ರಿಶಾ ಜಡಲಾ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿದ ಬಾಗಲಕೋಟೆಯ ಅಂಕಿತಾ ಕೊಣ್ಣೂರ ಅವರು ಅವ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಸ್ಮರಣಿಕೆ ಜೊತೆಗೆ ₹25 ಸಾವಿರ ನಗದು ಇರಲಿದೆ” ಎಂದು ಹೇಳಿದರು.
“ಚಿತ್ತರಗಿಯ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪನ್ಯಾಸಕಿ ಅಕ್ಷಯಾ ಗೋಖಲೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದರು.