ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದ್ದ ಪೊಲೀಸ್ ಶಸ್ತ್ರಾಗಾರದಲ್ಲಿ 9ಎಂಎಂ ಪಿಸ್ತೂಲ್ ಮತ್ತು ಸ್ವಯಂಚಾಲಿತ ರೈಫಲ್‌ಗಳ 200 ಕಾರ್ಟ್ರಿಜ್‌ಗಳು (ಬುಲೆಟ್) ಕಳ್ಳತನವಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಮೊರೆನಾ ಜಿಲ್ಲೆಯಲ್ಲಿದ್ದ ಪೊಲೀಸ್ ವಿಶೇಷ ಸಶಸ್ತ್ರ ಪಡೆಗಳ (ಎಸ್‌ಎಎಫ್) ವಿಭಾಗದ ಶಸ್ತ್ರಾಗಾರಗಳಲ್ಲಿ ಕಳ್ಳತನ ನಡೆದಿದೆ. ಘಟನೆ ಬಳಿಕ, ಎಸ್‌ಎಎಫ್‌ನ 2 ಮತ್ತು 5ನೇ ಬೆಟಾಲಿಯನ್‌ನ ಕಮಾಂಡೆಂಟ್‌ಗಳು ತಮ್ಮ ಕಂಪನಿಯ ಕಮಾಂಡರ್‌ಗಳನ್ನು ಅಮಾನತುಗೊಳಿಸಿದ್ದಾರೆ.
ಈ ಬಗ್ಗೆ ಮೊರೆನಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್ ಧಕಡ್ ಮಾಹಿತಿ ನೀಡಿದ್ದು, “ಎಸ್‌ಎಎಫ್‌ನ ಎರಡು ಶಸ್ತ್ರಾಸ್ತ್ರಗಳಿಂದ ಪಿಸ್ತೂಲ್‌ಗಳು ಮತ್ತು ಬುಲೆಟ್‌ಗಳು ಕಳವಾಗಿವೆ. ಕಳ್ಳತನವಾಗಿರುವ ಬಗ್ಗೆ ಶಸ್ತ್ರಾಗಾರದ ಗಾರ್ಡ್‌ಗಳು ಮಾಹಿತಿ ನೀಡಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ಘಟನೆ ಬೆನ್ನಲ್ಲೇ ಚಂಬಲ್ ವಲಯ ಪೊಲೀಸ್ ಮಹಾನಿರೀಕ್ಷಕ ಸುಶಾಂತ್ ಸಕ್ಸೇನಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.