ಕರ್ನಾಟಕ ರಾಜ್ಯ ಸರ್ಕಾರಿ ವಸತಿ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರನ್ನು ಸರ್ಕಾರ ಕಡೆಗಣಿಸಿರುವುದನ್ನು ಖಂಡಿಸಿ ಬೆಳಗಾವಿ ಚಲೋ ಮೂಲಕ ಡಿಸೆಂಬರ್ 18ರಂದು ಬೆಳಗಾವಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ರಾಜ್ಯದಿಂದ ಸುಮಾರು ₹5000ಕ್ಕೂ ಅಧಿಕ ಮಂದಿ ಹೊರಗುತ್ತಿಗೆ ನೌಕರರು ಭಾಗವಹಿಸುತ್ತಿದ್ದಾರೆ ಎಂದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಹನುಮೇಗೌಡ ತಿಳಿಸಿದರು.
ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಭೆ ನಡೆಸಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನಾ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಮಾಲತಿ, ಪರಿಶಿಷ್ಟ ಪಂಗಡದ ಜಿಲ್ಲಾ ಉಪ ನಿರ್ದೇಶಕಿ ಭಗೀರಥಿ ಅವರಿಗೆ ಸಭೆಯ ನಂತರ ಮನವಿ ನೀಡಿದರು.
“ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಕಳೆದ 15ರಿಂದ 20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತ ಬಂದಿದ್ದೇವೆ. ಮಹಿಳೆಯರು, ದಲಿತರು ಹೆಚ್ಚಿನದಾಗಿ ಈ ಕೆಲಸ ಮಾಡುತ್ತ ಬಂದಿದ್ದು, ಸರ್ಕಾರ ಕಡೆಗಣಿಸಿರುವ ಹಿನ್ನೆಲೆಯಲ್ಲಿ ನ್ಯಾಯಯುತವಾಗಿ ವೇತನ ನೀಡುವಂತೆ ಆಗ್ರಹಿಸುತ್ತಿದ್ದೇವೆ” ಎಂದರು.

“ನೇರವಾಗಿ ಇಲಾಖೆಯಿಂದ ವೇತನ ಕೊಡುವುದು, ಹತ್ತು ವರ್ಷ ಸೇವೆ ಸಲ್ಲಿಸಿರುವವ ಎಲ್ಲರನ್ನೂ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿ ಪರಿಗಣಿಸುವುದು, ಕನಿಷ್ಠವೇತನ ಮಾಸಿಕ ₹31,000 ಕೊಡುವುದು, ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸಂಸ್ಥೆಗಳ ಸಹಕಾರ ಸಂಘವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವಿಸ್ತರಿಸುವುದು, ನಿವೃತ್ತಿ ನಂತರ ₹10 ಲಕ್ಷ ಪರಿಹಾರ ಕೊಡುವುದು, ಏಳು ಮಂದಿ ಇರುವ ವಸತಿ ಶಾಲೆಗಳಲ್ಲಿ ಹೆಚ್ಚುವರಿ ನಾಲ್ಕು ಜನರನ್ನು ನೇಮಕ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಎಲ್ಲ ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮಾಡಲಾಗುವುದು” ಎಂದು ಜಿಲ್ಲಾಧ್ಯಕ್ಷ ಶಿವಮೂರ್ತಿ ಎಸ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಕ್ಕಳ ಎದುರೇ ಗೃಹಿಣಿ ಹತ್ಯೆ; ಆರೋಪಿ ಪ್ರಿಯಕರನಿಗಾಗಿ ಹುಡುಕಾಟ
ಈ ವೇಳೆ ಚಿಕ್ಕಮಗಳೂರು, ಕಡೂರು, ತರೀಕೆರೆ, ಎನ್ಆರ್ ಪುರ, ಶೃಂಗೇರಿ, ಕೊಪ್ಪ ತಾಲೂಕಿನ ಹೊರಗುತ್ತಿಗೆ ನೌಕರರು ಇದ್ದರು.