ಶೀಘ್ರದಲ್ಲಿ ಕಳಸಾ ಬಂಡೂರಿ ಕಾಮಗಾರಿಯನ್ನು ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಮಹದಾಯಿ ವೇದಿಕೆ ವತಿಯಿಂದ ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನವಲಗುಂದ ಬಸ್ ನಿಲ್ದಾಣದಿಂದ ನೀಲಮ್ಮನ ಕೆರೆ ವೃತ್ತದ ವರೆಗೆ ಮಹದಾಯಿ ಕಳಸಾ-ಬಂಡೂರಿ ಹೋರಾಟಗಾರರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಸುಧೀರ್ ಸಾಹುಕಾರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಶೀಘ್ರ ಮಹದಾಯಿ ಕಾಮಗಾರಿ ಆರಂಭಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನಾ ನಿರತ ರೈತರು ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತಕುಲಕ್ಕೆ ಆಶ್ವಾಸನೆ ಕೊಟ್ಟು ಕೊಟ್ಟು ಬರೀ ಅನ್ಯಾಯ ಮಾಡುತ್ತಿವೆ ಹೊರತು ರೈತರ ಬೇಡಿಕೆ ಈಡೇರಿಸಿಲ್ಲ. ಸತತವಾಗಿ ಸುರಿದ ಭಾರಿ ಮಳೆಯಿಂದ ಬೆಳೆಗಳು ನಾಶವಾಗಿದ್ದು ಈವರೆಗೂ ಯಾವುದೇ ಪರಿಹಾರ ಬಂದಿಲ್ಲ ಅಧಿವೇಶನ ಮುಗಿಯುವದರೊಳಗಾಗಿ ಪರಿಹಾರ ಮತ್ತು ವಿಮೆಯನ್ನು ರೈತರ ಖಾತೆಗೆ ಹಾಕಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳ ನವೀಕರಣ ಜೊತೆಗೆ ಸಿಡಿ, ಡ್ರಾಪುಗಳು ಮತ್ತು ಸೇವಾ ರಸ್ತೆಗಳೇ ಇಲ್ಲ. ಕ್ಷೇತ್ರದ ಶಾಸಕರಿಗೆ ಹಾಗೂ ಉಸ್ತುವಾರಿ ಮಂತ್ರಿಗಳಿಗೆ ಅನೇಕ ಬಾರಿ ತಿಳಿಸಿದರೂ ಕೂಡಾ ಕ್ರಮ ಜರುಗಿಸಿಲ್ಲ. ಅಲ್ಲದೇ ನಗರ ಸೇರಿದಂತೆ ಇತರೆ ತಾಲೂಕು ಭಾಗಗಳಲ್ಲಿ ಗೋವಿನಜೋಳ, ಹತ್ತಿ ಖರೀದಿ ಕೇಂದ್ರ ತೆರೆಯಬೇಕು, ಅಗ್ನಿಶಾಮಕ ಠಾಣೆ ಸ್ಥಾಪನೆ, ಸರ್ಕಾರಿ ಪ್ರೌಢಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಪ್ರೀತಿಗೆ ಒಪ್ಪದ ಯುವತಿ: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
ಪ್ರತಿಭಟನೆಯಲ್ಲಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾಯಿ, ಮಲ್ಲೇಶ ಉಪ್ಪಾರ, ಬಸನಗೌಡ ಹುಣಸಿಕಟ್ಟೆ, ಎಸ್ ಬಿ ಪಾಟೀಲ ಗಂಗಪ್ಪ ಸಂಗಟಿ, ಗೋವಿಂದರೆಡ್ಡಿ ಮೊರಬದ, ಬಾಂಬೆ ಮೇಸ್ತ್ರಿ, ಶಿವಪ್ಪ ಸಂಗಳ, ಸಿದ್ದಲಿಂಗಪ್ಪ ಹಳ್ಳದ, ಮುರಗೇಪ್ಪ ಪಲ್ಲೇದ, ರವಿ ತೋಟದ, ವಿಕ್ರಮ ಕುರಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.