ಬೆಳಗಾವಿಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಅವಸ್ಥೆ ಶೋಚನೀಯ ಸ್ಥಿತಿ ತಲುಪಿದೆ. ಮರಾಠಿ ಮುಂದೆ ಮುಂದೆ, ಕನ್ನಡ ತೀರಾ ಹಿಂದೆ ಎನ್ನುವಂತಾಗಿದೆ. ಬೆಳಗಾವಿಯ ಸುವರ್ಣಸೌಧ ನಿರ್ಮಾಣದ ಹಿಂದಿನ ಆಶಯ ಈಡೇರಲು ಈ ಸಲವಾದರೂ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ಗಡಿನಾಡಿನ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ರಚನಾತ್ಮಕ ತೀರ್ಮಾನಗಳನ್ನು ಕೈಗೊಳ್ಳುವುದು ಸದ್ಯದ ತುರ್ತಾಗಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಾಲು ಸಾಲು ಸಮಸ್ಯೆಗಳು ಮೂಟೆಕಟ್ಟಿ ಬಿದ್ದಿವೆ. ಕೆದಕಿದಷ್ಟು ಅವುಗಳ ಆಳ-ಅಗಲ ಅನಾವರಣವಾಗುತ್ತಿದೆ. ಸುವರ್ಣಸೌಧದಲ್ಲಿ ಡಿ.9ರಿಂದ 19ರವರೆಗೂ 9 ದಿನಗಳ ಕಾಲ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿ ಕೇಂದ್ರಿತವಾಗಿ ಈ ದಿನ.ಕಾಮ್ ಪ್ರಕಟಿಸಿದ ಎರಡು ಸರಣಿ ವರದಿಗಳಲ್ಲಿ ನೀರಾವರಿ ಯೋಜನೆಗಳ ನನೆಗುದಿ, ರೈತರ ಸಾವು, ಕೃಷಿ ಬಿಕ್ಕಟ್ಟು, ಕಬ್ಬು ಬೆಳೆಗಾರರ ಸಮಸ್ಯೆಯ ತೀವ್ರತೆ ಹಾಗೂ ರಾಜಕಾರಣಿಗಳ ಹಿಡಿತದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಅಂಟಿಕೊಂಡ ರಾಜಕಾರಣ ನೋಡಿದ್ದಾಯಿತು. ಶೈಕ್ಷಣಿಕ ಜಿಲ್ಲೆ ಒಳಗೊಂಡ ಬೆಳಗಾವಿಯೊಳಗೆ ಶೈಕ್ಷಣಿಕ ಸಮಸ್ಯೆಗಳಿಗೂ ಈಗ ಕೊನೆ ಇಲ್ಲವಾಗಿದೆ.
ಗೋವಾಕ್ಕಿಂತಲೂ ದೊಡ್ಡದಾದ ‘ಮಿನಿ ರಾಜ್ಯ’ ಬೆಳಗಾವಿಯಲ್ಲಿ ಅದರಲ್ಲೂ ಗಡಿ ಭಾಗಗಳಾದ ಖಾನಾಪುರ ಮತ್ತು ನಿಪ್ಪಾಣಿ ಪ್ರದೇಶ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಮಸ್ಯೆಗಳು ಜನರನ್ನು ಇನ್ನಿಲ್ಲದಂತೆ ಬಾಧಿಸುತ್ತಿವೆ. ಮರಾಠಿ ಮಾಧ್ಯಮ ಶಾಲೆ ಮತ್ತು ಖಾಸಗಿ ಶಾಲೆಗಳ ಹಾವಳಿ ಮುಂದೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಕನ್ನಡ ಮಾಧ್ಯಮಿಕ ಶಾಲೆಗಳ ಉಳಿವಿಗಾಗಿ ಮತ್ತು ಹೊಸ ಶಾಲೆಗಳ ನಿರ್ಮಾಣಕ್ಕಾಗಿ ಮತ್ತೊಂದು ದಿಟ್ಟ ಹೋರಾಟ ಮಾಡಬೇಕಾದ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಸುವರ್ಣಸೌಧಕ್ಕೆ ಹತ್ತಿರವಾಗಿರುವ ಬಸ್ತವಾಡ ಮತ್ತು ಕೊಂಡಸಕೊಪ್ಪ ಗ್ರಾಮದಲ್ಲಿ ನಿತ್ಯ ಶಾಲಾ ಮಕ್ಕಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುವರ್ಣಸೌಧ ನಿರ್ಮಾಣಕ್ಕೆ ಬಸ್ತವಾಡ ಜನತೆಯೂ ಭೂಮಿ ಕೊಟ್ಟಿದೆ. ಆದರೆ, ಬಸ್ತವಾಡದ ಮಕ್ಕಳು ಪ್ರೌಢಶಿಕ್ಷಣಕ್ಕಾಗಿ 8-10 ಕಿ.ಮೀ ನಿತ್ಯ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ.
ಬಸ್ತವಾಡದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇದೆ. 1ರಿಂದ 7ನೇ ತರಗತಿಯವರೆಗೆ 307 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಪ್ರೌಢಶಿಕ್ಷಣಕ್ಕಾಗಿ ಸಮೀಪದಲ್ಲಿ ಸರ್ಕಾರಿ ಪ್ರೌಢಶಾಲೆಗಳಿಲ್ಲದ ಪರಿಣಾಮ ಬಸ್ತವಾಡದ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಒಂದು 9 ಕಿ.ಮೀ ದೂರದ ಕೆ.ಕೆ.ಕೊಪ್ಪ ಗ್ರಾಮಕ್ಕೆ ಹೋಗಬೇಕು. ಇಲ್ಲವೇ 8 ಕಿ.ಮೀ ದೂರದ ಮಾಸ್ತಮರ್ಡಿ ಅಥವಾ 11 ಕಿ.ಮೀ ದೂರದ ಬೆಳಗಾವಿಗೆ ತೆರಳಬೇಕಿದೆ. ಪಕ್ಕದ 3 ಕಿ.ಮೀ ದೂರದ ಹಲಗಾದಲ್ಲಿ ಅನುದಾನಿತ ಪ್ರೌಢಶಾಲೆ ಇದೆ. ಆದರೆ, ಅಲ್ಲಿ ಶುಲ್ಕ ಕಟ್ಟಬೇಕಾಗುತ್ತದೆ.
ಬಸ್ತವಾಡದ ಮಕ್ಕಳು ಕೆ.ಕೆ.ಕೊಪ್ಪ, ಮಾಸ್ತಮರ್ಡಿಗೆ ಹೋಗಬೇಕೆಂದರೆ ಸಮರ್ಪಕ ಬಸ್ ಸೌಕರ್ಯವಿಲ್ಲ. ಬೆಳಗಾವಿಗೆ ಹೋಗಿ ಕಲಿಯುವುದೂ ಕಷ್ಟ. ಹಾಗಾಗಿ ಕೆಲವು ಬಡ ಮಕ್ಕಳು ಏಳನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ ಎಂಬುದು ಬೆಳಗಾವಿ ಚಳಿಗಾಲ ಅಧಿವೇಶನ ಆರಂಭದ ದಿನವಾದ ಇಂದು (ಡಿ.9) ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಕಾಣಬಹುದು.
ಈ ಸುದ್ದಿ ಓದಿದ್ದೀರಾ? ಅಧಿವೇಶನದಲ್ಲಿ ಆಗಬೇಕಾದ್ದೇನು | ಕಷ್ಟ-ನಷ್ಟದಲ್ಲಿ ಮುಳುಗೇಳುವ ಒಕ್ಕಲುತನ ಕುರಿತು ಚರ್ಚೆಯಾಗಲಿ
ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಚಿಕ್ಕೋಡಿಯನ್ನು ಅಲ್ಲಿನ ಶಿಕ್ಷಣ ಸಂಸ್ಥೆಗಳು ಮತ್ತು ಸೌಲಭ್ಯಗಳಿಗಾಗಿ ಜಿಲ್ಲೆಯ ಶಿಕ್ಷಣ ಕೇಂದ್ರವೆಂದು ಪರಿಗಣಿಸಲಾಗಿದೆ. ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಮಾಧ್ಯಮದಲ್ಲಿ ವಿವಿಧ ಕೋರ್ಸ್‌ಗಳನ್ನು ಒದಗಿಸುವ ಹಲವಾರು ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹಾಗೂ ಕಾಲೇಜುಗಳು ಪ್ರಾಥಮಿಕದಿಂದ ಪದವಿ ಹಂತದವರೆಗೂ ಇವೆ.
ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಹೆಚ್ಚಾದ ಸಂದರ್ಭದಲ್ಲಿ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಲೇಬೇಕು ಎಂಬ ಧ್ವನಿ ಹೆಚ್ಚು ಕೇಳಿಬಂದಿತ್ತು. ಬೆಳಗಾವಿ ಇನ್ನೂ ಎರಡು ಜಿಲ್ಲೆಗಳಾಗುವಷ್ಟು ವಿಸ್ತಾರ –ವ್ಯಾಪ್ತಿ ಹೊಂದಿದೆ. ಸರ್ಕಾರಗಳೇ ನೇಮಕ ಮಾಡಿದ್ದ ವಾಸುದೇವನ್ ಆಯೋಗ, ಹುಂಡೇಕರ ಸಮಿತಿ, ಗದ್ದಿಗೌಡರ ಆಯೋಗ ಹಾಗೂ ಎಂ ಬಿ ಪ್ರಕಾಶ್ ಆಯೋಗಗಳು ಬೆಳಗಾವಿಯಲ್ಲಿ ಹೊಸ ಜಿಲ್ಲೆಗಳ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದು ಆಗಿದೆ.

ಜೆ ಎಚ್ ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1997 ಆಗಸ್ಟ್ 22 ರಂದು ಚಿಕ್ಕೋಡಿ, ಗೋಕಾಕ್ ಹಾಗೂ ಬೆಳಗಾವಿ ಜಿಲ್ಲೆ ರಚನೆಗೆ ಶಿಫಾರಸ್ಸು ಮಾಡಿದ್ದರು. ಆಗ ಜಿಲ್ಲಾ ವಿಭಜನೆಗೆ ಕನ್ನಡಪರ ಹೋರಾಟಗಾರರಿಂದ ವ್ಯಾಪಕ ವಿರೋಧವೂ ವ್ಯಕ್ತವಾಯಿತು. ಅದೇ ಸಂದರ್ಭದಲ್ಲಿ ಮಹಾರಾಷ್ಟ್ರ- ಬೆಳಗಾವಿ ಗಡಿ ವಿವಾದ ಕೂಡ ಜಿಲ್ಲೆಯಲ್ಲಿ ಹೆಚ್ಚು ಮುನ್ನೆಲೆಯಲ್ಲಿ ಇತ್ತು. ಹಿರಿಯ ಕನ್ನಡ ಹೋರಾಟಗಾರ ಅಶೋಕ್ ಚಂದರಗಿ ನೇತೃತ್ವದ ನಿಯೋಗ ಜೆ ಎಚ್ ಪಟೇಲ್ ಅವರನ್ನು ಭೇಟಿಯಾಗಿ ಜಿಲ್ಲಾ ವಿಭಜನೆ ಶಿಫಾರಸ್ಸಿಗೆ ತಡೆಯೊಡ್ಡಿತು.
ಚಿಕ್ಕೋಡಿ ಜಿಲ್ಲಾ ಕೇಂದ್ರ ರಚನೆಯ ಹೋರಾಟದ ಕೂಗು ಮತ್ತೆ ಕೇಳಿಬಂದ ನಂತರ ಜನರ ಸಮಾಧಾನಕ್ಕಾಗಿ 2010ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಚಿಕ್ಕೋಡಿಯನ್ನು ಶೈಕ್ಷಣಿಕ ಜಿಲ್ಲೆ ಎಂದು ಘೋಷಿಸಿತು. ಚಿಕ್ಕೋಡಿಗೆ ಜಿಲ್ಲಾ ಮಟ್ಟದ ಕೆಲವು ಕಚೇರಿಗಳನ್ನು ಕೂಡ ಸರ್ಕಾರ ಒದಗಿಸಿತು. ಚಿಕ್ಕೋಡಿ, ಹುಕ್ಕೇರಿ, ಅಥಣಿ, ರಾಯಬಾಗ, ನಿಪ್ಪಾಣಿ ಹಾಗೂ ಕಾಗವಾಡದ ಜನರಿಗೆ ಇದು ಸ್ವಲ್ಪ ನಿರಾಳತೆ ತಂದಿದೆ. ಆದರೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಬೋಧಕರ ಕೊರತೆ ತೀವ್ರವಾಗಿದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಸಮಸ್ಯೆಗಳು ನಿತ್ಯ ನಿರಂತರ ಎಂಬಂತಾಗಿದೆ.
ಈ ಸುದ್ದಿ ಓದಿದ್ದೀರಾ? ಚಳಿಗಾಲ ಅಧಿವೇಶನ | ‘ಸುವರ್ಣಸೌಧ’ ತಗೊಂಡು ಏನು ಮಾಡೋಣ, ‘ಬ್ರ್ಯಾಂಡ್ ಬೆಳಗಾವಿ’ ಯಾವಾಗ?
ಹಿರಿಯ ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ ಅವರು ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಈ.ದಿನ.ಕಾಮ್ ಜೊತೆ ಮಾಹಿತಿ ಹಂಚಿಕೊಂಡು, “ಜಿಲ್ಲೆಯಲ್ಲಿ ಸರ್ಕಾರಿ ಮಾಧ್ಯಮ ಶಾಲೆಗಳ ಕೊರತೆ ಎಷ್ಟಿದೆ ಎಂದರೆ ಮಕ್ಕಳು ಏಳನೇ ತರಗತಿಗೆ ಶಾಲೆಯನ್ನು ಮೊಟಕುಗೊಳಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 1986ರಿಂದ 1996ರವರೆಗೂ ಹೋರಾಟ ಮಾಡಿದ ಪರಿಣಾಮ ಮೊದಲ ಬಾರಿಗೆ ಬೆಳಗಾವಿಯ ‘ಕಂಗ್ರಾಳಿ ಖುರ್ದ್’ ಪಟ್ಟಣದಲ್ಲಿ ಕನ್ನಡ ಶಾಲೆ ಆರಂಭವಾಯಿತು. ಅದು ರಾಜ್ಯೋತ್ಸವ ಧಿಕ್ಕರಿಸುತ್ತೇವೆ ಎಂದಾಗ ಈ ಶಾಲೆ ನಿರ್ಮಾಣವಾಯಿತು. ಹೋರಾಟದ ಫಲಶೃತಿಯಾಗಿ ಈಗ ಎಲ್ಲ ಹಳ್ಳಿಗಳಲ್ಲೂ ಸರ್ಕಾರಿ ಪ್ರಾಥಮಿಕ ಶಾಲೆಗಳು ನಿರ್ಮಾಣವಾಗಿವೆ. ಆದರೆ ಮರಾಠಿ ಮಾಧ್ಯಮ ಪ್ರೌಢ ಶಾಲೆಗಳು ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಸರ್ಕಾರಿ ಕನ್ನಡ ಮಾಧ್ಯಮದ ಪ್ರೌಢ ಶಾಲೆಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಬಂದೊದಗಿದೆ” ಎಂದು ಹೇಳಿದರು.
“ಚಂದ್ರಶೇಖರ್ ಪಾಟೀಲ (ಚಂಪಾ) ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನನ್ನ ನೇತೃತ್ವದಲ್ಲಿ ‘ಚಂದರಗಿ ಸಮಿತಿ’ ಸ್ಥಾಪಿಸಿದರು. 28 ಹಳ್ಳಿಗಳಲ್ಲಿ ಶಾಲೆ ಇಲ್ಲದಿರುವ ಬಗ್ಗೆ ಚಂಪಾ ಅವರಿಗೆ ನಾನೇ ವರದಿ ನೀಡಿದ್ದೆ. ಈಗ ನನ್ನ ಕಣ್ಣ ಮುಂದೆಯೇ ಮರಾಠಿ ಮಾಧ್ಯಮದ ಹಾವಳಿ ಹೆಚ್ಚಿದೆ. ಇದರಲ್ಲೂ ರಾಜಕಾರಣ ಅಂಟಿಕೊಂಡಿದೆ. ಮರಾಠಿ ಮಾಧ್ಯಮ ಶಾಲೆಗಳ ನಿರ್ಮಾಣಕ್ಕೆ ಮನವಿ ಸಲ್ಲಿಸುವ ಅರ್ಜಿಗಳು ಹೆಚ್ಚು ಸ್ವೀಕಾರ ಆಗುತ್ತಿವೆ. ಸರ್ಕಾರಿ ಪ್ರೌಢ ಶಾಲೆಗಳ ನಿರ್ಮಾಣವೇ ಆಗುತ್ತಿಲ್ಲ. ಜೊತೆಗೆ ಖಾಸಗಿ ಶಾಲೆಗಳ ದುಬಾರಿ ಡೊನೇಷನ್ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಖಾಸಗಿ ಶಾಲೆಗಳು ರಾಜಕಾರಣದೊಳಗಿನ ಬಲಾಢ್ಯ ವ್ಯಕ್ತಿಗಳ ಕೈಯಲ್ಲಿವೆ. ಅವುಗಳಿಗೆ ಪ್ರೋತ್ಸಾಹ ಹೆಚ್ಚಾಗುತ್ತಿದೆ” ಎಂದರು.

“2006ರಲ್ಲಿ ಬಸವರಾಜ ಹೊರಟ್ಟಿ ಶಿಕ್ಷಣ ಮಂತ್ರಿಯಾಗಿದ್ದರು. ಪ್ರೌಢ ಶಾಲೆಗಳ ಸ್ಥಾಪನೆಯ ಕಾಲ ಅದು. ಜಿಲ್ಲೆಯಲ್ಲಿ 56 ಹೊಸ ಸರ್ಕಾರಿ ಪ್ರೌಢ ಶಾಲೆಗಳನ್ನು ಹೊರಟ್ಟಿಯವರು ಕೊಟ್ಟು ಶಿಕ್ಷಣದಲ್ಲಿ ಕ್ರಾಂತಿ ಮಾಡಿದರು. ಅದೇ ಕೊನೆ. ಮತ್ತೆ ಶಿಕ್ಷಣ ಕ್ರಾಂತಿಯಾಗಲೇ ಇಲ್ಲ. ಹೊರಟ್ಟಿ ಅವರಂತಹ ಶಿಕ್ಷಣ ಮಂತ್ರಿಗಳು ಮತ್ತೆ ಬರಲೇ ಇಲ್ಲ. ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ಕೊರತೆ ಬಗ್ಗೆ ಸರ್ಕಾರ ವರದಿ ತರಿಸಿಕೊಂಡರೆ ಇನ್ನೂ ಉತ್ತಮ. ಸುವರ್ಣಸೌಧ ನಿರ್ಮಾಣವಾಗಿ 12 ವರ್ಷ ಕಳೆದಿದೆ. ಶೈಕ್ಷಣಿಕ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ” ಎಂದು ವಿವರಿಸಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾನ್ಯತೆಯೇ ಇಲ್ಲದ ಖಾಸಗಿ ಶಾಲೆಗಳು ನೂರಾರು ಇರುವ ಬಗ್ಗೆ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಇದರ ನಡುವೆ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಈಗ ಹೆಚ್ಚುತ್ತಿದ್ದರೂ ಶಾಲೆಗಳ ಸ್ಥಿತಿ ಮಾತ್ರ ಇನ್ನೂ ಬದಲಾಗಿಲ್ಲ. ವರ್ಷಗಳ ಮೇಲೆ ವರ್ಷಗಳು ಉರುಳಿದರೂ ಶಾಲೆಗಳ ದುರಸ್ತಿಯಾಗಬೇಕು ಎಂಬ ಕೂಗು ನಿಂತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1,600ಕ್ಕೂ ಹೆಚ್ಚು ಶಾಲಾ ಕೊಠಡಿಗಳ ದುರಸ್ತಿಯಾಗಬೇಕಾಗಿದೆ. ಕೆಲ ಕೊಠಡಿಗಳಲ್ಲಿ ಚಾವಣಿ ಹಾಳಾಗಿದ್ದರೆ, ಇನ್ನೂ ಕೆಲವೆಡೆ ನೆಲಹಾಸು, ಕಿಟಕಿ, ಬಾಗಿಲು ಮೊದಲಾದವು ಸರಿ ಇಲ್ಲ. ಸ್ವಲ್ಪ ಮಳೆಯಾದರೂ ಸಾಕು ಸೋರುತ್ತವೆ.
ಈ ಸುದ್ದಿ ಓದಿದ್ದೀರಾ? ‘ಬೆಳೆ ಪರಿಹಾರ’ ಪರಿಕಲ್ಪನೆಯೇ ಸರ್ಕಾರದಲ್ಲಿ ಇಲ್ಲ, ರಾಜ್ಯಕ್ಕೆ ಬೇಕಿದೆ ಹೊಸ ಕಾಯ್ದೆ – ಕಾನೂನು
ಬಗೆಹರಿಯದ ಶಿಕ್ಷಕರ ಕೊರತೆ
ಮುಖ್ಯವಾಗಿ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಬಹಳವಾಗಿ ಕಾಡುತ್ತಿದೆ. ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಜಿಲ್ಲೆಯಲ್ಲಿದೆ. ಬೆಳಗಾವಿ ಜಿಲ್ಲೆಯ ಶಿಕ್ಷಕರ ಕೊರತೆ ಬಗ್ಗೆ ಹೆಸರು ಹೇಳಲು ಇಚ್ಛಿಸದ ಹಿರಿಯ ಶಿಕ್ಷಕರೊಬ್ಬರು ಈ ದಿನ.ಕಾಮ್ ಜೊತೆ ಮಾತನಾಡಿ, “30 ಮಕ್ಕಳಿಗೆ ಓರ್ವ ಶಿಕ್ಷಕ ಇರಬೇಕು ಎಂಬುದು ನಿಯಮ. ಆದರೆ ಒಬ್ಬ ಶಿಕ್ಷಕನಿಗೆ 60-100 ವಿದ್ಯಾರ್ಥಿಗಳು ಇದ್ದಾರೆ. ಅದರಲ್ಲೂ ಬಹುವರ್ಗ ಬೋಧನೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. 1-3ನೇ ತರಗತಿ ಮಕ್ಕಳನ್ನು ಒಂದೇ ಕೋಠಡಿಯಲ್ಲಿ ಹಾಕಿ ಓರ್ವ ಶಿಕ್ಷಕ ಪಾಠ ಮಾಡಬೇಕು. ಒಂದೇ ವಿಷಯವನ್ನು ಮೂರು ತರಗತಿಗಳಿಗೂ ಬೋಧಿಸಬೇಕು. ಇದರಿಂದ ಈಗ ಹೈಸ್ಕೂಲ್‌ಗೆ ಬರುವ ಮಕ್ಕಳಿಗೆ ಪ್ರಾಥಮಿಕ ಶಾಲಾ ಪಠ್ಯಗಳೇ ಅರ್ಥವಾಗಿರುವುದಿಲ್ಲ. ಇದರಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಸಾವಿರಾರು ಮಕ್ಕಳು ಅನುತ್ತೀರ್ಣರಾಗುತ್ತಿದ್ದಾರೆ. ಇದು ಶಿಕ್ಷಣ ಇಲಾಖೆಗೆ ಯಾಕೆ ಅರ್ಥವಾಗಿಲ್ಲ” ಎಂದು ಪ್ರಶ್ನಿಸಿದರು.
ನಲಿ-ಕಲಿ ಬಹಳ ಉತ್ತಮ ಕಾರ್ಯಕ್ರಮ. ಆದರೆ, ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಲಿ-ಕಲಿ ಇದೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಯಾಕೆ ಸರ್ಕಾರ ನಲಿ-ಕಲಿ ಅನುಷ್ಠಾನಗೊಳಿಸುತ್ತಿಲ್ಲ? ಈ ತಾರತಮ್ಯ ಕೂಡ ಹೋಗಲಾಡಿಸಬೇಕು. ನನ್ನ ಅನುಭವದಲ್ಲಿ ಹೇಳುವುದಾದರೆ ಶಿಕ್ಷಕರ ಕೊರತೆ ಇಡೀ ಶಿಕ್ಷಣದ ತಳಪಾಯವನ್ನೇ ಅಭದ್ರಗೊಳಿಸಿದೆ. ಬಹುವರ್ಗ ಬೋಧನೆ ನಿಲ್ಲಬೇಕು. ಆಯಾ ತರಗತಿಗೆ ನಿರ್ದಿಷ್ಟ ಶಿಕ್ಷಕರು ಪಾಠ ಮಾಡುವಂತಾಗಬೇಕು. ಜೊತೆಗೆ ಪಾಠ ಕೇಂದ್ರಿತ ಕೆಲಸಗಳು ಹೆಚ್ಚಾಗಬೇಕು. ಆದರೆ ಶಿಕ್ಷಕರನ್ನು ಬೇರೆ ಬೇರೆ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಶಿಕ್ಷಕರಲ್ಲೂ ಒತ್ತಡ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಒತ್ತಡದಿಂದ ಸಾಯುತ್ತಿರುವ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಶಿಕ್ಷಕರಿಗೂ ತುಸು ನೆಮ್ಮದಿಯ ಬದುಕನ್ನು ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಒಟ್ಟಾರೆ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಶಿಕ್ಷಣ ಅವಸ್ಥೆ ಶೋಚನೀಯ ಸ್ಥಿತಿ ತಲುಪಿದೆ. ಮರಾಠಿ ಮುಂದೆ ಮುಂದೆ, ಕನ್ನಡ ತೀರಾ ಹಿಂದೆ ಎನ್ನುವಂತಾಗಿದೆ. ಸುವರ್ಣಸೌಧ ನಿರ್ಮಾಣದ ಹಿಂದಿನ ಆಶಯ ಈಡೇರಲು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ 11ನೇ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ರಚನಾತ್ಮಕ ತೀರ್ಮಾನಗಳನ್ನು ಕೈಗೊಳ್ಳುವುದು ಸದ್ಯದ ತುರ್ತು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.