87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕಸಾಪ ಹೊರಡಿಸಿದ್ಧ ನಿಯಮಾವಳಿಯಲ್ಲಿ ‘ಬಾಡೂಟ ನಿಷೇಧ’ ಎಂಬ ಪದವನ್ನು ಕಸಾಪ ತನ್ನ ವೆಬ್ಸೈಟ್‌ನಿಂದ ಕೈಬಿಟ್ಟಿದೆ.
ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ಹೇರಿದ್ದಕ್ಕೆ ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೆ ಮಾಂಸವನ್ನು ಮದ್ಯ ಮತ್ತು ತಂಬಾಕಿನೊಂದಿಗೆ ಸಮೀಕರಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಸಾಪ ಈ ಕ್ರಮ ಕೈಗೊಂಡಿದೆ.

ಮಾಂಸಾಹಾರದ ಪರ ಹೋರಾಟಕ್ಕೆ ಸಂದ ಮೊದಲ ಜಯ
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಇರಬೇಕೆಂದು ಆಗ್ರಹಿಸಿ ಮಂಡ್ಯದಲ್ಲಷ್ಟೇ ಅಲ್ಲದೆ ನಾಡಿನ ಹಲವೆಡೆಯಿಂದ ಹೋರಾಟ ತೀವ್ರವಾಗಿತ್ತು. ಮಂಡ್ಯದಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳು ಮಾಂಸಾಹಾರ ಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರಿಗೆ ಮನವಿ ಸಲ್ಲಿಸಿದರು. ಅದೇ ಸಂದರ್ಭದಲ್ಲಿ ಮೊಟ್ಟೆಯನ್ನು ತಿಂದು ಪ್ರತಿಭಟನೆ ನಡೆಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಕನ್ನಡ ಸಾಹಿತ್ಯ ಸಮ್ಮೇಳನ; ಮುಂದಿನ ಪೀಳಿಗೆಗೆ ಆಹಾರ ಉಳಿಸುವ ಜಾಗೃತಿ ಗೋಷ್ಠಿ ನಡೆಸುವಂತೆ ಮನವಿ
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಂಸಾಹಾರ ನಿರ್ಬಂಧಿಸುವುದು ಸಾಧುವಲ್ಲ. ಅದರಲ್ಲೂ ಮಂಡ್ಯ ಜಿಲ್ಲೆಯ ಹಬ್ಬ, ಸಂಭ್ರಮ, ಸಮ್ಮೇಳನಗಳು ಮಾಂಸಾಹಾರಿ ಊಟೋಪಚಾರಗಳಿಂದ ಹೆಸರುವಾಸಿಯಾಗಿವೆ. ಅಲ್ಲದೆ ಸಮ್ಮೇಳನದಲ್ಲಿ ಭಾಗವಹಿಸುವ ಬಹುಸಂಖ್ಯಾತರು ಮಾಂಸಾಹಾರಿಗಳೇ ಆಗಿರುವಾಗ ಈ ನಿಷೇಧಗಳು ಯಾತಕ್ಕಾಗಿ” ಎಂದು ಹಲವು ಸಂಘಟನೆಗಳು ಪ್ರಶ್ನೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕಸಾಪ ‘ಮಾಂಸಾಹಾರ’ ನಿಷೇಧವನ್ನು ವಾಪಸ್ ಪಡೆದಿದೆ.