2023ರ ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಲ್ಲಿ ಸ್ಲಂ ಜನರಿಗೆ ನೀಡಿರುವ ಭರವಸೆಗಳನ್ನು ಜ್ಞಾಪಿಸಲು ಮತ್ತು ನಗರಗಳಲ್ಲಿ ದಮನಕ್ಕೊಳಗಾದ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಆಗ್ರಹಿಸಿ, ಸ್ಲಂ ನಿವಾಸಿಗಳ ನಿರ್ಲಕ್ಷ್ಯ ಖಂಡಿಸಿ ಹಾಗೂ ವಿವಿಧ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಡಿಸೆಂಬರ್ ರಂದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲು ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸ್ಲಂ ನಿವಾಸಿಗಳನ್ನು ನಿರ್ಲಕ್ಷ್ಯತೆಯಿಂದ ರಾಜ್ಯ ಸರ್ಕಾರ ನೋಡುತ್ತಿದ್ದು 2024-2025ನೇ ಸಾಲಿನ ಬಜೆಟ್‌ನಲ್ಲಿ ಬರಿ 30 ಕೋಟಿಗಳನ್ನು ಸ್ಲಂಗಳ ಅಭಿವೃದ್ಧಿಗೆ ನೀಡಿರುವುದು ನಗರ ವಂಚಿತ ಸಮುದಾಯಗಳನ್ನು ಅಪಮಾನಿಸಿದಂತಾಗಿದೆ. ಸಾಮಾಜಿಕ ನ್ಯಾಯ ಸರ್ಕಾರದ ಧ್ಯೇಯವಾದರು ಸ್ಲಂ ಜನರನ್ನು ಒಂದು ಸಮುದಾಯವಾಗಿ ಗುರುತಿಸುವಲ್ಲಿ ವಿಫಲವಾಗಿದೆ. ಇದರ ಜೊತೆಯಲ್ಲಿ ನಗರ ಬಡಜನರಾಗಿರುವ ಸ್ಲಂ ನಿವಾಸಿಗಳ ಕಷ್ಟದ ಅನುಭವವಿಲ್ಲದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ರಿಯಲ್ ಏಸ್ಟೇಟ್ ಉದ್ಯಮಿಗಳ ಮತ್ತು ಬಿಲ್ಡರ್ ಗಳ ಪರವಾದಂತಹ ನಿಲುವುಳ್ಳವರಾಗಿದ್ದಾರೆ. ಇದರಿಂದಾಗಿ ಸಂಪೂರ್ಣವಾಗಿ ಸ್ಲಂಗಳ ಅಭಿವೃದ್ಧಿ ನೆಲಕಚ್ಚಿದೆ ಎಂದರು.
ಖಾಸಗಿ ಮಾಲೀಕತ್ವದ 710ಕ್ಕೂ ಹೆಚ್ಚು ಸ್ಲಂಗಳು ಘೋಷಣೆಯಾಗಿ 1.50 ಲಕ್ಷ ಕುಟುಂಬಗಳು ಜೀವನ ಸಾಗಿಸುತ್ತಿದ್ದು ಇವುಗಳನ್ನು ಸಕ್ರಮಗೊಳಿಸಲು ಸರ್ಕಾರ ಬದ್ಧತೆ ಪ್ರರ್ದಶಿಸುವುದಿರಲಿ, 1973ರ ಸ್ಲಂ ಕಾಯಿದೆ ವಿರುದ್ಧವಾಗಿ ಕಳೆದ 2 ವರ್ಷಗಳಿಂದ ಖಾಸಗಿ ಸ್ಲಂಗಳನ್ನು ಘೋಷಿಸುವುದನ್ನೇ ನಿಲ್ಲಿಸಲಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಬಡಜನರ ಪರವಾಗಿರುವ ಕಾಯಿದೆಯನ್ನು ಜಾರಿಗೊಳಿಸಲು ನಿರ್ಲಕ್ಷ್ಯ ಧೋರಣೆ ತಾಳಲಾಗಿದೆ ಎಂದು ಆರೋಪಿಸಿದರು.
ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಮತ್ತು ಸಾವಿತ್ರಿ ಬಾಪೂಲೆ ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾರದಮ್ಮ, ಕಾರ್ಯದರ್ಶಿ ಅನುಪಮಾ ಮಾತನಾಡಿ ರಾಜ್ಯದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ 1,80,253 ಮನೆಗಳನ್ನು ವಿವಿಧ ನಗರ ಪಟ್ಟಣಗಳಲ್ಲಿ ನಿರ್ಮಿಸಲಾಗುತ್ತಿದ್ದು ಇದುವರೆಗೂ ಅಂದಾಜು 60,789 ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರ ಮಾಡಿರುವುದು ಬಿಟ್ಟರೆ ಉಳಿದ 1,20,000 ಕುಟುಂಬಗಳು ಅತಂತ್ರವಾಗಿ ಸರ್ವರಿಗೂ ಸೂರು ಕಲ್ಪಿಸುವ ಯೋಜನೆಯಲ್ಲಿ ಬೀದಿಗಳಲ್ಲಿ ಬದುಕುತ್ತಿದ್ದಾರೆ. 2020ರಲ್ಲಿ ಜಾರಿಗೆ ತಂದ ಕೊಳಗೇರಿ ನಿವಾಸಿಗಳಿಗೆ ಭೂ ಒಡೆತನ ನೀಡುವ ಹಕ್ಕುಪತ್ರ ಹಂಚಿಕೆ 3.36 ಲಕ್ಷ ಕುಟುಂಬಗಳ ಪೈಕಿ ಇದುವರೆಗೂ 1.14 ಲಕ್ಷ ಕುಟುಂಬಗಳಿಗೆ ಮಾತ್ರ ನೀಡಲಾಗಿದೆ. ಆದರೆ ಸೀಲ್ ಡೀಡ್ ನೀಡುವ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತಾ ಮಾಡಲು 20 ವರ್ಷಗಳ ತೆರಿಗೆ ಪಾವಾತಿಸುವಂತೆ ಹೇಳಿರುವುದು ಬಡಜನರಿಗೆ ಹೊರೆಯಲ್ಲವೇ ಎಂದು ಪ್ರಶ್ನಿಸಿದರು.

ಸ್ಲಂ ನಿವಾಸಿಗಳ ಜನಸಂಖ್ಯೆವಾರು ಬಜೆಟ್ ನೀಡಲು, ಭವಿಷ್ಯದ ನಗರೀಕರಣ ಆಯಾಮದಲ್ಲಿ ಹೊಸ ಸ್ಲಂ ಕಾಯಿದೆ ರಚನೆ, ನಿವೇಶನರಹಿತರಿಗೆ ವಸತಿ ಹಕ್ಕು ಕಾಯಿದೆ ಸೇರಿದಂತೆ ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯಾಗಬೇಕಿದೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡಲು ಒತ್ತಾಯಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ತುಮಕೂರಿನಿಂದ ನೂರಾರು ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಹಕ್ಕೋತ್ತಾಯಗಳು
ಸ್ಲಂ ಜನರಿಗೆ ಹಕ್ಕುಪತ್ರ, ನೋಂದಣಿ, ಇ.ಖಾತಾ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು.
ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಬೇಕು.
2025-2026ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ ಅನುದಾನವನ್ನು ಮೀಸಲಿಡಬೇಕು.
ರಾಜ್ಯದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಸ್ಲಂ ನಿವಾಸಿಗಳಿಗೆ ನಿರ್ಮಿಸುತ್ತಿರುವ ವಸತಿ ಸಮುಚ್ಛಯಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು.
ಸ್ಲಂ ನಿವಾಸಿಗಳ ಕಷ್ಟದ ಅನುಭವವಿಲ್ಲದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂಬ ಹಕ್ಕೋತ್ತಾಯಗಳಾಗಿವೆ.
ಸುದ್ದಿಗೋಷ್ಠಿಯಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಕಣ್ಣನ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಮಂಗಳಮ್ಮ, ಕೆಂಪಣ್ಣ, ರಂಗನಾಥ್, ಧನಂಜಯ್, ಟಿ.ಆರ್ ಮೋಹನ್, ಉಪಸ್ಥಿತರಿದ್ದರು.
