ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಲ್ಲೂರು, ನಂದಿಕೂರಿನಿಂದ ಕಾಸರಗೋಡಿಗೆ 400ಕೆವಿ ವಿದ್ಯುತ್ ಲೈನ್ ಅಳವಡಿಸಲು ಟವರ್ ನಿರ್ಮಾಣಕ್ಕೆ ಪ್ರತಿರೋಧ ಒಡ್ಡಿ ಇನ್ನಾ ಗ್ರಾಮಸ್ಥರು ಅಣ್ಣಾಜಿಗೋಳಿಯ ಗುಡ್ಡ ಪ್ರದೇಶದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆದಿದೆ.
ನಂದಿಕೂರು ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಪಕ್ಕದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಅವೈಜ್ಞಾನಿಕವಾಗಿ ಅಳವಡಿಸುವ ಕಾಮಗಾರಿಯನ್ನು ಆರಂಭಿಸಲು ಕಂಪನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಸ್ಥಳೀಯರು ವಿರೋಧಿಸಿದ್ದಾರೆ ಕಾಮಗಾರಿ ತಾತ್ಕಾಲಿಕವಾಗಿ ನಿಂತಿದ್ದರೂ ಯಾವ ಸಮಯದಲ್ಲಾದರೂ ಪುನಾರಂಭ ಆಗಬಹುದು ಈ ಸಂಬಂಧ ಕಳೆದ ಒಂದು ವಾರದಿಂದ ಇಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಯೋಜನೆ ಇದಾಗಿದ್ದು ಕಳೆದ ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಈಗಿನ ಕಾರ್ಕಳ ಶಾಸಕರಾಗಿರುವ ಸುನಿಲ್ ಕುಮಾರ್ ರವರ ಅನುಮತಿಯಿಂದ ಯೋಜನೆಯು ಅನುಮೋದನೆಗೊಂಡಿದ್ದು ಅದಾನಿ ಉಷ್ಣ ವಿದ್ಯುತ್ ಸ್ಥಾವರದಿಂದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಹೈ ಟೆನ್ಷನ್ ವಿದ್ಯುತ್ ತಂತಿಗಳು ಇನ್ನಾ ಗ್ರಾಮದ ಫಲವತ್ತಾದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದ ನಡುವೆ ಹಾದು ಹೋಗುವುದರಿಂದ ನೂರಾರು ಕೃಷಿಕರು ಸಂತ್ರಸ್ತರಾಗುವ ಅಪಾಯವಿದೆ.
ಇನ್ನಾ ಗ್ರಾಮದ ಜನತೆ ತಮ್ಮ ಕೃಷಿ ಭೂಮಿ ಮನೆಮಠಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ರೈತರ ಕೃಷಿ ಭೂಮಿಯನ್ನು ಜನರ ಬದುಕನ್ನು ನುಂಗಿ ನೀರು ಕುಡಿಯುವ ಪ್ರಸ್ತುತ ಯೋಜನೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸ ಬೇಕಾಗಿದೆ.
ನಂದಿಕೂರಿನಲ್ಲಿ ಎರಡು ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದಿಸುತ್ತಿರುವ ಅದಾನಿಯವರ ಯುಪಿಸಿಎಲ್ ಕಂಪೆನಿ ಕೇರಳ ಸರಕಾರ ದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಎಲ್ಲೂರಿನಿಂದ ಕಾಸರಗೋಡಿಗೆ 115ಕಿ.ಮೀ. ದೂರಕ್ಕೆ 400ಕೆವಿ ಹೈಟೆನ್ನನ್ ವಿದ್ಯುತ್‌ಲೈನ್ ಮೂಲಕ ಇಲ್ಲಿ ಉತ್ಪಾದನೆಯಾದ ವಿದ್ಯುತ್ ಕೇರಳಕ್ಕೆ ಹೋಗಬೇಕಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 17 ಟವರ್ ನಿರ್ಮಾಣಗೊಳ್ಳಬೇಕಿದೆ. ಇವುಗಳಲ್ಲಿ 8 ಪಲಿಮಾರು ಗ್ರಾಮದಲ್ಲಿ ದ್ದರೆ, ಇನ್ನಾ ಗ್ರಾಮದಲ್ಲಿ 9 ಟವರ್ ನಿರ್ಮಾಣಗೊಳ್ಳಬೇಕಿದೆ. ಸುಮಾರು 700 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಸ್ಟೇರ್‌ಲೈಟ್ ಎಂಬ ಕಂಪೆನಿ ಈ ಕಾಮಗಾರಿಯನ್ನು ನಡೆಸುತ್ತಿದೆ.
ಹಿಂದೆ ಹಾಸನಕ್ಕೆ 200ಕೆ.ವಿ. ವಿದ್ಯುತ್ ಲೈನ್‌ಗಾಗಿ ಇನ್ನಾ ಗ್ರಾಮದಲ್ಲಿ ಎಂಟು ಟವಗರ್‌ಗಳು ನಿರ್ಮಾಣಗೊಂಡಿವೆ. ಅದರ ಮೂಲಕವೇ ಯುಪಿಸಿಎಲ್ ವಿದ್ಯುತ್ ಹಾಸನಕ್ಕೆ ಹೋಗುತ್ತಿದೆ. ಅಂದು ಜನರಿಗೆ ಅರಿವಿನ ಕೊರತೆಯಿಂದ ಹೆಚ್ಚಿನ ಪ್ರತಿ ರೋಧ ಎದುರಾಗಿರಲಿಲ್ಲ. ಅಂದು ಯಾರಿಗೂ ಪರಿಹಾರವನ್ನೂ ನೀಡಿರಲಿಲ್ಲ.
ಆದರೆ ಈಗ ವಿದ್ಯುತ್ ಲೈನ್ ಹಾದುಹೋಗುವ ಕೆಳಗಿನ ಪ್ರದೇಶದ ಜನರ, ಕೃಷಿ ಭೂಮಿಯ ಸ್ಥಿತಿ ಅರಿವಿರುವ ಇನ್ನಾ ಗ್ರಾಮಸ್ಥರು ಟವರ್ ನಿರ್ಮಾಣಕ್ಕೆ ತೀವ್ರ ಪ್ರತಿರೋಧ ತೋರುತಿದ್ದಾರೆ. ಇದರ ವ್ಯಾಪ್ತಿಯಲ್ಲಿ 280-290 ಮನೆಗಳು ಬರಲಿದ್ದು, 4-5ಸಾವಿರ ಮಂದಿಗೆ ಇದರಿಂದ ತೊಂದರೆ ಇದೆ ಎಂಬುದು ವಿರೋಧಿಸುತ್ತಿರುವ ಜನತೆಯ ದೂರಾಗಿದೆ. ಆದರೇ ಈ ಬಗ್ಗೆ ಜಿಲ್ಲಾಡಳಿತವಾಗಲೀ, ಅಧಿಕಾರಿಗಳಾಗಲೀ ಯಾವುದೇ ಮಾಹಿತಿ ನೀಡದಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಯೋಗೇಶ್ ಇನ್ನಾ, 400 ಕೆವಿ ಹೈಟೆನ್ನನ್ ವಿದ್ಯುತ್‌ಲೈನ್ ಹಾಕಲು ಹೊರಟಿದ್ದಾರೆ ಇಲ್ಲಿಯ ಸ್ಥಳೀಯರಿಗೆ ಯಾವುದೇ ರೀತಿಯ ನೋಟೀಸ್ ಕೊಡದೆ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ, ಒತ್ತಾಯಪೂರ್ವಕವಾಗಿ, ಪೊಲೀಸ್ ಇಟ್ಟು ಸ್ಥಳೀಯರ ಭೂಮಿಯನ್ನು ಕಸಿಯಲು ಮುಂದಾಗಿದ್ದಾರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಸಹ ದಬ್ಬಾಳಿಕೆ ಮಾಡುತ್ತಿದ್ದಾರೆ ನಮಗೆ ನ್ಯಾಯ ಸಿಗುವ ವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯರಾದ ಶೋಭಾ ರವರು ಈ ರೀತಿಯ ವಿದ್ಯುತ್ ಲೈನ್ ಅಳವಡಿಸುವುದರಿಂದ ನಮ್ಮ ಮನೆಗಳಿಗೆ ಮಳೆಗಾಲದಲ್ಲಿ ಸಿಡಿಲು ಹೊಡೆದರೆ ಬಹಳಷ್ಟು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಬಹುದು ನಮಗೆ ಇದರ ಬದಲಾಗಿ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಆದರೆ ನಮಗೆ ಪರಿಹಾರ ಏನು ಸಹ ಬೇಡ ನಮ್ಮ ಜಾಗ ನಮಗಿರಲಿ ನಾಲ್ಕು ವರ್ಷದಿಂದ ವಿರೋದಿಸುತ್ತಲೇ ಬರುತ್ತಿದ್ದೇವೆ ಆದರೆ ಈಗ ಕಾಮಗಾರಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ನಾವು ಅಭಿವೃದ್ಧಿಗೆ ವಿರೋಧಿಗಳಲ್ಲ. ಆದರೆ ಹಾಸನಕ್ಕೆ ಹೋಗಿರುವ ವಿದ್ಯುತ್‌ಲೈನ್‌ನಿಂದ ಊರಿನಲ್ಲಿ ಶೇ.50ರಷ್ಟು ಕೃಷಿ ನಾಶವಾಗಿದೆ. ಈ ಯೋಜನೆಯೂ ಬಂದರೆ ಜನ ಊರು ಬಿಟ್ಟು ಹೋಗಬೇಕಾಗುತ್ತದೆ. ಆದುದರಿಂದ ಬದಲಿ ಪರಿಹಾರೋಪಾಯದೊಂದಿಗೆ ಅವರು ವಿದ್ಯುತ್ ಲೈನ್ ಕೊಂಡೊಯ್ಯಲಿ. ಅಂಡರ್‌ಗೌಂಡ್‌ನಲ್ಲಿ ಅದನ್ನು ಒಯ್ಯುವುದು ಸುರಕ್ಷಿತ ಮಾರ್ಗ. ಅದಕ್ಕೆ ನಮ್ಮಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ಈ ಒಂದು ಕಾಮಗಾರಿಯನ್ನು ಪೂರ್ತಿಕರಿಸಲು ಮುಂದಾಗಿರುವ ರಾಜಕೀಯ ನಾಯಕರು ಕೂಡಲೇ ಎಚ್ಚೆತ್ತು ಮುಂದೆ ಸಂಭವಿಸಬಹುದಾದ ಅನಾಹುತಕ್ಕೆ ಕೂಡಲೇ ಪೂರ್ಣ ವಿರಾಮ ಹಾಕಬೇಕಾಗಿದೆ ಮತ್ತು ಸ್ಥಳೀಯರ ಬದುಕಿಗೆ ಆಶಾಕಿರಣವಾಗಬೇಕಾಗಿದೆ.
ಶಾರೂಕ್ ತೀರ್ಥಹಳ್ಳಿ
