ಬಿಜೆಪಿ ಸರ್ಕಾರ ಮಾಡಿರುವ ಮರುವಿಂಗಡಣೆ ಮತ್ತು ಮೀಸಲಾತಿ ಹಂಚಿಕೆ ಪ್ರಕ್ರಿಯೆಯು ಕಾಂಗ್ರೆಸ್‌ಗೆ ಸವಾಲಾಗಬಹುದು. ಅದಕ್ಕಾಗಿ, ಹೊಸ ಸರ್ಕಾರ ಮತ್ತೊಮ್ಮೆ ಈ ಪ್ರಕ್ರಿಯೆಗಳನ್ನು ನಡೆಸಬಹುದು ಎನ್ನಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ, ಸರ್ಕಾರ ರಚಿಸಿದೆ. ಇದೇ ಹುಮ್ಮಸ್ಸಿನಲ್ಲಿ ಕೈ ಪಡೆ ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ಪಕ್ಷವು ಗುರುತರವಾದ ಕೆಲಸಗಳನ್ನು ಮಾಡಬೇಕಾಗಿದೆ.
ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ಹಾಗೂ ಕೆಲವು ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ವಿಚಾರಣೆಯಲ್ಲಿವೆ. ಆ ಎಲ್ಲ ಪ್ರಕರಣಗಳ ತೀರ್ಪು ಹೊರಬಿದ್ದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತೇವೆಂದು ಹಲವು ತಿಂಗಳುಗಳಿಂದ ರಾಜ್ಯ ಚುನಾವಣಾ ಆಯೋಗ ಕಾಯುತ್ತಿದೆ.
ಬಿಬಿಎಂಪಿ ಚುನಾಯಿತ ಕೌನ್ಸಿಲ್‌ನ ಅವಧಿಯು 2020ರ ಸೆಪ್ಟೆಂಬರ್‌ನಲ್ಲಿಯೇ ಮುಗಿದಿದೆ. ಕಳೆದ ಮುರು ವರ್ಷಗಳಿಂದ ಚುನಾಯಿತ ಸದಸ್ಯರು ಮತ್ತು ಸ್ಥಾಯಿ ಸಮಿತಿಗಳಿಲ್ಲದೆ ಆಡಳಿತಾಧಿಕಾರಿಯ ಆಡಳಿತದಲ್ಲಿ ಬಿಬಿಎಂಪಿ ಸಾಗುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಕೆ ಆರ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಮಳೆ ನೀರಿನಲ್ಲಿ ಯುವತಿಯೊಬ್ಬರು ಮೃತಪಟ್ಟ ಘಟನೆಯು ಬಿಬಿಎಂಪಿ ಚುನಾವಣೆಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ಬಂದಿದೆ. ‘ಹೊಸ ಸರ್ಕಾರದಿಂದ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವು ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಮಾಡಿ, 243 ವಾರ್ಡ್‌ಗಳಿಗೆ ಹೆಚ್ಚಿಸಿದೆ. ಈಗ, ಕಾಂಗ್ರೆಸ್ ಸರ್ಕಾರವು ಮತ್ತೆ ಮರುವಿಂಗಡಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಚುನಾವಣೆ ಮುಂದೂಡಬಹುದು ಎಂಬ ಅಭಿಪ್ರಾಯಗಳಿವೆ. ಆದರೆ, ಪ್ರತಿಪಕ್ಷವಾಗಿದ್ದಾಗ ಚುನಾವಣೆಗೆ ಬೇಡಿಕೆ ಇಟ್ಟಿರುವುದರಿಂದ ಬಿಬಿಎಂಪಿ ಚುನಾವಣೆ ವಿಳಂಬವಾಗುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನ 28 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ, ಬಿಬಿಎಂಪಿಯಲ್ಲಿ ಆಡಳಿತ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಸವಾಲಾಗಿದೆ.
ಈ ಸುದ್ದಿ ಓದಿದ್ದೀರಾ?: ಮೊಟ್ಟೆ ಬೆಲೆ ಏರಿಕೆ; ಮಧ್ಯಾಹ್ನದ ಬಿಸಿಯೂಟಕ್ಕೆ ಬಜೆಟ್ ಕೊರತೆ
ಮತ್ತೊಂದೆಡೆ, 31 ಜಿಲ್ಲಾ ಪಂಚಾಯಿತಿ ಮತ್ತು 238 ತಾಲೂಕು ಪಂಚಾಯಿತಿಗಳ ಚುನಾವಣೆಯೂ ಬಾಕಿ ಉಳಿದಿದೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಎರಡೂವರೆ ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ವಿವಿಧ ಕಾರಣಗಳಿಗಾಗಿ, ಹಿಂದಿನ ಬಿಜೆಪಿ ಸರ್ಕಾರವು ರಾಜ್ಯ ಚುನಾವಣಾ ಆಯೋಗದಿಂದ ಮರುವಿಂಗಡಣೆ ಮಾಡುವ ಅಧಿಕಾರವನ್ನು ಹಿಂಪಡೆದಿತ್ತು. ಜೊತೆಗೆ, ಕೊರೊನಾ ಸಾಂಕ್ರಾಮಿಕ ಮರುವಿಂಗಡಣೆ ಪ್ರಕ್ರಿಯೆಯನ್ನು ಸಹ ದುರ್ಬಲಗೊಳಿಸಿತ್ತು.
ಮರುವಿಂಗಡಣೆ ಮತ್ತು ಮೀಸಲಾತಿ ಹಂಚಿಕೆ ಪ್ರಕ್ರಿಯೆಯು ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಆದರೆ, ಬಿಜೆಪಿ ಸರ್ಕಾರ ಮಾಡಿರುವ ಪ್ರಕ್ರಿಯೆಗಳು ಕಾಂಗ್ರೆಸ್‌ಗೆ ಸವಾಲಾಗಬಹುದು. ಅದಕ್ಕಾಗಿ, ಹೊಸ ಸರ್ಕಾರ ಮತ್ತೊಮ್ಮೆ ಈ ಪ್ರಕ್ರಿಯೆಗಳನ್ನು ನಡೆಸಬಹುದು ಎನ್ನಲಾಗಿದೆ.
“ನಾವು ಚುನಾವಣೆಗಳನ್ನು ನಡೆಸಲು ಸಿದ್ದರಿದ್ದೇವೆ. ಆದರೆ, ಮೀಸಲಾತಿ ಪ್ರಕ್ರಿಯೆಯನ್ನು ಸರ್ಕಾರ ನಡೆಸುತ್ತಿದೆ. ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿವೆ. ಎಲ್ಲವೂ ಸರಾಗವಾಗಿ ಮುಗಿದರೆ, ಮುಂದಿನ ಕೆಲವು ತಿಂಗಳಲ್ಲಿ ಚುನಾವಣೆಗಳು ನಡೆಯುತ್ತವೆ” ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜ್ ಹೇಳಿದ್ದಾರೆ.