ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ತಮಿಳುನಾಡು ಸರ್ಕಾರವು ವೈಕಂ ಪ್ರಶಸ್ತಿ ಘೋಷಿಸಿದೆ. ದಮನಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ವ್ಯಕ್ತಿಗಳಿಗೆ ತಮಿಳುನಾಡು ಸರ್ಕಾರ ಘೋಷಿಸಿರುವ ಪ್ರಶಸ್ತಿ ಇದಾಗಿದೆ.
ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಗಣ್ಯ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ವೈಕಂ ಪ್ರಶಸ್ತಿ ನೀಡಲಾಗುವುದು ಎಂದು ಕಳೆದ ವರ್ಷ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವೈಕಂ ಸತ್ಯಾಗ್ರಹ ಶತಮಾನೋತ್ಸವದ ಸಂದರ್ಭದಲ್ಲಿ ಘೋಷಿಸಿದ್ದರು.
ಇದನ್ನು ಓದಿದ್ದೀರಾ? ಮೈಸೂರು | ದೇವನೂರ ಬಗ್ಗೆ ದ್ವೇಷ ಭಾಷಣ; ಹೆಚ್ ಗೋವಿಂದಯ್ಯ ವಿರುದ್ಧ ದಸಂಸ ಕಿಡಿ
ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಚೆಕ್ ಮತ್ತು ಪದಕವನ್ನು ಒಳಗೊಂಡಿರುತ್ತದೆ. ಹಾಗೆಯೇ ಐದು ಲಕ್ಷ ರೂಪಾಯಿ ನಗದು ಪ್ರಶಸ್ತಿ ಪುರಸ್ಕೃತರಿಗೆ ಲಭಿಸಲಿದೆ.
ಕುಸುಮಬಾಲೆ, ಎದೆಗೆ ಬಿದ್ದ ಅಕ್ಷರ, ಆರ್‌ಎಸ್‌ಎಸ್: ಆಳ ಮತ್ತು ಅಗಲ, ಒಡಲಾಳ ಮೊದಲಾದ ಪುಸ್ತಕಗಳನ್ನು ಬರೆದಿರುವ ದೇವನೂರ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2011ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಕುಸುಮಬಾಲೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
