ಸರ್ಕಾರ ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿ ಬಸ್ ನಿಲ್ದಾಣಗಳನ್ನು ನಿರ್ಮಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಲು ನಿರಾಸಕ್ತಿ ತೋರುತ್ತಿರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಮಾರ್ಪಡುತ್ತಿದೆ. ಸಾರ್ವಜನಿಕರ ಉಪಯೋಗಕ್ಕೆಂದು ಬಸ್ ನಿಲ್ದಾಣ ನಿರ್ಮಿಸಿದರೆ, ಅದು ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪುತ್ತಿದೆ.
ಇದಕ್ಕೆ ಉತ್ತಮ ನಿದರ್ಶನ ಎನ್ನುವಂತೆ ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದ ಬಸ್ ನಿಲ್ದಾಣ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆಯಾದರೂ, ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಈ ಬಸ್ ನಿಲ್ದಾಣ ಬೆಳಗ್ಗಿನ ಸಮಯದಲ್ಲಿ ಉಳ್ಳಾಗಡ್ಡಿ ಕಣವಾಗಿ ಮಾರ್ಪಟ್ಟರೆ, ಸಂಜೆಯ ವೇಳೆಗೆ ಮದ್ಯಪಾನದಂತಹ ಅನೈತಿಕ ಚಟುವಟಿಕೆಗಳಿಗೆ ವೇದಿಕೆಯೊದಗಿಸಿದೆ.
ಪ್ರಸಿದ್ಧಿ ಪಡೆದಿರುವ ಇಟಗಿ ಭೀಮಾಂಬಿಕೆ ದೇವಸ್ಥಾನಕ್ಕೆ ನೂರಾರು ಜನರು ಪ್ರತಿನಿತ್ಯ ಬರುತ್ತಾರೆ. ಹೀಗೆ ಬರುವ ಜನರಿಗೆ ಸರಿಯಾದ ಬಸ್ ನಿಲ್ದಾಣದಲ್ಲಿ ಕೂರಲು ವ್ಯವಸ್ಥೆ ಇರುವುದಿಲ್ಲ. ರಸ್ತೆ ಬದಿಯಲ್ಲಿಯೇ, ಬಿಸಿಲಿನಲ್ಲಿ ನಿಂತು ಬಸ್ಸಿಗೆ ಕಾಯುವಂತಾಗಿದೆ.
ರೋಣ ಬಸ್ಸುಗಳು ಇಟಗಿ ಗ್ರಾಮಕ್ಕೆ ಬಂದು ಸೂಡಿ ಗ್ರಾಮದ ಮೂಲಕ ಗಜೇಂದ್ರಗಡಕ್ಕೆ ಸಾಕಷ್ಟು ಬಸ್ಸುಗಳು ಓಡಾಡುತ್ತವೆ. ಬಸ್ ನಿಲ್ದಾಣ ಅವ್ಯವಸ್ಥೆ ಆಗಿರುವುದರಿಂದ ಬೇರೆ ಕಡೆ ಬಸ್ಸುಗಳು ನಿಲ್ಲುತ್ತವೆ. ಹಾಗಾಗಿ ಪ್ರಯಾಣಿಕರು ಇಲ್ಲಿಗೆ ಬರುವುದಿಲ್ಲ
ಗ್ರಾಮದ ಬಸ್ ನಿಲ್ದಾಣವು ವಿಶಾಲವಾದ ಆವರಣ ಇದ್ದೂ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ಕಸ ಕಡ್ಡಿ ಬೆಳೆದು ನಿಂತಿದೆ. ಬಸ್ ನಿಲ್ದಾಣ ಉಪಯೋಗಕ್ಕೆ ಬಾರದೆ ಇರುವುದರಿಂದ ರೈತರು ಉಳ್ಳಾಗಡ್ಡಿ ಹಾಕಿದ್ದಾರೆ. ದನಕರುಗಳು ಬಿಡು ಬಿಟ್ಟಿರುತ್ತವೆ. ಇದರಿಂದ ದುರ್ವಸನೆ ಬಿರುತ್ತಿದೆ. ಇದರಿಂದ ಬಸ್ ನಿಲ್ದಾಣ ಹಾಳು ಕೊಂಪೆಯಾಗಿದೆ.

ಇನ್ನು ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಈ ಬಸ್ ನಿಲ್ದಾಣ ಕುಡುಕರ ತಾಣವಾಗಿದೆ. ರಾತ್ರಿಯಾದರೆ ಕುಡುಕರು ಬಸ್ ನಿಲ್ದಾಣದಕ್ಕೆ ಬಂದು ಕುಡಿಯುತ್ತಾರೆ. ಇದರಿಂದ ಎಲ್ಲೆಂದರಲ್ಲಿ ಸಾರಾಯಿ ಪಾಕೇಟುಗಳು, ಬಾಟಲಿಗಳು, ಪೌಚುಗಳು ಕಾಣುತ್ತವೆ.
ಸರಕಾರದ ಅನುದಾನ ವ್ಯರ್ಥವಾದಂತಾಗಿದೆ. ಪ್ರಯಾಣಿಕರಿಗೆ ಬಸ್ ನಿಲ್ದಾಣ ಇದ್ದೂ ಇಲ್ಲದಂತಾಗಿದೆ. ಇಂತಹ ನಿಲ್ದಾಣ ನಿರ್ಮಾಣವಾದರೂ ಯಾಕೆ ಮಾಡಬೇಕಿತ್ತು? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಈ ದಿನ ಡಾಟ್ ಕಾಮ್‌ನೊಂದಿಗೆ ಪ್ರಯಾಣಿಕ ಶಂಕ್ರಪ್ಪ ಎಂಬುವವರು ಮಾತನಾಡಿ, “ಎರಡು ಮೂರು ವರ್ಷಗಳಿಂದ ಈ ಬಸ್ ನಿಲ್ದಾಣ ಹೀಗೆಯೇ ಇದೆ. ಬಸ್ ನಿಲ್ದಾಣ ಕಟ್ಟಿದರೆ ಸಾಲದು, ಸರಿಯಾಗಿ ನಿರ್ವಹಣೆಯು ಮಾಡಬೇಕು. ಸಾರಿಗೆ ಅಧಿಕಾರಿಗಳು ಇದ್ಯಾವುದನ್ನು ಮಾಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ | 2ಎ ಮೀಸಲಾತಿ ಹೋರಾಟದಲ್ಲಿ ಕಲ್ಲು ತೂರಾಟ, ಐವರು ಮೇಲೆ ಎಫ್‌ಐಆರ್
ರೋಣ ಡಿಪೋ ಮ್ಯಾನೇಜರ್ ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿ, “ಸಿಬ್ಬಂದಿಗಳ ಕೊರತೆ ಇದೆ. ಹಾಗಾಗಿ ಈ ರೀತಿಯಾಗಿದೆ. ಬೇರೆ ವ್ಯವಸ್ಥೆ ಮಾಡಿ ಸರಿಯಾಗಿ ನಿರ್ವಹಣೆ ಮಾಡಲಾಗುವುದು. ಇನ್ನೆರಡು ದಿನಗಳಲ್ಲಿ ಎಲ್ಲವನ್ನು ಸ್ವಚ್ಛತೆ ಮಾಡಿ, ಪ್ರಯಾಣಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಮಾಡಲಾಗುವುದು” ಎಂದು ಭರವಸೆ ನೀಡಿದ್ದಾರೆ.



ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.