ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಕೇವಲ ಪುಸ್ತಕ, ಓದಿಗೆ ಆದ್ಯತೆ ನೀಡಿದೆ, ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ. ದಾವಣಗೆರೆಯಲ್ಲಿ ಕ್ರೀಡಾ ಅಕಾಡೆಮಿ ಅಗತ್ಯ ಹೆಚ್ಚಾಗಿದೆ ಎಂದು ಇನ್‌ಸೈಟ್ಸ್ ಸಂಸ್ಥೆ ನಿರ್ದೇಶಕ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ ಬಿ ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ದಾವಣಗೆರೆ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 5ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆ-2024 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪಡುಕೋಣೆ ಅಕಾಡೆಮಿ ಮತ್ತು ದ್ರಾವಿಡ್ ಕ್ರೀಡಾ ಅಕಾಡೆಮಿಯಂತೆ ದಾವಣಗೆರೆಯಲ್ಲಿಯೂ ಕೂಡ ಕ್ರೀಡಾ ಅಕಾಡೆಮಿಯ ಅಗತ್ಯ ಹೆಚ್ಚಿದೆ. ಈ ಬಗ್ಗೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರು ಮತ್ತು ಸಂಸದರು ಆಸಕ್ತಿವಹಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ನಿರೀಕ್ಷೆಯಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ರಾಷ್ಟ್ರಮಟ್ಟದಲ್ಲಿ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವಿಸಿ ಪಾಲ್ಗೊಳ್ಳುವುದನ್ನು ನೋಡುತ್ತಿದ್ದೇವೆ. ಆದರೆ ಇದಕ್ಕೆ ಹೊರತಾಗಿ ಸಹಜವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ದೇಹದಾರ್ಢ್ಯ, ಕರಾಟೆಯಂತಹ ದೈಹಿಕ ಚಟುವಟಿಕೆಯಂತಹ ಬೆಳವಣಿಗೆ ಸ್ಪರ್ಧೆಗಳು ಅಗತ್ಯ. ಈ ರೀತಿಯಾಗಿ ಪ್ರತಿ ಮನೆಗಳಿಂದಲೂ ಕ್ರೀಡಾಪಟುಗಳು ತಯಾರಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
“ಮಕ್ಕಳನ್ನು ಕೇವಲ ಓದಿನಲ್ಲಿ ಮುಳುಗಿಸಿ ಸಿಇಟಿ, ನೀಟ್, ಜೆಇಇ ತರಹದ ಪರೀಕ್ಷೆಗಳಿಗೆ ಕೂರಿಸುವ ಜತೆಗೆ ಕರಾಟೆ, ಕಬ್ಬಡ್ಡಿ ಸೇರಿದಂತೆ ಸಂಗೀತ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಆದ್ಯತೆ ನೀಡಿ. ಇದು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನೂ ಕೂಡ ಹೆಚ್ಚಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಬಿಡದಿ | ಮಂಚನಾಯಕನಹಳ್ಳಿಯಲ್ಲಿ ಹೆಚ್ಚಿದ ಕಳ್ಳತನ ಪ್ರಕರಣ; ಪೊಲೀಸರ ನಿರ್ಲಕ್ಷ್ಯ, ಆರೋಪ
“ಲಕ್ಷಾಂತರ ವಿದ್ಯಾರ್ಥಿಗಳು ಕರಾಟೆ ಅಭ್ಯಸಿಸಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪರ್ಧೆಯನ್ನು ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ. ಇದು ದೇಶದ ಮೂಲೆ ಮೂಲೆಗೆ ತಲುಪಲಿ. ದಾವಣಗೆರೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಕ್ರೀಡಾ ಸಂಸ್ಕೃತಿ ಹುಟ್ಟುಹಾಕಿದೆ. ಹೊಸ ಕ್ರೀಡಾ ಯುಗಕ್ಕೆ ನಾಂದಿ ಹಾಡುತ್ತಿದೆ. ಫಿಟ್ ಇಂಡಿಯಾ ಮಾಡುತ್ತಿರುವ ನಿಮಗೆಲ್ಲರಿಗೂ ಒಳ್ಳೆಯದಾಗಲಿ” ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕರಾಟೆ ಸ್ಪರ್ಧೆ ಆಯೋಜಕ ರೆನ್ಸಿ ಹೆಚ್ ಮಲ್ಲಿಕಾರ್ಜುನ್, ಹೆಚ್ ಎಂ ಕಾರ್ತಿಕ್, ಚನ್ನಕೇಶವ, ಲೋಹಿತ್ ಕುಮಾರ್, ಸಿದ್ದೇಶ್, ರಘು, ಸುಭಾಷ್ ಹೆಚ್ ಪಿ ಹಾಗೂ ಕರಾಟೆ ತರಬೇತುದಾರರು, ಕ್ರೀಡಾಪಟುಗಳು ಇದ್ದರು.