20 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದ ಬಶರ್ ಅಲ್ ಅಸಾದ್ ಕುಟುಂಬ ಆಡಳಿತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದರೂ ಪ್ರಜಾಪ್ರಭುತ್ವಕ್ಕೆ ಹೆಚ್ಚು ಪೆಟ್ಟು ಬಿದ್ದಿರಲಿಲ್ಲ. ಈಗ ಹೋರಾಟಗಾರರ ಹೆಸರಿನಲ್ಲಿ ಬಂಡಾಯಗಾರರು ಅಧಿಕಾರ ಹಿಡಿಯುವ ತವಕದಲ್ಲಿದ್ದಾರೆ. ಇವರ ಆಡಳಿತದಿಂದ ಪ್ರಜಾಪ್ರಭುತ್ವ ಮಣ್ಣುಗೂಡುವುದರಲ್ಲಿ; ಅಮೆರಿಕ ಹಾಗೂ ಇಸ್ರೇಲ್ ಪರೋಕ್ಷವಾಗಿ ಮತ್ತಷ್ಟು ಬೇಳೆಬೇಯಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಇಸ್ರೇಲ್ನ ಅಧಿಕಾರ ಹಾಗೂ ರಕ್ತದಾಹಕ್ಕೆ ಈಗ ಮತ್ತೊಂದು ರಾಷ್ಟ್ರ ಅಂತ್ಯ ಕಂಡಿದೆ. ತನ್ನ ಪಾಡಿಗೆ ಅಭಿವೃದ್ಧಿ ಹೊಂದುವಂತಹ ಯಾವ ರಾಷ್ಟ್ರವನ್ನೂ ಅಮೆರಿಕ ಹಾಗೂ ಇಸ್ರೇಲ್ ಸಹಿಸುವುದಿಲ್ಲ. ಸಂಪನ್ಮೂಲ ಹಾಗೂ ಮಿಲಿಟರಿ ಶಕ್ತಿಯಲ್ಲಿ ಸುತ್ತಲಿನ ದೇಶವು ಬಲಾಢ್ಯವಾಗುವ ಸೂಚನೆ ಕಂಡುಬಂದರೆ ಅದನ್ನು ನಿರ್ಣಾಮ ಮಾಡಲು ಇವೆರಡು ರಾಷ್ಟ್ರಗಳು ಹೊಂಚು ಹಾಕುತ್ತಿರುತ್ತವೆ. ಪ್ಯಾಲಿಸ್ತೀನ್, ಲಿಬಿಯಾ ಸೇರಿದಂತೆ ಕೆಲವು ದೇಶಗಳನ್ನು ಬಹುತೇಕ ಅಸ್ಥಿರಗೊಳಿಸಿವೆ. ಇಸ್ರೇಲ್ನ ದುಷ್ಟತನದಿಂದ ಪ್ಯಾಲಿಸ್ತೀನ್ ತನ್ನದೆ ಭೂಮಿಯಲ್ಲಿ ನಿತ್ಯವೂ ನರಕ ಕಾಣುತ್ತಿದೆ. ಲಕ್ಷಾಂತರ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.
2011ರಲ್ಲಿ ಟ್ಯುನೇಷಿಯಾ, ಈಜಿಪ್ಟ್ ಸ್ವತಂತ್ರ ಆಡಳಿತದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಇದೇ ಸಂದರ್ಭದಲ್ಲಿ ಸಿರಿಯಾದಲ್ಲಿ ಕೂಡ ಎಲ್ಲ ರಾಷ್ಟ್ರಗಳಂತೆ ಅಧಿಕಾರದಾಹ, ಅರಾಜಕತೆ, ಭ್ರಷ್ಟಾಚಾರ ತಾಂಡವವಾಡುತ್ತಿತ್ತು. 30 ವರ್ಷ ದೇಶದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಹಫೇಜ್ ಅಲ್ ಅಸಾದ್ ತನ್ನ ಅಧಿಕಾರ ಉಳಿಸಿಕೊಳ್ಳಲು ಹಲವು ದಮನಕಾರಿ ಮಾರ್ಗಗಳನ್ನು ಅನುಸರಿಸಿದರು. ಹಫೇಜ್ ಹಾಗೂ ಇವರ ಹಿರಿಯ ಮಗನ ನಿಧನದಿಂದಾಗಿ ಲಂಡನ್ನಲ್ಲಿ ವೈದ್ಯಕೀಯ ಪದವಿ ಪಡೆದುಬಂದಿದ್ದ ಹಫೇಜ್ ಅವರ ಎರಡನೇ ಪುತ್ರ ಬಶರ್ ಅಲ್ ಅಸಾದ್ ಬಗ್ಗೆ ಅಲ್ಲಿನ ಜನ ಅಪಾರ ಭರವಸೆ ಹೊಂದಿದ್ದರು. ಆದರೆ, ಅಧಿಕಾರಕ್ಕೇರಿದ ಬಳಿಕ ತಂದೆಗಿಂತಲೂ ಹೆಚ್ಚು ದಬ್ಬಾಳಿಕೆ ಪ್ರದರ್ಶಿಸಿ ವಿರೋಧಿಗಳನ್ನು ಹತ್ತಿಕ್ಕಿದ್ದರು. ಇದರಿಂದ ಸಹಜವಾಗಿಯೇ ಆಂತರಿಕವಾಗಿ ಬಶರ್ ಅಲ್ ಅಸಾದ್ ವಿರುದ್ಧ ಆಕ್ರೋಶ ಹೆಚ್ಚಾಯಿತು.
ಇದನ್ನು ಸಂಪೂರ್ಣವಾಗಿ ಮಟ್ಟಹಾಕಲು ಬುದ್ಧಿವಂತಿಕೆಯಿಂದ ಬಳಸಿಕೊಂಡಿದ್ದು ಅಮೆರಿಕ ಹಾಗೂ ಇಸ್ರೇಲ್. ಆಂತರಿಕವಾಗಿ ಕ್ರೋದ ಹೆಚ್ಚುತ್ತಿರುವ ದೇಶಗಳನ್ನು ತನ್ನ ನಿಯಂತ್ರಣಕ್ಕೆ ತರಲು ಅಲ್ ಖೈದಾ ಎಂಬ ಸಂಘಟನೆಯನ್ನು ಹುಟ್ಟುಹಾಕುತ್ತದೆ. ಅಲ್ಖೈದಾಗೆ ಎಲ್ಲ ರೀತಿಯ ನೆರವು ಅಮೆರಿಕರಿಂದಲೇ ದೊರಕುತ್ತದೆ. ಸ್ಥಳೀಯ ಸರ್ಕಾರದಲ್ಲಿ ಅರಾಜಕತೆ ಸೃಷ್ಟಿಸಲು ಅಲ್ಲಿನ ಜನರನ್ನೆ ಬಂಡಾಯಗಾರರನ್ನಾಗಿ ಎತ್ತಿಕಟ್ಟುವುದು ಅಮೆರಿಕದ ಕುತಂತ್ರ. ಈ ಕೆಲಸವನ್ನು ಏಷ್ಯಾ, ಆಫ್ರಿಕಾ ಖಂಡಗಳಲ್ಲೂ ಹಲವು ವರ್ಷಗಳಿಂದ ಮಾಡುತ್ತಾ ಬರುತ್ತಿದೆ.
ಸಿರಿಯಾದಲ್ಲಿ ಬಶರ್ ಅಲ್ ಅಸಾದ್ ಸರ್ಕಾರದ ವಿರುದ್ಧ 28 ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇದರಲ್ಲಿ 20ಕ್ಕೂ ಹೆಚ್ಚು ಸಂಘಟನೆಗಳಿಗೆ ಅಮೆರಿಕ, ಇಸ್ರೇಲ್ ಪ್ರತ್ಯಕ್ಷ, ಪರೋಕ್ಷ ನೆರವು ನೀಡಿದೆ. ನಾಗರಿಕ ದಂಗೆಯಲ್ಲಿ ತೊಡಗಿಸಿಕೊಂಡಿರುವ ಜುಲಾನಿ ಎಂಬಾತ ಐಸಿಸ್ನ ಮಾಜಿ ನಾಯಕನಾಗಿದ್ದು, ಈತ ಸಿರಿಯಾ ಅಧ್ಯಕ್ಷ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದಾನೆ. ಅದಲ್ಲದೆ ಈತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಪಟ್ಟಿಯಲ್ಲಿ ಹೆಸರಿಸಿರುವ ಅಮೆರಿಕದ ತನಿಖಾ ತಂಸ್ಥೆ ಸಿಐಎ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಸಿರಿಯಾದಲ್ಲಿ 2011ರಿಂದ 2013ರವರೆಗೆ ಸಣ್ಣಪುಟ್ಟ ಸಂಘಟನೆಗಳು ಅಸಾದ್ ವಿರುದ್ಧ ಪ್ರತಿಭಟನೆ ನಡೆಸಿವೆ. 2013ರಿಂದ ಅಮೆರಿಕ ಒಬಾಮ ಸರ್ಕಾರ ಐಸಿಸ್, ಅಲ್ಖೈದ, ಹೆಚ್ಟಿಸಿ ಒಳಗೊಂಡ ಕೆಲವು ಸಂಘಟನೆಗಳ ಕಾರ್ಯಕರ್ತರಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತರಬೇತಿ, ಆರ್ಥಿಕ ನೆರವು ಎಲ್ಲವನ್ನು ನೀಡಿತು. ಎರಡು ವರ್ಷ ಹೋರಾಟ ನಡೆಸಿದ ಈ ಸಂಘಟನೆಗಳು ಡಮಾಸ್ಕಸ್ ಹತ್ತಿರದ ಅಲೆಪ್ಪೊವನ್ನು ವಶಪಡಿಸಿಕೊಂಡಿತು.
ರಷ್ಯಾ, ಇರಾನ್ ಪ್ರವೇಶ
ಜುಲಾನಿ ಸೇರಿದಂತೆ ಕೆಲವೊಂದು ಸಂಘಟನೆಗಳು ಅಲೆಪ್ಪೊವನ್ನು ವಶಪಡಿಸಿಕೊಂಡ ನಂತರ 2015ರಲ್ಲಿ ಸಿರಿಯಾ ಸರ್ಕಾರ ಇನ್ನೇನು ಪತನವಾಯಿತು ಎಂಬ ಸಂದರ್ಭದಲ್ಲಿ ರಷ್ಯಾ ಹಾಗೂ ಇರಾನ್ನ ಹೆಜ್ಬುಲ್ಲಾ, ಐಆರ್ಜಿಸಿ ಸಂಘಟನೆಗಳು ಮಧ್ಯ ಪ್ರವೇಶಿಸಿ ಸಿರಿಯಾದ ಎಸ್ಎಎ ಸೇನೆಗೆ ಬೆಂಬಲ ನೀಡುತ್ತವೆ. ಇವೆರಡು ದೇಶಗಳ ಸೇನೆ ಹಾಗೂ ಸಂಘಟನೆಗಳು ಐಸಿಸ್ ಹಾಗೂ ಸ್ಥಳೀಯ ಹೆಚ್ಟಿಸಿ ಹೋರಾಟವನ್ನು ನಿಯಂತ್ರಿಸುತ್ತವೆ. 2017ರ ಹೊತ್ತಿಗೆ ಸಿರಿಯಾ ಆಂತರಿಕ ದಾಳಿಯಿಂದ ಒಂದಷ್ಟು ಚೇತರಿಸಿಕೊಂಡಿತ್ತು. ಇದನ್ನು ಸಹಿಸದ ಅಮೆರಿಕವು ರಷ್ಯಾವನ್ನು ಮಾಧ್ಯಮಗಳ ಮೂಲಕ ಶತ್ರುಗಳಂತೆ ಬಿಂಬಿಸಿತ್ತು.
ಈ ಸುದ್ದಿ ಓದಿದ್ದೀರಾ? ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?
2018ರ ಹೊತ್ತಿಗೆ ದಂಗೆಗಳು ಕೊನೆಯಾಗುತ್ತವೆ. 2020ರಲ್ಲಿ ಟರ್ಕಿಯ ಅಸ್ತಾನ ಎಂಬಲ್ಲಿ ಇರಾನ್, ರಷ್ಯಾ, ಟರ್ಕಿ, ಸಿರಿಯಾ ಹಾಗೂ ಸರ್ಕಾರದ ಆಂತರಿಕ ಸಂಘಟನೆಗಳ ನಡುವೆ ಕದನ ವಿರಾಮಕ್ಕೆ ಒಪ್ಪಂದವೇರ್ಪಡುತ್ತದೆ. ಈ ನಡುವೆ ತಟಸ್ಥಗೊಂಡ ಸಿರಿಯಾದ ಇಡ್ಲಿಬ್ ಎಂಬಲ್ಲಿ 30ಕ್ಕೂ ಹೆಚ್ಚು ದೇಶಗಳಿಂದ ಉಗ್ರರನ್ನು ಒಟ್ಟುಗೂಡಿಸಲಾಗುತ್ತದೆ. ಇದಕ್ಕೆ ಅಮೆರಿಕ ಮತ್ತೆ ನೇರ ಕುಮ್ಮಕ್ಕು ನೀಡುತ್ತಿರುತ್ತದೆ. ಈ ನಡುವೆ 2020ರ ಫೆಬ್ರವರಿಯಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಶುರುವಾಗುತ್ತದೆ. ಉಕ್ರೇನ್ ವಿರುದ್ಧ ಯುದ್ಧ ಶುರುವಾದ ನಂತರ ಸಿರಿಯಾದ ಲಟಾಕ್ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತದೆ. ರಷ್ಯಾ ಸೇನೆ ವಾಪಸಾದ ನಂತರ ಇಡ್ಲಿಬ್ನಲ್ಲಿದ್ದ ಉಗ್ರರೆಲ್ಲರೂ ಮತ್ತೆ ಸಿರಿಯಾ ವಿರುದ್ಧ ಆಕ್ರಮಣ ಮಾಡಲು ಸಜ್ಜಾಗುತ್ತಾರೆ.
ಮತ್ತೊಂದು ಕಡೆ ಇಸ್ರೇಲ್ – ಹಮಾಸ್ ಯುದ್ಧ ಶುರುವಾದ ಸಂದರ್ಭದಲ್ಲಿ ಇಸ್ರೇಲ್ ಸೇನೆ ಇರಾನ್ನ ಹೆಜ್ಬುಲ್ಲಾ ಸಂಘಟನೆ ವಿರುದ್ಧ ಕೂಡ ದಾಳಿ ನಡೆಸುತ್ತದೆ. ಈ ಸಮಯದಲ್ಲಿಯೇ ಇಡ್ಲಿಬ್ನಲ್ಲಿದ್ದ ವಿವಿಧ ದೇಶದ ಉಗ್ರರು ಡಮಾಸ್ಕಸ್ನ ಅಲೆಪ್ಪೊ ಮೇಲೆ ನವೆಂಬರ್ 27ರಂದು ದಾಳಿ ನಡೆಯುತ್ತದೆ. ಈ ಉಗ್ರರಿಗೆ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದ ನಾಗರಿಕ ಸಂಘಟನೆಗಳು ಕೂಡ ಬೆಂಬಲ ನೀಡಿದ್ದವು. ಅಲೆಪ್ಪೊ ಮಧ್ಯ ಪ್ರಾಚ್ಯದ ಪ್ರಮುಖ ಕೈಗಾರಿಕಾ ನಗರ. ಅಲೆಪ್ಪೊ ನಂತರ ಹಮಾ ಹಾಗೂ ಹಾಮ್ಸ್ ನಗರಗಳನ್ನು ಬಂಡುಕೋರರು ಹಾಗೂ ನಾಗರಿಕ ಸಂಘಟನೆಗಳು ತಮ್ಮ ಕೈವಶ ಮಾಡಿಕೊಳ್ಳುತ್ತವೆ. ಪ್ರಮುಖ ನಗರಗಳಲ್ಲಿ ಬಂಡುಕೋರರು ನೆಲೆ ವಿಸ್ತರಿಸಿದ ನಂತರ ಅಧ್ಯಕ್ಷ ಬಶರ್ ಅಲ್ ಅಸಾದ್ ಅಧಿಕಾರವನ್ನು ತ್ಯಜಿಸಿ ರಷ್ಯಾಕ್ಕೆ ಪಲಾಯನಗೈದಿದ್ದಾರೆ.
ಇರಾನ್ನನ್ನು ದುರ್ಬಲಗೊಳಿಸಲು ಸಿರಿಯಾವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ತಾವೇ ಸೃಷ್ಟಿಸಿದ ಉಗ್ರರಿಂದ ಪರಿವರ್ತನೆಗೊಂಡ ಬಂಡುಕೋರರಿಗೆ ಅಮೆರಿಕ ಹಾಗೂ ಇಸ್ರೇಲ್ನ ತಂತ್ರ ಒಂದು ಹಂತದಲ್ಲಿ ಯಶಸ್ವಿಯಾಗಿದೆ. ‘ಗ್ರೇಟರ್ ಇಸ್ರೇಲ್’ ವಾದದ ಪ್ರಕಾರ ಸಿರಿಯಾ, ಕುವೈತ್, ಇರಾನ್ ಸೇರಿದಂತೆ ಪ್ರಮುಖ ದೇಶಗಳು ಇಸ್ರೇಲ್ನ ಭಾಗವಂತೆ. ಇದೇ ಕಪೋಲಕಲ್ಪಿತ ವಿಚಾರವನ್ನು ಇಸ್ರೇಲ್ ಎಲ್ಲೆಡೆ ಮಂಡಿಸುತ್ತಿದೆ. ಯೂಫ್ರೀಟಿಸ್ ನದಿ ತೀರದ ಭಾಗದ ಎಲ್ಲ ದೇಶಗಳು ತನ್ನದೆ ಎಂದು ಹೇಳುತ್ತದೆ. ಯೂಫ್ರೀಟಿಸ್ ನದಿ ಪಾಶ್ಚಿಮಾತ್ಯ ಏಷ್ಯಾದ ಪ್ರಮುಖ ನದಿಯಾಗಿದ್ದು, ಇರಾಕ್, ಸಿರಿಯಾ ಟರ್ಕಿ ಸೇರಿದಂತೆ ಐದು ದೇಶಗಳಲ್ಲಿ ಈ ನದಿ ಹರಿಯುತ್ತದೆ. ಎರಡೂವರೆ ಕೋಟಿಗೂ ಅಧಿಕ ಮಂದಿ ಈ ನದಿಯನ್ನು ಆಶ್ರಯಿಸಿದ್ದಾರೆ.
ಸಿರಿಯಾದಲ್ಲಿ ಕಟ್ಟುನಿಟ್ಟಿನ ಆಚರಣೆಗಳಿಲ್ಲ
ಬೇರೆ ಸಂಪ್ರದಾಯವಾದಿ ಇಸ್ಲಾಂ ದೇಶಗಳಿಗೆ ಹೋಲಿಸಿದರೆ ಸಿರಿಯಾದಲ್ಲಿ ಕಟ್ಟುನಿಟ್ಟಾದ ಆಚರಣೆಗಳು ಕಡಿಮೆ. ಅಲ್ಲಿನ ದೇಶದ ಸ್ತ್ರೀಯರು ಬುರ್ಖಾ ಹಾಕಿಕೊಳ್ಳುವ ಅಗತ್ಯವಿಲ್ಲ. ಬೇರೆ ಧರ್ಮದವರಿಗೂ ಹೆಚ್ಚು ಸ್ವಾತಂತ್ರ್ಯವಿದೆ. 30 ವರ್ಷ ದೇಶದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಹಫೇಜ್ ಅಲ್ ಅಸಾದ್ ಹಾಗೂ 20 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದ ಬಶರ್ ಅಲ್ ಅಸಾದ್ ಕುಟುಂಬ ಆಡಳಿತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದರೂ ಪ್ರಜಾಪ್ರಭುತ್ವಕ್ಕೆ ಹೆಚ್ಚು ಪೆಟ್ಟು ಬಿದ್ದಿರಲಿಲ್ಲ. ಈಗ ಹೋರಾಟಗಾರರ ಹೆಸರಿನಲ್ಲಿ ಬಂಡಾಯಗಾರರು ಅಧಿಕಾರ ಹಿಡಿಯುವ ತವಕದಲ್ಲಿದ್ದಾರೆ. ಇವರ ಆಡಳಿತದಿಂದ ಪ್ರಜಾಪ್ರಭುತ್ವ ಮಣ್ಣುಗೂಡುವುದರಲ್ಲಿ; ಅಮೆರಿಕ ಹಾಗೂ ಇಸ್ರೇಲ್ ಪರೋಕ್ಷವಾಗಿ ಮತ್ತಷ್ಟು ಬೇಳೆಬೇಯಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇನ್ನುಮುಂದೆ ನಾಗರಿಕರ ಮೇಲೆ ಮತ್ತಷ್ಟು ದಬ್ಬಾಳಿಕೆ ಶುರುವಾಗುತ್ತವೆ. ಅಭಿವೃದ್ಧಿ ಸಂಪೂರ್ಣ ಕುಂಠಿತಗೊಳ್ಳುತ್ತದೆ.
ನಾಗರಿಕ ದಂಗೆ ನಡೆದು ಸರ್ಕಾರ ಪತನ ಹೊಂದಿದ ರಾಷ್ಟ್ರಗಳಲ್ಲಿ ಜನರ ಹೋರಾಟದೊಂದಿಗೆ ಮೂಲಭೂತವಾದಿ ಸಂಘಟನೆಗಳೂ ಸೇರಿವೆ. ಅಸ್ತಿತ್ವಗೊಂಡಿರುವ ಹೊಸ ಸರ್ಕಾರಗಳ ಮೇಲೆ ಈ ಸಂಘಟನೆಗಳು ಪ್ರಭಾವ ಬೀರುವ, ಅವುಗಳ ಮುಖಂಡರು ಆಡಳಿತವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಯೆಮನ್, ಈಜಿಪ್ಟ್, ಸುಡಾನ್, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ನಾಗರಿಕ ದಂಗೆಗಳು ನಡೆದು ಅಲ್ಲಿನ ಪರಿಸ್ಥಿತಿ ಏನಾಗಿದೆ ಎಂಬುದನ್ನು ಜಗತ್ತು ನೋಡಿದೆ, ನಿತ್ಯವೂ ನೋಡುತ್ತಿದೆ. ಈ ರಾಷ್ಟ್ರಗಳ ಸಾಲಿಗೆ ಸಿರಿಯಾ ಕೂಡ ಸೇರ್ಪಡೆಗೊಳ್ಳಲಿದೆ.