ದಾವಣಗೆರೆ ಸೇರಿದಂತೆ ಜಿಲ್ಲೆಯ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು ಹಾಗೂ ಚನ್ನಗಿರಿ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಕೊಡುವುದಕ್ಕೆ ವಿಳಂಬ ಮತ್ತು ತಾತ್ಸಾರ ಮಾಡುತ್ತಿರುವುದನ್ನು ಪ್ರತಿಭಟಿಸಿ ದಾವಣಗೆರೆಯ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಧರಣಿ ನಡೆಸಿದರು.
ದಾವಣಗೆರೆಯಲ್ಲಿ ಸಚಿವರ ನಿವಾಸದ ಮುಂದೆ ನೆಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖಂಡರು “ದಾವಣಗೆರೆ ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮಗಳ ಗ್ರಾಮ ಪಂಚಾಯಿತಿಯಲ್ಲಿ ಎರಡು ವರ್ಷಗಳಾದರೂ ಇ-ಸ್ವತ್ತು ನೀಡುತ್ತಿಲ್ಲ. ಇದರಿಂದ ಹಳ್ಳಿಗಳ ಜನರಿಗೆ ಬಹುತೇಕ ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಸಾರ್ವಜನಿಕರಿಗೆ ತುರ್ತಾಗಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲು ಆದೇಶ ನೀಡಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಇದೇ ವೇಳೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ನಿವಾಸದ ಮುಂದೆ ದೆಹಲಿ ಚಳುವಳಿಯ ಭಾಗವಾಗಿ ಜಗ್ಗಿತ್ ಸಿಂಗ್ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಸಂಸತ್ ಅಧಿವೇಶನದಲ್ಲಿ ಸದರಿ ವಿಷಯದ ಬಗ್ಗೆ ಪ್ರಸ್ತಾಪಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು.
“ದೆಹಲಿಯ ಗಡಿಭಾಗದ ಖಾನೌರಿ ಗಡಿಯಲ್ಲಿ ಇಡೀ ರಾಜ್ಯದ ರೈತರು ಉಪವಾಸ ಸತ್ಯಾಗ್ರಹ ಮತ್ತು ಧರಣಿ ಮಾಡುತ್ತಿದ್ದು, ಕೇಂದ್ರ ಸರ್ಕಾರ ಇದನ್ನು ಲೆಕ್ಕಿಸುತ್ತಿಲ್ಲ. ಕೇಂದ್ರ ಈ ಹಿಂದೆ ಹೇಳಿದ ಎಂಎಸ್‌ಪಿ, ಬೆಂಬಲಬೆಲೆ ಖಾತ್ರಿ ಮಾಡುತ್ತೇವೆಂದು ಸುಳ್ಳು ಹೇಳಿ, ಅಧಿಕಾರಕ್ಕೆ ಬಂದಿರುತ್ತಾರೆ. ಸರ್ವೋಚ್ಚ ನ್ಯಾಯಾಲಯ ರೈತರ ಸಮಸ್ಯೆ ಇತ್ಯರ್ಥಪಡಿಸಿ, ಚಳವಳಿಯನ್ನು ತೆರವುಗೊಳಿಸಲು ಸೂಚಿಸಿದ್ದು, ಈವರೆಗೂ ಕೇಂದ್ರ ಸರ್ಕಾರ ಯಾವುದೇ ಕಾನೂನಾತ್ಮಕ ನಿರ್ಣಯವನ್ನು ತೆಗೆದುಕೊಂಡಿರುವುದಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಿ ಗಮನ ಸೆಳೆಯಬೇಕು” ಎಂದು ಸಂಸದರಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕ್ರೀಡೆ ಜೀವನದ ಅವಿಭಾಜ್ಯ ಅಂಗ: ಜಿ ಬಿ ವಿನಯ್ ಕುಮಾರ್
ಪ್ರತಿಭಟನೆಯಲ್ಲಿ ಮುಖಂಡರಾದ ಬಲ್ಲೂರು ರವಿಕುಮಾರ್, ರಾಂಪುರದ ಬಸವರಾಜ್, ಹೆಬ್ಬಾಳು ರಾಜಯೋಗಿ, ಮೀಯಾಪುರ ತಿರುಮಲೇಶ್, ನಾಗರಕಟ್ಟೆ ಜಯನಾಯ್ಕ, ನರಗನಹಳ್ಳಿ ಚೌಡಪ್ಪ, ದಶರಥ, ಸಾಣೇಕೆರೆ ಗುರುಮೂರ್ತಿ, ಸಾಣೇಕೆರೆ ಗುರುಮೂರ್ತಿ, ಶಿವಮೂರ್ತಿ, ಕರಿಬಸಪ್ಪ, ಪ್ರತಾಪ್ ಹಾಗೂ ಇತರರು ಇದ್ದರು.