ತೋಟದಮನೆಯ ಕುರಿ ರೊಪ್ಪಕ್ಕೆ ನುಗ್ಗಿದ ಚಿರತೆ 9 ಕುರಿಗಳ ಬಲಿ ಪಡೆದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಸುರುಗೇನಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಕೃಷ್ಣಪ್ಪ ಎಂಬ ರೈತರಿಗೆ ಸಂಬಂಧಿಸಿದ ಕುರಿಗಳ ರೊಪಕ್ಕೆ ತಡರಾತ್ರಿ ನುಗ್ಗಿದ ಚಿರತೆ ಹತ್ತಾರು ಕುರಿಗಳ ಮಧ್ಯೆ 9 ಕುರಿಗಳ ಕುತ್ತಿಗೆ, ಹೊಟ್ಟೆ ಬಗೆದು ಬಲಿ ಪಡೆದಿದೆ. ಅಂದಾಜು ಒಂದೂವರೆ ಲಕ್ಷ ಬೆಲೆ ಬಾಳುವ ಕುರಿಗಳು ರೈತನ ಪಾಲಿಗೆ ನಷ್ಟ ತಂದಿದೆ.
ಈಗಾಗಲೇ ಸುರುಗೇನಹಳ್ಳಿ ಗ್ರಾಮದ ಸುತ್ತಮುತ್ತಲೂ ಇರುವ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಚಿರತೆಗಳು ಈ ಭಾಗದ ರೈತರಲ್ಲಿ ಆತಂಕ ತಂದಿದೆ. ಈ ಹಿಂದೆ ಬ್ಯಾಟಪ್ಪನಪಾಳ್ಯ ಗ್ರಾಮದಲ್ಲಿ ಕುರಿಗಳು, ಮೇಕೆಗಳ ಬಳಿ ಪಡೆದ ಘಟನೆ ನಡೆದಿತ್ತು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡರು.
ಸುರುಗೇನಹಳ್ಳಿ ಪ್ರೌಢಶಾಲೆಯ ಸಮೀಪದಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿತ್ತು. ಕಡಬ ಹೋಬಳಿ ಸೇರಿದಂತೆ ಹಲವು ಬಾರಿ ಚಿರತೆಗಳು ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿವೆ. ಎಲ್ಲಾ ಪ್ರಕರಣದ ಹಿನ್ನಲೆ ಇಲ್ಲಿರುವ ಚಿರತೆ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಚುರುಕುಗೊಳ್ಳಬೇಕು ಎಂದು ರೈತ ಅಶೋಕ್ ಆಗ್ರಹಿಸಿದರು
“ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಮೂಲಕ ಬದುಕು ಕಟ್ಟಿಕೊಂಡ ಬಡ ರೈತರಿಗೆ ಚಿರತೆ ಹಾವಳಿ ತೀವ್ರ ನಷ್ಟ ತಂದಿದೆ. ದಿಢೀರ್ ಈ ನಷ್ಟ ಇಡೀ ಜೀವನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹತ್ತು ಸಾವಿರ ಬೆಲೆ ಬಾಳುವ ಕುರಿಗೆ ಮೂರು ಸಾವಿರ ಕೊಟ್ಟರೆ ಪ್ರಯೋಜನವಿಲ್ಲ. ಕುರಿ ಮೇಕೆಗೆ ಶೇಕಡಾ 30 ರಷ್ಟು ಪರಿಹಾರ ಸಿಗುತ್ತಿದೆ. ಸರ್ಕಾರ ಕೂಡಲೇ ಕಾಡು ಪ್ರಾಣಿ ದಾಳಿಗೆ ಶೇಕಡಾ 100 ರಷ್ಟು ಪರಿಹಾರ ನೀಡಬೇಕು ಎಂದು ರೈತ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಒತ್ತಾಯಿಸಿದ್ದಾರೆ.
